Site icon Vistara News

Emergency Landing: ಮಹಿಳೆಗೆ ಹೃದಯ ಸಮಸ್ಯೆ; ಬೆಂಗಳೂರಿಂದ ದಿಲ್ಲಿಗೆ ಹೊರಟ ವಿಮಾನ ತುರ್ತು ಭೂಸ್ಪರ್ಶ

Emergency landing

#image_title

ಬೆಂಗಳೂರು: ಬೆಂಗಳೂರಿನಿಂದ ದಿಲ್ಲಿಗೆ ಹೊರಟಿದ್ದ ಇಂಡಿಗೋ ಏರ್‌ಲೈನ್ಸ್‌ (Indigo Airlines) ವಿಮಾನವೊಂದು ಬುಧವಾರ ತುರ್ತು ಭೂಸ್ಪರ್ಶ (Emergency landing) ಮಾಡಿದೆ. ವಿಮಾನದಲ್ಲಿ ದಿಲ್ಲಿಗೆ ಹೊರಟಿದ್ದ ಮಹಿಳೆಯೊಬ್ಬರಿಗೆ ಹೃದಯ ಸಮಸ್ಯೆ (Heart Problem) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಂಡು ಅವರನ್ನು ಉಪಚರಿಸಲಾಯಿತು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Bangalore International airport) ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ರೋಸಮ್ಮ ಎಂಬ 60 ವರ್ಷದ ಮಹಿಳೆ ಹತ್ತಿದ್ದರು. ಮನೆಯಿಂದ ವಿಮಾನ ನಿಲ್ದಾಣಕ್ಕೆ ಬಂದಿದ್ದ ಅವರು ಎಲ್ಲ ಭದ್ರತಾ ತಪಾಸಣೆಗಳ ಬಳಿಕ ಲಾಂಜ್‌ಗೆ ಬಂದು ಅಲ್ಲಿಂದ ಬಸ್ಸಿನ ಮೂಲಕ ವಿಮಾನದ ಬಳಿ ಬಂದು ಮೆಟ್ಟಿಲುಗಳನ್ನೇರಿ ವಿಮಾನ ಹತ್ತಿದ್ದರು.

ವಿಮಾನ ಬೆಂಗಳೂರಿನಿಂದ ದಿಲ್ಲಿಯತ್ತ ಹೊರಟು ರನ್‌ ವೇ ದಾಟಿ ಮೇಲೆ ಹಾರಿ ಸ್ವಲ್ಪ ಹೊತ್ತಾಗುತ್ತಿದ್ದಂತೆಯೇ ಇದ್ದಕ್ಕಿದ್ದಂತೆಯೇ ರೋಸಮ್ಮ ಅವರಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡಿತು. ಆಕೆ ಇದನ್ನು ಹೇಳದಿದ್ದರೂ ಅವರು ಸಂಕಟಪಡುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಉನ್ನತ ಸಿಬ್ಬಂದಿಗೆ ಮಾಹಿತಿ ನೀಡಿದರು.

ಆ ಕೂಡಲೇ ವಿಮಾನ ಸಿಬ್ಬಂದಿ ಮರಳಿ ಕೆಂಪೇಗೌಡ ವಿಮಾನ ನಿಲ್ದಾಣವನ್ನು ಸಂಪರ್ಕಿಸಿ ಸಮಸ್ಯೆಯನ್ನು ವಿವರಿಸಿದರು. ಆಗ ವಿಮಾನ ನಿಯಂತ್ರಕರು ವಿಮಾನದ ತುರ್ತು ಭೂಸ್ಪರ್ಶಕ್ಕೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು.

ಕಂಟ್ರೋಲರ್‌ ಸೂಚನೆಯಂತೆ ವಿಮಾನ ತುರ್ತು ಭೂಸ್ಪರ್ಶ ಮಾಡಿತು. ಆಗ ಮೊದಲೇ ಸಿದ್ಧಪಡಿಸಿಡಲಾಗಿದ್ದ ಆಂಬ್ಯುಲೆನ್ಸ್‌ ಮೂಲಕ ರೋಸಮ್ಮ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅದರ ನಡುವೆ ವಿಮಾನದಲ್ಲಿದ್ದ ಡಾ. ನಿರಂತರ ಗಣೇಶ್‌ ಎಂಬವರು ತುರ್ತು ಸಂದರ್ಭದಲ್ಲಿ ರೋಗಿಯ ನೆರವಿಗೆ ಬಂದರು.

ಮಹಿಳೆಯನ್ನು ಕೆಳಗಿಳಿಸಿದ ವಿಮಾನ ಮತ್ತೆ ದಿಲ್ಲಿಗೆ ಹಾರಿದೆ. ರೋಸಮ್ಮ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಚೇತರಿಸಿಕೊಳ್ಳುತ್ತಿರುವ ಮಾಹಿತಿ ಇದೆ.

ಇದನ್ನೂ ಓದಿ: Snake On Plane: ಹಾರುತ್ತಿದ್ದ ವಿಮಾನದಲ್ಲಿ ನಾಗರಹಾವು ಪತ್ತೆ, ತುರ್ತು ಭೂಸ್ಪರ್ಶದ ಬಳಿಕ ಓಡಿದ ಜನ

Exit mobile version