ಬೆಂಗಳೂರು: ಹಳೆಯ ಸಿಹಿಕಹಿ ನೆನಪುಗಳೊಂದಿಗೆ ಹೊಸ ಭರವಸೆಯೊಂದಿಗೆ ನೂತನ ವರ್ಷವನ್ನು (New Year 2023) ಜನ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಕೊರೊನಾ ಆತಂಕದ ನಡುವೆಯೂ ಹೊಸ ವರ್ಷವನ್ನು ಜನ ಸಂಭ್ರಮದಿಂದ ಆಚರಿಸಿದ್ದಾರೆ.
ನಂದಿಗಿರಿಧಾಮಕ್ಕೆ ಹರಿದು ಬಂದ ಜನಸಾಗರ
ಚಿಕ್ಕಬಳ್ಳಾಪುರದಲ್ಲಿರುವ ನಂದಿಗಿರಿಧಾಮದಲ್ಲಿ ಹೊಸ ವರ್ಷದ ಮೊದಲನೆ ದಿನ ಜನಸಾಗರವೇ ಹರಿದು ಬಂದಿತ್ತು. ಗಿರಿಧಾಮದ ಬುಡದಿಂದ ಬೆಟ್ಟದ ತುದಿಯವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಜೋಗ್‌ಫಾಲ್ಸ್ ಕಣ್ತುಂಬಿಕೊಂಡ ಪ್ರವಾಸಿಗರು
ಹೊಸ ವರ್ಷಾಚರಣೆ ಜತೆಗೆ ವೀಕೆಂಡ್ ಕಾರಣ ಮಲೆನಾಡಿನ ಎಲ್ಲಿ ಕಣ್ಣು ಹಾಯಿಸಿದರೂ ಪ್ರವಾಸಿಗರ ದಟ್ಟಣೆ ಕಂಡು ಬರುತ್ತಿತ್ತು. ರಾಜ್ಯದ ಮತ್ತು ದೇಶದ ವಿವಿಧೆಡೆಯಿಂದ ಭಾರಿ ಸಂಖ್ಯೆಯಲ್ಲಿ ಜಗತ್ಪ್ರಸಿದ್ಧ ಜೋಗ ಜಲಪಾತ ವೀಕ್ಷಣೆ ಮಾಡಲು ಪ್ರವಾಸಿಗರು ಆಗಮಿಸಿದ್ದರು. ಶಾಲಾ ಮಕ್ಕಳು ಸೇರಿದಂತೆ ವಿವಿಧ ಪ್ರವಾಸಿಗರು ಜೋಗ ಜಲಪಾತದ ಸೌಂದರ್ಯ ಸವಿಯಲು ಬಂದಿದ್ದರು. ಹೊಸ ವರ್ಷದ ಮುನ್ನಾ ದಿನವೇ ಅಸಂಖ್ಯ ಪ್ರವಾಸಿಗರು ಇಲ್ಲಿನ ಹೋಮ್ ಸ್ಟೇ ಲಾಡ್ಜ್‌ಗಳಲ್ಲಿ ತಂಗಿದ್ದು, ಬೆಳಗ್ಗೆಯಿಂದಲೇ ಜೋಗ ಜಲಪಾತಕ್ಕೆ ಪ್ರವಾಹೋಪಾದಿಯಲ್ಲಿ ಧಾವಿಸಿದ್ದರು. ಜೋಗದಲ್ಲಿ ಈಗ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಪ್ರವಾಸಿಗರಿಗೆ ಶೌಚಾಲಯ, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯ ಕೊರತೆ ಎದುರಾಗಿದೆ.
ಚಾಮುಂಡಿ ಬೆಟ್ಟಕ್ಕೆ ಭಕ್ತರ ದಂಡು
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತರ ದಂಡು ದೌಡಾಯಿಸಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆದರು. ಮುಂಜಾನೆಯಿಂದಲೇ ತಾಯಿಯ ದರ್ಶನಕ್ಕೆ ಜನರು ಕಾದು ನಿಂತಿದ್ದು ಕಂಡು ಬಂತು. ಜನರನ್ನು ನಿಯಂತ್ರಿಸಲು 300 ರೂಪಾಯಿ ಟಿಕೆಟ್ ಕೌಂಟರ್‌ನ್ನು ದೇವಸ್ಥಾನದ ಆಡಳಿತ ಮಂಡಳಿ ತೆರೆದಿತ್ತು. 30, 100 ರೂ. ಪ್ರತ್ಯೇಕ ಕ್ಯೂ ತೆರೆಯಲಾಗಿತ್ತು.
ಇತ್ತ ಮೈಸೂರಿನ ಯೋಗ ನರಸಿಂಹಸ್ವಾಮಿ ದೇವಾಲಯದಲ್ಲಿ ತಿರುಪತಿ ಮಾದರಿಯ 2 ಲಕ್ಷ ಲಡ್ಡು ವಿತರಣೆ ಮಾಡಲಾಯಿತು. ಶ್ರೀ ಭಾಷ್ಯಂ ಸ್ವಾಮೀಜಿ ನೇತೃತ್ವದಲ್ಲಿ ಲಡ್ಡು ವಿತರಣೆ ನಡೆಸಲಾಯಿತು. ನಸುಕಿನಿಂದಲೂ ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು. ಮೈಸೂರು- ಹುಣಸೂರು ಹೆದ್ದಾರಿವರೆಗೂ ಕ್ಯೂ ಇತ್ತು. ಶ್ರೀ ಯೋಗ ನರಸಿಂಹಸ್ವಾಮಿ ದರ್ಶನಕ್ಕೆ ನೂಕುನುಗ್ಗಲು ಉಂಟಾಯಿತು.
ಮೂಕಾಂಬಿಕೆ, ಕೃಷ್ಣನ ದರ್ಶನ ಪಡೆಯಲು ಬಂದ ಭಕ್ತಸಾಗರ
ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ರಾಜ್ಯದಲ್ಲಿಯೇ ಶಕ್ತಿ ಕ್ಷೇತ್ರವಾಗಿ ಪ್ರಸಿದ್ಧವಾಗಿದೆ. ಪ್ರತಿ ವರ್ಷವೂ ಕೂಡ ಹೊಸ ವರ್ಷದಂದು ಇಲ್ಲಿಗೆ ಭಕ್ತರು ಆಗಮಿಸಿ ವಿಶೇಷ ದರ್ಶನ ಪಡೆಯುತ್ತಾರೆ. ಪಕ್ಕದ ಕೇರಳ ರಾಜ್ಯದ ಭಕ್ತರು ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನಕ್ಕಾಗಿ ಇಲ್ಲಿಗೆ ಪ್ರತಿ ವರ್ಷವು ಬರುವಂತೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ ತಮಿಳುನಾಡು ಹಾಗೂ ರಾಜ್ಯದ ನಾನಾ ಭಾಗದ ಭಕ್ತರು ದೇವಿ ದರ್ಶನಕ್ಕೆ ಸರತಿ ಸಾಲಿನಲ್ಲಿ ಮುಂಜಾನೆಯಿಂದಲೆ ನಿಂತಿದ್ದಾರೆ. ಹೊಸ ವರ್ಷಾಚರಣೆಗೆ ಆಗಮಿಸಿದ್ದ ಪ್ರವಾಸಿಗರು ಕೂಡ ಹೊಸ ವರ್ಷದ ವಿಶೇಷ ದರ್ಶನಕ್ಕಾಗಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಇತ್ತ ಬೆಳಗ್ಗಿನಿಂದಲೇ ಕೃಷ್ಣಮಠದಲ್ಲಿ ಪ್ರವಾಸಿಗರ ದಂಡು ಕಂಡು ಬಂತು. ಶನಿವಾರ 15 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದು ಭಾನುವಾರವೂ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆ ಇದೆ.
ಚಿಕ್ಕಮಗಳೂರಿನ ಶೃಂಗೇರಿ ಶಾರದಾಂಬೆ ದೇವಸ್ಥಾನ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಕಳೆದ ಮೂರು ದಿನಗಳಿಂದ ಪ್ರವಾಸಿಗರು ಕಾಫಿನಾಡಲ್ಲೇ ಬೀಡು ಬಿಟ್ಟಿದ್ದಾರೆ. ಶನಿವಾರ ಎಲ್ಲ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಹೋಮ್ ಸ್ಟೇ, ರೆಸಾರ್ಟ್‌ನಲ್ಲಿ ಹೊಸ ವರ್ಷಾಚರಣೆ ಬಳಿಕ ಧಾರ್ಮಿಕ ಕ್ಷೇತ್ರ ಶೃಂಗೇರಿ, ಹೊರನಾಡು, ಕಳಸಕ್ಕೆ ಭೇಟಿ ನೀಡುತ್ತಿದ್ದಾರೆ. 800ಕ್ಕೂ ಅಧಿಕ ಹೋಮ್ ಸ್ಟೇ, 40ಕ್ಕೂ ಅಧಿಕ ರೆಸಾರ್ಟ್ ಫುಲ್ ಆಗಿದ್ದವು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಮಣ್ಯಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಭಾನುವಾರವಾದ ಕಾರಣ ಕುಟುಂಬ ಸಮೇತ ಭಕ್ತರು ಆಗಮಿಸಿದರು. ಹೊಸ ವರ್ಷದ ಪ್ರಯುಕ್ತ ಬೆಳಗಿನಿಂದಲೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ನರಸಿಂಹ ಸಮೇತ ಸುಬ್ರಮಣ್ಯನ ದರ್ಶನಕ್ಕೆ ಮುಗಿಬಿದ್ದರು.
ಹಿಂಡು ಹಿಂಡಾಗಿ ಶಿವಗಂಗೆಗೆ ಬಂದ ಜನ
ದಕ್ಷಿಣ ಕಾಶಿ ಶಿವಗಂಗೆಗೆ ಹಿಂಡು ಹಿಂಡಾಗಿ ಜನರು ಆಗಮಿಸಿದ್ದರು. ಶಿವಗಂಗೆ ಬೆಟ್ಟದ ಶ್ರೀ ಗಂಗಾಧರೇಶ್ವರ ಸ್ವಾಮಿ ಮತ್ತು ಶ್ರೀ ಹೊನ್ನಾದೇವಿ ದರ್ಶನ ಪಡೆದರು.
ಇದನ್ನೂ ಓದಿ | New Year 2023 | ಗಣ್ಯರಿಂದ ದೇಶದ ಜನರಿಗೆ ಹೊಸ ವರ್ಷದ ಶುಭಾಶಯ; ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ, ರಾಹುಲ್ ಗಾಂಧಿ ಟ್ವೀಟ್