ನವ ದೆಹಲಿ: ಅದು ಅಕ್ಷರಶಃ ರಣವ್ಯೂಹ. ಆ ಒಂದು ಕಾರ್ಯಾಚರಣೆಗೆ ತಿಂಗಳ ಹಿಂದೆಯೇ ಸೀಕ್ರೇಟ್ ರೂಮ್ ರೆಡಿಯಾಗಿತ್ತು. ನಾಲ್ಕು ಗೋಡೆಗಳ ಆಚೆ ಮಾಹಿತಿ ಸೋರಿಕೆ ಆಗಬಾರದೂ ಅಂತ ಗೌಪ್ಯ ರಣತಂತ್ರ ಹಣೆಯಲಾಗಿತ್ತು. ಮನೆ, ಮಠ ಬಿಟ್ಟು ಗೌಪ್ಯ ಕೊಠಡಿ ಸೇರಿದ್ದ ಅಧಿಕಾರಿಗಳು ಊಟ, ನಿದ್ರೆ ಬಿಟ್ಟು ದೇಶ ವಿರೋಧಿಗಳಿಗೆ ಖೆಡ್ಡಾ ತೋಡಿದರು. ಕೊನೆಗೂ ಅವರ ಬೆವರಿನ ಶ್ರಮ ವ್ಯರ್ಥವಾಗಲಿಲ್ಲ. ಇದು ಎನ್ಐಎ (NIA Raid) ಮೊನ್ನೆ ದೇಶಾದ್ಯಂತ ನಡೆಸಿದ ಆಪರೇಷನ್ ಆಕ್ಟೋಪಸ್ ಕಾರ್ಯಾಚರಣೆ ಹಿಂದಿನ ಸೀಕ್ರೇಟ್ ಸ್ಟೋರಿ.
ಕಳೆದ ಗುರುವಾರ ಬೆಳ್ಳಂಬೆಳಗ್ಗೆ ದೇಶಕ್ಕೆ ದೇಶವೇ ಬೆಚ್ಚಿತ್ತು. ಮಿಂಚಿನಂತೆ ರಸ್ತೆಗಿಳಿದಿದ್ದ ಎನ್ಐಎ ನೋಡ ನೋಡುತ್ತಿದ್ದಂತೆ ಪಿಎಫ್‌ಐ ಸಂಘಟನೆಯ ಕಚೇರಿ ನಾಯಕರ ಮನೆ ಮೇಲೆ ಮುಗಿಬಿತ್ತು. ದೇಶ ವಿರೋಧಿ ಚಟುವಟಿಕೆ. ಭಯೋತ್ಪಾದನೆಗೆ ಕುಮ್ಮಕ್ಕು, ಉಗ್ರವಾದಕ್ಕೆ ಹಣ ಸಂಗ್ರಹ ಇನ್ನಿತರ ಸಂಚನ್ನು ಬಯಲೆಗೆಳೆದು ಹಲವರಿಗೆ ಕೈಕೋಳ ತೊಡಿಸಿತು. ಕರ್ನಾಟಕ, ದೆಹಲಿ, ಕೇರಳ, ತಮಿಳುನಾಡು ಸೇರಿ 15 ರಾಜ್ಯಗಳ 93ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಏಕಕಾಲಕ್ಕೆ ನಡೆದ ದಾಳಿಯಲ್ಲಿ ಒಟ್ಟು ಸಿಕ್ಕಿಬಿದ್ದವರು ಬರೋಬ್ಬರಿ 110 ಮಂದಿ.
ಅಜಿತ್ ದೋವಲ್ ನಾಯಕ
ಈ ಕಾರ್ಯಾಚರಣೆಯಲ್ಲಿ ವಿಶೇಷತೆ ಇದೆ. ಈ ಮೆಗಾ ರೇಡ್ಗೆ ತಿಂಗಳ ಹಿಂದೆಯೇ ಪ್ಲ್ಯಾನ್ ರೂಪುಗೊಂಡಿತ್ತು. ವಿದ್ರೋಹಿಗಳನ್ನ ಸೆದೆಬಡಿಯುವ ಈ ಸೀಕ್ರೇಟ್ ಆಪರೇಷನ್ಗೆ ಆಪರೇಷನ್ ಆಕ್ಟೋಪಸ್ ಎಂದು ಹೆಸರಿಡಲಾಗಿತ್ತು. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ ವೇಳೆ ಕಾಯ್ದುಕೊಂಡಿದ್ದಂತೆ ಈ ಕಾರ್ಯಾಚರಣೆ ವಿಚಾರದಲ್ಲೂ ಸೀಕ್ರೇಟ್ ಕಾಯ್ದುಕೊಳ್ಳಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಷಾ ಈ ಕಾರ್ಯಾಚರಣೆಯ ಸೂತ್ರಧಾರನಾದರೆ, ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್ ಇದರ ನೇತೃತ್ವ ವಹಿಸಿದ್ದರು.
ದೆಹಲಿಯಲ್ಲಿತ್ತು ಸೀಕ್ರೇಟ್ ವಾರ್ ರೂಂ..!
ಪಿಎಫ್ಐ ಜನ್ಮ ಜಾಲಾಡಿದ್ದ ಎನ್ಐಎ ಭಾರಿ ಕಾರ್ಯಾಚರಣೆಗೆ ಪ್ಲ್ಯಾನ್ ಸಿದ್ಧಪಡಿಸಿತ್ತು. ಇದಕ್ಕೆ ಅಮಿತ್ ಷಾ ಹಾಗೂ ಧೋವಲ್ ಜೋಡಿ ಪ್ಲ್ಯಾನ್ ರೂಪಿಸಿಕೊಟ್ಟಿತು. ಹಲವು ದಿನಗಳ ಹಿಂದೆಯೇ ದೆಹಲಿಯಲ್ಲಿ ವಾರ್ ರೂಂ ರೂಪಿಸಿ ಯಾರಿಗೂ ಮಾಹಿತಿ ತಿಳಿಯದಂತೆ ಎಚ್ಚರ ವಹಿಸಿತ್ತು. ಕಾರ್ಯಚರಣೆ ಹಿಂದಿನ ರಾತ್ರಿಯಷ್ಟೇ ಆಯಾ ಜಿಲ್ಲೆಗಳ ಎಸ್‌ಪಿ ಹಾಗೂ ಉನ್ನತ ಅಧಿಕಾರಿಗಳಿಗೆ ವಿಷಯ ತಿಳಿಸಲಾಗಿತ್ತು. ಆ ಮೂಲಕ ಯಾರೊಬ್ಬರೂ ಪರಾರಿಯಾಲು ಸಾಧ್ಯವಾಗದಂತೆ ವ್ಯೂಹ ಸಿದ್ಧಪಡಿಸಲಾಗಿತ್ತು. ರಾತ್ರೋ ರಾತ್ರಿ ಅಧಿಕಾರಿಗಳನ್ನು ತಂದು ಕೂಡಿಹಾಕಲಾಗಿತ್ತು. ಬೆಳಗಿನ ಜಾವ ದಾಳಿ ನಡೆಸುವವರೆಗೂ ಯಾರೊಬ್ಬರಿಗೂ ತಮ್ಮ ಟಾರ್ಗೆಟ್ ಯಾರೆಂಬುದು ತಿಳಿದಿರಲಿಲ್ಲ. ಅಷ್ಟರ ಮಟ್ಟಿಗೆ ಸೀಕ್ರೇಟ್ ಮೇಂಟೇನ್ ಮಾಡಲಾಗಿತ್ತು. ಈ ಸಂಘಟನೆಗಳ ಹಿಂದೆ ಪ್ರಭಾವಿ ಸಮುದಾಯ ಇರೋ ಕಾರಣ ಕಾರ್ಯಚರಣೆಗೆ ತೊಂದರಯಾಗದಂತೆ ಸ್ಥಳೀಯ ಪೊಲೀಸರನ್ನ ಬಳಸಿಕೊಳ್ಳಲಾಗಿತ್ತು.
ಇದೇ ಮೊದಲಲ್ಲ
ಶಾ ಹಾಗೂ ಧೋವಲ್ ಜೋಡಿಯ ಈ ಮೋಡಿ ಮೊದಲೇನಲ್ಲ. ಜಮ್ಮ-ಕಾಶ್ಮೀಕ್ಕೆ ನೀಡಲಾಗಿದ್ದ ವಿಶೇಶ ಸ್ಥಾನಮಾನ ಹಿಂಪಡೆಯುವಾಗಲೇ ಇವರಿಬ್ಬರೇ ಕಾರ್ಯತಂತ್ರ ರೂಪಿಸಿದ್ದರು. ತಿಂಗಳುಗಳ ಕಾಲ ಜಮ್ಮು ಮತ್ತು ಕಾಶ್ಮೀರ ನಾಯಕರನ್ನು ಗೃಹ ಬಂಧನಕ್ಕೊಳಪಡಿಸಿ, ಪ್ರತ್ಯೇಕತಾವಾದಿಗಳ ಕುತಂತ್ರ ಫಲಿಸದಂತೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ತಮ್ಮ ಸಾಹಸ ಅಭಿಯಾನವನ್ನು ಪೂರ್ಣಗೊಳಿಸುವ ಮೂಲಕ ಈ ಜೋಡಿ ಮೋಡಿ ಮಾಡಿದೆ.
ಇದನ್ನೂ ಓದಿ | NIA Raid | ಟೆರರಿಸ್ಟ್ ಜತೆ ಲಿಂಕ್, ಗ್ಯಾಂಗ್‌ಸ್ಟರ್‌ಗಳಿಗೆ ಸೇರಿದ 60 ಸ್ಥಳಗಳಲ್ಲಿ ಎನ್ಐಎ ರೇಡ್