ಶಿವಮೊಗ್ಗ: ಇಲ್ಲಿನ ವಿದ್ಯಾನಗರದ ಮನೆಯೊಂದರಲ್ಲಿ ಹೊಸ ವರ್ಷದ ಸೆಲೆಬ್ರೆಷನ್ (New year 2023) ಗುಂಗಿನಲ್ಲಿರುವಾಗಲೇ ಗುಂಡಿನ ಸದ್ದು ಕೇಳಿ ಬಂದಿತ್ತು. ಏನಾಯಿತು ಎಂದು ನೋಡುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು. ಸಂಭ್ರಮದ ಮನೆಯಲ್ಲಿ ಕೆಲವೇ ಕ್ಷಣಗಳಲ್ಲಿ ಸೂತಕದ ಛಾಯೆ ಆವರಿಸಿತ್ತು. ಈಗ ಗುಂಡು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೂ ಮೃತಪಟ್ಟಿದ್ದಾರೆ.
ಗೋಪಾಲ್ ಗ್ಲಾಸ್ ಮಾಲೀಕ ಮಂಜುನಾಥ್ ಓಲೇಕರ್ (55) ಎಂಬುವರ ಮನೆಯಲ್ಲಿ ಹೊಸ ವರ್ಷದ ನಿಮಿತ್ತ ಜತೆಗೆ ಅವರ ಮಗ ಸಂದೀಪ್‌ನ ಬರ್ತ್‌ಡೇ ಪಾರ್ಟಿಯನ್ನು ಆಯೋಜಿಸಿದ್ದರು. ಪಾರ್ಟಿಗಾಗಿ ಸಂದೀಪ್ ಗೆಳೆಯರು ಮತ್ತು ಕುಟುಂಬಸ್ಥರು ಆಗಮಿಸಿದ್ದರು. ಹೊಸ ವರ್ಷಕ್ಕೆ ಮಂಜುನಾಥ್ ಮನೆಯಲ್ಲಿದ್ದ ಡಬಲ್ ಬ್ಯಾರೆಲ್ ಗನ್ ತೆಗೆದುಕೊಂಡು 12 ಗಂಟೆ ಸರಿಯಾಗಿ ಏರ್ ಫೈರ್ ಮಾಡಿ 2023ಕ್ಕೆ ಶುಭ ಕೋರಲು ಮುಂದಾಗಿದ್ದರು.
ಆದರೆ, ದುರಂತವೊಂದು ನಡೆದೆಹೋಯಿತು. ಗಾಳಿಯಲ್ಲಿ ಫೈರ್ ಮಾಡಲು ರೌಂಡ್ಸ್ ತುಂಬುತ್ತಿರುವ ವೇಳೆ, ಆ ಡಬ್ಬಲ್ ಬ್ಯಾರಲ್ ಗನ್ ಅಡ್ಡ ಹಿಡಿದು ಬುಲೆಟ್ ತುಂಬುತ್ತಿದ್ದಾಗ ಪಕ್ಕದಲ್ಲಿದ್ದ ಮಗನ ಸ್ನೇಹಿತ ವಿದ್ಯಾನಗರದ ವಿನಯ್ (30) ಎಂಬುವವನಿಗೆ ಆಕಸ್ಮಿಕವಾಗಿ ಹೊಟ್ಟೆಗೆ ಈ ಗುಂಡು ತಗುಲಿದೆ. ಇದನ್ನು ಕಂಡು ಗಾಬರಿಗೊಂಡ ಮಂಜುನಾಥ್ ಕುಸಿದು ಬಿದ್ದಿದ್ದರು. ಅಲ್ಲದೆ, ಅಲ್ಲೇ ಹೃದಯಾಘಾತವಾಗಿ ಮೃತಪಟ್ಟರು.
ಮಂಜುನಾಥ್ ಉದ್ಯಮಿಯಾಗಿದ್ದರಿಂದ ಲೈಸೆನ್ಸ್ ಇರುವ ಡಬಲ್ ಬ್ಯಾರಲ್ ಗನ್ ಇದೆ. ಇವರು ಪ್ರತಿ ವರ್ಷ ಹೊಸ ವರ್ಷಾಚರಣೆ ವೇಳೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವುದು ವಾಡಿಕೆಯಾಗಿದೆ. ಅದರಂತೆ, ಶನಿವಾರವೂ ಗುಂಡು ಹಾರಿಸಲು ಗನ್ ತಯಾರಿ ಮಾಡಿಕೊಳ್ಳುತ್ತಿದ್ದು, ಬುಲೆಟ್‌ಗಳನ್ನು ಗನ್‌ಗೆ ಲೋಡ್ ಮಾಡುವ ಸಂದರ್ಭದಲ್ಲಿ ಪಕ್ಕದಲ್ಲಿ ಕುಳಿತಿದ್ದ ಮಗ ಸಂದೀಪ್ ಸ್ನೇಹಿತ ವಿನಯ್‌ಗೆ ಗುಂಡು ತಗುಲಿದೆ. ತಕ್ಷಣವೇ, ವಿನಯ್‌ನನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಈ ಅವಘಡದಿಂದಾಗಿ ಮಂಜುನಾಥ್ ಕುಟುಂಬ ಸೇರಿ ವಿನಯ್ ಕುಟುಂಬಸ್ಥರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಇದನ್ನೂ ಓದಿ | Road Accident | ಬಸ್-ಕಾರು ನಡುವೆ ಭೀಕರ ಅಪಘಾತ; ಮೂವರ ಸಾವು, ಒಬ್ಬ ಗಂಭೀರ