Site icon Vistara News

New Year 2023 | ಹೊಸ ವರ್ಷಕ್ಕೆ ರಾಜಧಾನಿಯಲ್ಲಿ ಖಾಕಿ ಹೈ ಅಲರ್ಟ್‌; ಏನೆಲ್ಲ ಇದೆ ರೂಲ್ಸ್‌?

New year celebration

ಬೆಂಗಳೂರು: ಹೊಸ ವರ್ಷಾಚರಣೆಗೆ (New Year 2023) ದಿನಗಳು ಬಾಕಿ ಇದ್ದು, ಬೆಂಗಳೂರು ನಗರ ಪೂರ್ತಿ ಬಂದೋಬಸ್ತ್ ಕೈಗೊಂಡಿರುವ ಖಾಕಿ ಪಡೆ ಯಾವುದೇ ಸಣ್ಣ ಅನಾಹುತಕ್ಕೂ ಅವಕಾಶ ನೀಡಬಾರೆಂದು ಧೃಡ ಸಂಕಲ್ಪ ಮಾಡಿದ್ದಾರೆ. ಇದಕ್ಕಾಗಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಮೇಲೆ ಸಭೆ ನಡೆಸಿರುವ ಬೆಂಗಳೂರು ಕಮಿಷನರ್ ಗುರುವಾರ ಸುದ್ದಿಗೋಷ್ಠಿ ನಡೆಸಿ, ಬಂದೋಬಸ್ತ್ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಿದ್ದಾರೆ.

ಹೊಸ ವರ್ಷಕ್ಕೆ ಹೈ ಅಲರ್ಟ್‌ ಆಗಿರುವ ಬೆಂಗಳೂರು ಪೊಲೀಸರು, ಅತಿ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಾದ ಎಂಜಿ ರೋಡ್‌ನಿಂದ ರೆಸಿಡೆನ್ಸಿ ರೋಡ್‌ವರೆಗೆ ಬ್ರಿಗೇಡ್ ರಸ್ತೆಯಲ್ಲಿ ಎಷ್ಟು ಪಬ್‌ಗಳಿವೆ, ಅಂದಾಜು ಎಷ್ಟು ಮಂದಿ ಸೇರಬಹುದೆಂಬ ಎಂಬ ಮಾಹಿತಿ ಕಲೆ ಹಾಕಿದ್ದಾರೆ. ಅದರಂತೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ನಗರಾದ್ಯಂತ ಡಿಸಿಪಿ, ಎಸಿಪಿ, ಪೊಲೀಸ್ ಇನ್ಸ್‌ಪೆಕ್ಟರ್‌, ಸಬ್ ಇನ್ಸ್‌ಪೆಕ್ಟರ್‌ ಸೇರಿದಂತೆ 8,500 ಸಿಬ್ಬಂದಿಯನ್ನು ನ್ಯೂ ಇಯರ್ ಬಂದೋಬಸ್ತ್‌ಗಾಗಿ ನಿಯೋಜನೆ ಮಾಡಿದ್ದಾರೆ.

ಉಳಿದಂತೆ ಪಬ್ ಮಾಲೀಕರಿಗೆ ಹೆಚ್ಚಿನ ಸಿಸಿಟಿವಿ ಅಳವಡಿಸುವ ಜತೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಪ್ರಮುಖವಾಗಿ ಮಹಿಳೆಯರು ಹಾಗೂ ಮಕ್ಕಳಿಗೆ ಭದ್ರತೆ ದೃಷ್ಟಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬ್ರಿಗೇಡ್ ರೋಡ್‌ನ ಎರಡು ಬದಿ ಸೇರಿದಂತೆ ಅಕ್ಕಪಕ್ಕದ ರಸ್ತೆಗಳಲ್ಲಿ 500ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ಅಳವಡಿಕೆ, ಮೆಟಲ್ ಡಿಟೆಕ್ಟರ್‌ಗಳು, ಡ್ರೋನ್ ಬಳಕೆ ಮಾಡಲಾಗುತ್ತಿದೆ. ಈ ಬಾರಿ ಪಿಜಿ ಟೆರಸ್ ಮೇಲೆ ಯಾವುದೇ ರೀತಿಯ ಕೇಕ್ ಕಟ್ಟಿಂಗ್ ಮಾಡುವುದಾಗಲಿ, ಡಿಜೆ ಸೌಂಡ್ ಹೊರತು ಪಡಿಸಿ ಬೇರೆ ಲೌಡ್ ಸ್ಪೀಕರ್‌ಗಳು ಬಳಸದಂತೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ನಿಯಮಗಳನ್ನ ಉಲ್ಲಂಘಿಸಿದ್ದಲ್ಲಿ ಕ್ರಮಕೈಗೊಳ್ಳದಾಗಿ ಬೆಂಗಳೂರು ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ | New year Fashion | ಹೊಸ ವರ್ಷದ ನ್ಯೂ ಲುಕ್‌ಗೆ ಸಾಥ್‌ ನೀಡುವ 5 ಸ್ಟೈಲ್‌ ಸ್ಟೇಟ್‌ಮೆಂಟ್ಸ್‌

ಪಬ್ ಎಂಟ್ರಿಗೂ ಮುನ್ನ ಸ್ಕ್ಯಾನಿಂಗ್ ಮಸ್ಟ್
ಈ ಬಾರಿಯ ನ್ಯೂ ಇಯರ್ ಸೆಲೆಬ್ರೇಷನ್‌ನಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕ್ರಮ ಕೈಗೊಂಡಿರುವ ಪೊಲೀಸರು, ಅನುಚಿತ ವರ್ತನೆ ಮಾಡುವವರ ಮೇಲೆ ಹೆಚ್ಚಿನ ನಿಗಾ ವಹಿಸಲಿದ್ದಾರೆ. ಪಬ್, ರೆಸ್ಟೋರೆಂಟ್‌ಗಳಿಗೆ ಆಗಮಿಸುವವರ ಫೋಟೊ ಸೆರೆ ಹಿಡಿಯಲು ಸೂಚಿಸಿದ್ದಾರೆ. ಇದರಿಂದ ಸೆಲೆಬ್ರೇಷನ್ ವೇಳೆ ಮತ್ತು ಸೆಲೆಬ್ರೇಷನ್ ನಂತರ ನಡೆಯುವ ಅಹಿತಕರ ಘಟನೆಗಳಲ್ಲಿ ಭಾಗಿಯಾಗುವವರನ್ನು ಗುರುತಿಸಲು ಸಹಕಾರಿಯಾಗಲಿದೆ.

ಇದಕ್ಕಾಗಿ ಸೇಫ್ ಸಿಟಿ ಪ್ರಾಜೆಕ್ಟ್‌ ಅಡಿ ಅಳವಡಿಸಿರುವ ಸಿಟಿ ಕ್ಯಾಮೆರಾಗಳು ಸೇರಿದಂತೆ 1 ಲಕ್ಷ 70 ಸಾವಿರ ಸಿಸಿಟಿವಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಜತೆಗೆ ಯಾವುದೇ ವ್ಯಕ್ತಿ ಪರವಾನಗಿ ಇರುವ ವೆಪನ್‌ಗಳನ್ನು ಸಾರ್ವಜನಿಕ ಸ್ಥಳದಲ್ಲಿ ತೆಗೆದುಕೊಂಡು ಬರದಂತೆ ಸೂಚಿಸಿದ್ದಾರೆ. ಉಳಿದಂತೆ ಬೀಟ್ ವ್ಯವಸ್ಥೆ, ಮಹಿಳೆಯರ ರಕ್ಷಣೆ ಹಾಗೂ ಕ್ವಿಕ್ ಬ್ಯಾಕ್ ಅಪ್ ಟೀಂ, ಮಾದಕ ವಸ್ತುಗಳ ಸರಬರಾಜಿನ ಮೇಲೆ ನಿಗಾ ಸೇರಿದಂತೆ ನೂರಾರು ಸಿಬ್ಬಂದಿ ಮಫ್ತಿಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ.

ಸುಗಮ ಸಂಚಾರಕ್ಕೆ ಪ್ಲ್ಯಾನ್‌ ರೆಡಿ
ಜನರ ಸುರಕ್ಷತಾ ದೃಷ್ಟಿಯಿಂದ ಹೊಸ ವರ್ಷಾಚರಣೆಗೆ ಆಗಮಿಸುವವರು ಆದಷ್ಟು ಸಾರ್ವಜನಿಕ ಸೇವೆ ಬಳಸಲು ಮನವಿ ಮಾಡಲಾಗಿದೆ. ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಬಸ್ ಸೇವೆಗಳನ್ನು ರಾತ್ರಿ 2 ಗಂಟೆವರೆಗೆ ವಿಸ್ತರಿಸಲಾಗಿದೆ. ಹೊಸ ವರ್ಷದಂದು ರಾತ್ರಿ 9 ಗಂಟೆ ಬಳಿಕ ನೈಸ್‌ ರೋಡ್‌ನಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಿದ್ದಾರೆ. ಕುಡಿದ ಅಮಲಿನಲ್ಲಿ ವೀಲ್ಲಿಂಗ್ ಹಾಗೂ ಡ್ರ್ಯಾಗ್ ರೇಸ್ ಮಾಡುವ ಪುಂಡರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲು ತೀರ್ಮಾನಿಸಿರುವುದಾಗಿ ಸಂಚಾರಿ ವಿಭಾಗದ ವಿಶೇಷ ಆಯುಕ್ತ ಡಾ. ಸಲೀಂ ತಿಳಿಸಿದ್ದಾರೆ.

ಇದರೊಂದಿಗೆ ರಾತ್ರಿ 8 ಗಂಟೆಯ ನಂತರ ಅನಿಲ್ ಕುಂಬ್ಳೆ ಸರ್ಕಲ್‌ನಿಂದ ಮೆಯೋ ಹಾಲ್‌ವರೆಗೆ ಹಾಗೂ ಬ್ರಿಗೇಡ್ ರಸ್ತೆಯಿಂದ ಒಪೇರಾ ಜಂಕ್ಷನ್, ರೆಸಿಡೆನ್ಸಿಯಿಂದ ಮೆಯೋಹಾಲ್ ಕೋರ್ಟ್‌ವರೆಗೆ ಸಂಚಾರ ಮತ್ತು ವಾಹನ ನಿಲುಗಡೆಯನ್ನು ನಿಷೇಧ ಮಾಡಲಾಗಿದೆ. ಕೇವಲ ಪೊಲೀಸ್ ಹಾಗೂ ತುರ್ತು ಸೇವಾ ನಿರತ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನು ಪ್ರತಿಯೊಂದು ಟ್ರಾಫಿಕ್ ಸ್ಟೇಷನ್ ವ್ಯಾಪ್ತಿಯಲ್ಲಿ ರಾತ್ರಿ 11 ರಿಂದಲೇ ಡ್ರಂಕ್ ಆ್ಯಂಡ್ ಡ್ರೈವ್ ಬಗ್ಗೆ ಪರಿಶೀಲನೆ ನಡೆಸಲು ತೀರ್ಮಾನಿಸಿದ್ದಾರೆ. ಡಿಸೆಂಬರ್ 31 ರಂದು ನಗರಾದ್ಯಂತ ವಿಶೇಷ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಮೂವರು ಡಿಸಿಪಿಗಳು ಸೇರಿ 4 ಸಾವಿರ ಸಿಬ್ಬಂದಿ ಫೀಲ್ಡ್‌ನಲ್ಲಿ ಬಾಡಿ ವೋರ್ನ್ ಕ್ಯಾಮೆರಾ ಧರಿಸಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಇದನ್ನೂ ಓದಿ | New Year 2023 | ಹೊಸ ವರ್ಷಾಚರಣೆಯಂದು ಈ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ

Exit mobile version