ಚಿಕ್ಕಬಳ್ಳಾಪುರ: ಮೃತ ನವಜಾತ ಶಿಶುವಿನೊಂದಿಗೆ (Newborn baby) ಮಾನಸಿಕ ಅಸ್ವಸ್ಥೆ ಆಟವಾಡುತ್ತಿದ್ದ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ಆಗ ತಾನೇ ಹುಟ್ಟಿದ ಮಗುವನ್ನು ನಗರದ ಕತ್ತಿರಿಗುಪ್ಪೆ ರಸ್ತೆಯ ಅಲ್ಪಸಂಖ್ಯಾತರ ಕಬರಸ್ಥಾನದ ಬಳಿ ಮರದ ಕೆಳಗೆ ಬಿಸಾಡಿ ಹೋಗಿದ್ದು, ಇದನ್ನು ಎತ್ತಿಕೊಂಡ ಮಾನಸಿಕ ಅಸ್ವಸ್ಥೆ ಅದರೊಂದಿಗೆ ಆಟವಾಡಿದ್ದಾಳೆ.
ಸ್ಥಳೀಯರು ಇದನ್ನು ಗಮನಿಸಿ ಕೂಡಲೇ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮಾನಸಿಕ ಅಸ್ವಸ್ಥೆಯೊಂದಿಗಿದ್ದ ಮೃತ ನವಜಾತು ಶಿಶುವನ್ನು ಪಡೆದು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಮೃತಪಟ್ಟು ಕೆಲವು ಗಂಟೆಗಳೇ ಕಳೆದಿವೆ ಎಂದು ಮಾಹಿತಿ ನೀಡಿದ್ದಾರೆ.
ವೈದ್ಯರು ಪರೀಕ್ಷಿಸಿದಾಗ ಅವಧಿಪೂರ್ವ ಜನನ ಎಂದು ತಿಳಿದು ಬಂದಿದ್ದು, ಏಳು ತಿಂಗಳಿಗೆ ಮಗು ಜನಿಸಿರಬಹುದೆಂದು ಅಂದಾಜಿಸಿದ್ದಾರೆ. ಪೂರ್ಣ ಪ್ರಮಾಣದ ಬೆಳವಣಿಗೆ ಆಗದೇ ಇರುವುದರಿಂದ ಮಗು ಉಸಿರುಗಟ್ಟಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಿಶುವಿನ ಹೆತ್ತವರು ಇಲ್ಲವೇ ಸಂಬಂಧಿಕರು ಎಸೆದು ಹೋಗಿರಬಹುದು ಎಂದು ಶಂಕಿಸಲಾಗಿದೆ. ಚಿಂತಾಮಣಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ನವಜಾತ ಶಿಶುವನ್ನು ಪಾಳು ಬಾವಿಗೆ ಎಸೆದ ತಾಯಿ: ಗ್ರಾಮಸ್ಥರಿಂದ ರಕ್ಷಣೆ; ಮಂಡ್ಯ ಜಿಲ್ಲೆಯಲ್ಲಿ ನಡೆದ ಘಟನೆ