ಬೆಂಗಳೂರು: 2024ರ ಹೊಸ ವರ್ಷ ಸಂಭ್ರಮಾಚರಣೆಗೆ (Bengaluru News) ಬೆಂಗಳೂರಲ್ಲಿ ತಯಾರಿ ಜೋರಾಗಿದೆ. ಮಹಿಳೆಯರ ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಡುವೆ ಸೆಲೆಬ್ರೆಷನ್‌ಗೆ ಹಾಟ್ ಸ್ಪಾಟ್ ಆಗಿರುವ ಕೆಲ ಏರಿಯಾಗಳಲ್ಲಿ ಬೆಂಗಳೂರು ನಗರ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಈ ಮಧ್ಯೆ ಟ್ರಾಫಿಕ್ ಪೊಲೀಸರು ವಾಹನ ಸವಾರರಿಗೆ ಶಾಕ್‌ವೊಂದನ್ನು ನೀಡಿದ್ದಾರೆ. ತಾತ್ಕಾಲಿಕ ಟೋಯಿಂಗ್ ವಾಹನಗಳನ್ನು (Towing In bengaluru) ರಸ್ತೆಗಿಳಿಸಲಿದ್ದಾರೆ.
ಕುಡಿದ ಮತ್ತಿನಲ್ಲಿ ವಾಹನಗಳನ್ನು ಸಿಕ್ಕ ಸಿಕ್ಕಲ್ಲಿ ಪಾರ್ಕಿಂಗ್ ಮಾಡಿ ಹೋಗುವವರಿಗೂ ಶಾಕ್ ನೀಡಲು ಬೆಂಗಳೂರು ಸಂಚಾರಿ ಪೊಲೀಸರು ಸಿದ್ಧರಾಗಿದ್ದಾರೆ. ಡಿ.31ರ ರಾತ್ರಿಯಿಂದಲೇ ತಾತ್ಕಾಲಿಕವಾಗಿ ಟೋಯಿಂಗ್ ವಾಹನಗಳು ರಸ್ತೆಗಿಳಿಯಲಿವೆ. ಈ ಮೂಲಕ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಎಂಜಾಯ್ ಮಾಡಲು ಹೋದರೆ ಅಂತಹ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತದೆ. ಈ ಹಿಂದೆ ಟೋಯಿಂಗ್ ವಿರುದ್ಧ ದೂರುಗಳು ಬಂದ ಹಿನ್ನೆಲೆ ಜನಾಕ್ರೋಶ ಉಂಟಾದ ಕಾರಣಕ್ಕೆ ಸ್ಥಗಿತ ಮಾಡಲಾಗಿತ್ತು. ಇದೀಗ ಹೊಸ ವರ್ಷ ಹಿನ್ನೆಲೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ತಾತ್ಕಾಲಿಕವಾಗಿ ಟೋಯಿಂಗ್ ವಾಹನವನ್ನು ಬಳಕೆ ಮಾಡಲಾಗುತ್ತಿದೆ.
ಖಾಕಿ ಭದ್ರತೆಯೊಂದಿಗೆ ಸಿಸಿಟಿವಿ ಕಣ್ಣು
ಹೊಸ ವರ್ಷವನ್ನು ಸಂಭ್ರಮಿಸಲು ಬಹುತೇಕರು ಬ್ರಿಗೇಡ್ ರೋಡ್ , ಚರ್ಚ್ ಸ್ಟ್ರೀಟ್, ಎಂಜಿ.ರಸ್ತೆಗೆ ಬರುತ್ತಾರೆ. ಹೀಗಾಗಿ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ ಜತೆಗೆ ಸಿಸಿಟಿವಿ ಕಣ್ಗಾವಲು ಇರಲಿದೆ. ವಿವಿಧ ಸ್ಥಳಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಹೈ ಹ್ಯಾಂಡ್ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. 500 ಸಿಸಿಟಿವಿಯನ್ನು ಮಾನಿಟರಿಂಗ್ ಮಾಡಲು ಬ್ರಿಗೇಡ್ ರೋಡ್‌ನಲ್ಲಿ ತಾತ್ಕಾಲಿಕ ಕಂಟ್ರೋಲ್ ರೂಂ ಕೂಡ ತೆರೆಯಲಾಗಿದೆ.
ಮಹಿಳೆಯರಿಗಾಗಿ ಸೇಫ್ಟಿ ಐಲ್ಯಾಂಡ್
ಮಹಿಳೆಯರ ಸುರಕ್ಷತೆಯ ಕಾರಣಕ್ಕೆ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಎಂ.ಜಿ ರೋಡ್‌ನಲ್ಲಿ ಸುಮಾರು 16 ಸೇಫ್ಟಿ ಐಲ್ಯಾಂಡ್ ಮಾಡಲಾಗಿದೆ. ಸೇಫ್ಟಿ ಐಲ್ಯಾಂಡ್‌ನಲ್ಲಿ ಮಹಿಳೆಯರಿಗಾಗಿ ಬೆಡ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಸಿಬ್ಬಂದಿ ನಿಯೋಜನೆ
ನ್ಯೂ ಇಯರ್ ಸೆಲೆಬ್ರೇಷನ್‌ಗಾಗಿಯೇ ಬ್ರಿಗೇಡ್, ಎಂ.ಜಿ ರೋಡ್‌ಗಳಲ್ಲಿ ಸುಮಾರು 3,500 ಪೊಲೀಸ್ ಸಿಬ್ಬಂದಿ ಹಾಗೂ ಕೋರಮಂಗಲ, ಇಂದಿರಾನಗರ ಸೇರಿ ಇತರೆ ಏರಿಯಾದಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ