ಬೆಂಗಳೂರು: ಅನ್ನಭಾಗ್ಯ ಯೋಜನೆಗೆ (Annabhagya Scheme) ಚಾಲನೆ ದೊರೆತು 25 ದಿನಗಳ ಅವಧಿಯಲ್ಲಿ 1 ಕೋಟಿ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ಹೊಸ ಪಡಿತರ ಚೀಟಿ (New Ration Card) ವಿತರಣೆಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ರೇಷನ್ ಕಾರ್ಡ್ ತಿದ್ದುಪಡಿ (Ration card correction), ರದ್ದತಿ, ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಆದಷ್ಟು ಬೇಗ ಹಣದ ಬದಲಿಗೆ ಅಕ್ಕಿ ಕೊಡಲಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ (KH Muniyappa) ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಕೆ.ಎಚ್. ಮುನಿಯಪ್ಪ, ಯೆಲ್ಲೊ ಬೋರ್ಡ್ ಕಾರು (Yellow Board Car) ಹೊಂದಿರುವವರಿಗೆ ಕಾರ್ಡ್ ರದ್ದು ಆಗಿದ್ದರೆ, ಪರಿಶೀಲಿಸಿ ವಾಪಸ್ ನೀಡುವ ಬಗ್ಗೆ ನಿರ್ಧಾರ ಮಾಡುತ್ತೇವೆ. ಯೆಲ್ಲೋ ಬೋರ್ಡ್ ಹೊಂದಿರುವವರು ಜೀವನಕ್ಕಾಗಿ ದುಡಿಯಲು ಕಾರ್ ತೆಗೆದುಕೊಂಡಿರುತ್ತಾರೆ. ಹೀಗಾಗಿ ಅವರ ಕಾರ್ಡ್ ರದ್ದು ಮಾಡೋದಿಲ್ಲ. ವೈಟ್ ಬೋರ್ಡ್ ಕಾರು (White board car) ಹೊಂದಿರುವವರ ಕಾರ್ಡ್ ರದ್ದು ಆದೇಶವನ್ನು ವಾಪಸ್ ಪಡೆಯುವುದಿಲ್ಲ ಎಂದು ಸಚಿವ ಮುನಿಯಪ್ಪ ಹೇಳಿದರು.
ಇದನ್ನೂ ಓದಿ: HD Kumaraswamy : ಕುಮಾರಸ್ವಾಮಿ ರಿಟರ್ನ್ಸ್ ವಿತ್ ಚಾರ್ಜ್‌ಶೀಟ್; ಸರ್ಕಾರದ ಮೇಲೆ ಮಿಡ್‌ನೈಟ್ ಪ್ರಹಾರ!
ಈ ಹಿನ್ನೆಲೆಯಲ್ಲಿ ಜುಲೈ ಅಂತ್ಯಕ್ಕೆ ಬಾಕಿ ಇರುವ 2,95,986 ಪಡಿತರ ಚೀಟಿ ವಿಲೇವಾರಿಗೆ ಕ್ರಮ ವಹಿಸಲಾಗಿದೆ. ಆಂಧ್ರ ಮಾದರಿಯಲ್ಲಿ ವೈದ್ಯಕೀಯ ಚಿಕಿತ್ಸೆ ಕಾರಣಕ್ಕೆ ಬಿ ಕಾರ್ಡ್ ಹಾಗೂ ಆಹಾರ ಪಡೆಯುವವರಿಗೆ ಎ ಕಾರ್ಡ್ ವಿತರಣೆ ಮಾಡಲಾಗುತ್ತದೆ. ತುರ್ತು ವೈಧ್ಯಕೀಯ ಕಾರಣಗಳಿಗೆ ಹೊಸ ಪಡಿತರ ಚೀಟಿ ನೀಡಿಕೆಗೆ ಅನುಮತಿ ಕೊಡಲಾಗಿದೆ ಎಂದು ತಿಳಿಸಿದರು.
3.50 ಕೋಟಿ ಫಲಾನುಭವಿಗಳಿಗೆ ಅನುಕೂಲ
ಅನ್ನಭಾಗ್ಯ ಯೋಜನೆಯು ಒಂದು ಕೋಟಿ ಫಲಾನುಭವಿಗಳನ್ನು ತಲುಪಿದೆ. ಒಂದು ತಿಂಗಳಾದರೂ ಪಡಿತರ ಪಡೆಯದೇ ಇರುವ ಫಲಾನುಭವಿಗಳ ಸಂಖ್ಯೆ 5,32,349 ಇದೆ. ಅಂತ್ಯೋದಯ ಅನ್ನ ಪಡಿತರ ಚೀಟಿದಾರರಲ್ಲಿ ಮೂರು ಸದಸ್ಯರಿಗಿಂತ ಕಡಿಮೆ ಇರುವ ಫಲಾನುಭವಿಗಳ ಸಂಖ್ಯೆ 3,40,425 ಇದೆ. ಇವರ ಖಾತೆ ಚಾಲ್ತಿಯಲ್ಲಿ ಇಲ್ಲದಿರುವ ಹಾಗೂ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆಯಾಗದಿರುವ ಕಾರಣ ಇವರ ಕಾರ್ಡ್‌ಗಳು ಅನರ್ಹವಾಗಿ ಬದಲಾಗಿವೆ. ಅನರ್ಹ ಪಡಿತರ ಚೀಟಿಗಳು 19,27,226 ಆಗಿರುತ್ತದೆ. ರಾಜ್ಯದಲ್ಲಿ 1.28 ಕೋಟಿ ಪಡಿತರ ಚೀಟಿ ಕುಟುಂಬಗಳಲ್ಲಿ 442 ಕೋಟಿ ಫಲಾನುಭವಿಗಳಿದ್ದಾರೆ. ಇಲ್ಲಿವರೆಗೆ 1 ಕೋಟಿ ಕುಟುಂಬಗಳಿಗೆ ರೂ. 566.00 ಕೋಟಿ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ 3.50 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ಅರಿಯರ್ಸ್ ಹಾಕಲ್ಲ
28 ಲಕ್ಷ ಕಾರ್ಡ್‌ಗಳಿಗೆ ಹಿಂಬಾಕಿ (ಅರಿಯರ್ಸ್) ಹಣ ಹಾಕುವುದಿಲ್ಲ. ಅವರ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಆಗಬೇಕು. ಆದಾದ ಬಳಿಕ ಅವರ ಖಾತೆಗೆ ಹಣ ಹಾಕುತ್ತೇವೆ ಎಂದು ಸಚಿವ ಮುನಿಯಪ್ಪ ಸ್ಪಷ್ಟನೆ ನೀಡಿದರು.
ಅಕ್ಕಿ ಜತೆ ರಾಗಿ, ಜೋಳ ಕೊಡುವ ಪ್ಲ್ಯಾನ್
2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರಿಂದ ರಾಗಿ, ಜೋಳ ಖರೀದಿಗೆ ಸರ್ಕಾರ ನಿರ್ಧಾರ ಮಾಡಿದೆ. 8 ಲಕ್ಷ ಟನ್ ರಾಗಿ, 3 ಲಕ್ಷ ಜೋಳ ಖರೀದಿ ಮಾಡುತ್ತೇವೆ. ಅಕ್ಕಿ ಜತೆ ಜೋಳ, ರಾಗಿಯನ್ನು ಕೂಡ ಪಡಿತರದಲ್ಲಿ ಕೊಡುತ್ತೇವೆ ಎಂದು ಸಚಿವ ಮುನಿಯಪ್ಪ ಹೇಳಿದರು.
ಇದನ್ನೂ ಓದಿ: DK Shivakumar : ಡಿ.ಕೆ ಶಿವಕುಮಾರ್‌ಗೆ ಬಿಗ್ ರಿಲೀಫ್; ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂಕೋರ್ಟ್
ಬ್ಯಾಂಕ್ ಅಕೌಂಟ್ ಇಲ್ಲದ 28 ಲಕ್ಷ ಕಾರ್ಡ್‌ದಾರರು ಖಾತೆ ಮಾಡಿಸಬೇಕು. ಈ ತಿಂಗಳು ಹಣ ಪಡೆಯಲು ಅವರು ಅನರ್ಹರಾಗುತ್ತಾರೆ. ಅವರಿಗೆ ಈ ತಿಂಗಳ ಹಣ ಮುಂದಿನ ತಿಂಗಳು ಕೊಡಲ್ಲ. ಅಕೌಂಟ್ ಆದ ಮೇಲೆ ಆ ತಿಂಗಳಿಂದಲೇ ಹಣ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.