ಬೆಳಗಾವಿ: ನವಜಾತ ಗಂಡು ಶಿಶುವೊಂದನ್ನು (Newborn baby) ಪ್ಲಾಸ್ಟಿಕ್ ಕವರ್‌ನಲ್ಲಿಟ್ಟು ಮರಕ್ಕೆ ನೇತು ಹಾಕಿ ಹೋಗಿರುವ ಪ್ರಕರಣ ಖಾನಾಪುರ ತಾಲೂಕಿನ ನೆರಸಾ ಗೌಳಿವಾಡ ಗ್ರಾಮದಲ್ಲಿ ನಡೆದಿದೆ.
ಮಗು ಅಳುವ ಶಬ್ದ ಕೇಳಿದ್ದರಿಂದ ಆಶಾ ಕಾರ್ಯಕರ್ತೆ ಸತ್ಯವತಿ ದೇಸಾಯಿ ಎಂಬುವರು ಅಲ್ಲಿ ಹೋಗಿ ನೋಡಿದ್ದಾರೆ. ಆಗ ಅವರಿಗೆ ಶಿಶುವನ್ನು ಯಾರೋ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಮರಕ್ಕೆ ನೇತುಹಾಕಿದ್ದು ಕಾಣಿಸಿತು. ತಕ್ಷಣ ಆ್ಯಂಬುಲೆನ್ಸ್ ಕರೆಸಿ ತಾಲೂಕು ಆಸ್ಪತ್ರೆಗೆ ಶಿಶುವನ್ನು ರವಾನೆ ಮಾಡಲಾಯಿತು.
ಮಕ್ಕಳ ತಜ್ಞ ಡಾ. ಪವನ್ ಪೂಜಾರಿ ಅವರು ತಾಲೂಕು ಆಸ್ಪತ್ರೆಯಲ್ಲಿ ಶಿಶುವಿಗೆ ಚಿಕಿತ್ಸೆ ನೀಡಿದರು. ಶಿಶು 2.2 ಕೆಜಿ ತೂಕವನ್ನು ಹೊಂದಿದೆ. ಮಗುವಿನ ಕಣ್ಣಿನ ಮೇಲೆ ಪರಚಿದ ಗಾಯವಾಗಿದೆ. ಚಳಿ, ಜಿಟಿ ಜಿಟಿ ಮಳೆಯಿಂದ ಶಿಶುವಿನ ದೇಹ ತಂಪಾಗಿತ್ತು.
ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಶಿಶುವನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಶಿಶುವಿಗೆ ಚಿಕಿತ್ಸೆ ಮುಂದುವರಿದಿದೆ. ಇದು ಮೂರು ದಿನಗಳ ಶಿಶು ಎಂದು ಅಂದಾಜಿಸಲಾಗಿದೆ. ಆದರೆ, ಯಾರು ಈ ಶಿಶುವನ್ನು ಬಿಟ್ಟುಹೋಗಿದ್ದಾರೆ? ಯಾಕೆ ಬಿಟ್ಟು ಹೋಗಿದ್ದಾರೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ರಾಜಕಾಲುವೆಯಲ್ಲಿ ತೇಲಿ ಬಂತು ನವಜಾತ ಶಿಶುಗಳ ಮೃತದೇಹ