ಬೆಂಗಳೂರು: ಅಜಾಗರೂಕತೆ, ನಿರ್ಲಕ್ಷ್ಯತೆಯ ಚಾಲನೆಯಿಂದ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ನೈಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ವೇಗದ ಮಿತಿ ನಿಗದಿಪಡಿಸಿ ಹಾಗೂ ಪ್ರತಿ ದಿನ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅಧಿಸೂಚನೆ ಹೊರಡಿಸಿದ್ದಾರೆ.
ನೈಸ್ ರಸ್ತೆಯಲ್ಲಿ ಉಂಟಾಗುತ್ತಿದ್ದ ಅಪಘಾತಗಳಿಗೆ ಈ ರಸ್ತೆಗಳಲ್ಲಿ ಚಲಿಸುವ ವಾಹನ ಸವಾರರು ಹಾಗೂ ಚಾಲಕರ ನಿರ್ಲಕ್ಷ್ಯತೆ, ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳಿಗೆ ವೇಗದ ಮಿತಿಯನ್ನು ನಿಗದಿಗೊಳಿಸಿ ಹಾಗೂ ಪ್ರತಿ ದಿನ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ವ್ಯವಸ್ಥೆಯನ್ನು ಆ.2 ರಿಂದ ಜಾರಿಗೆ ತರಲಾಗಿದ್ದು, ವಿವಿದ ಮಾದರಿಯ ವಾಹನಗಳಿಗೆ ನಿಗದಿಗೊಳಿಸಿರುವ ವೇಗದ ಮಿತಿಯ ವಿವರ ಈ ಕೆಳಕಂಡಂತಿದೆ.
"ಸಂಚಾರ ಸಲಹೆ / Traffic advisory" pic.twitter.com/RpdB6Le1xG
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) August 2, 2024
ವಾಹನವಾರು ನಿಗದಿಗೊಳಿಸಿರುವ ವೇಗದ ಮಿತಿಯ ವಿವರ
1. | ವಾಹನ ಚಾಲಕನೂ ಸೇರಿ 8ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳಿಗೆ (ಎಂ-1 ವರ್ಗದ ವಾಹನಗಳು) | 120 kmph |
2. | ವಾಹನ ಚಾಲಕನೂ ಸೇರಿ 9 ಕ್ಕಿಂತ ಹೆಚ್ಚು. ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳಿಗೆ (ಎಂ-2 & ಎಂ-3 ವರ್ಗದ ವಾಹನಗಳು) | 100 kmph |
3. | ಗೂಡ್ಸ್ ವಾಹನಗಳು (ಎನ್ ವರ್ಗದ ವಾಹನಗಳು) | 80 kmph |
4. | ದ್ವಿಚಕ್ರ ವಾಹನಗಳು | 80 kmph |
ಬೆಂಗಳೂರು ನಗರ ವ್ಯಾಪ್ತಿಯ ಸಂಚಾರ ಪಶ್ಚಿಮ ವಿಭಾಗದ ಕೆಂಗೇರಿ, ಕಾಮಾಕ್ಷಿಪಾಳ್ಯ, ಜ್ಞಾನಭಾರತಿ ಮತ್ತು ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳ ಒಟ್ಟು 23.5 ವ್ಯಾಪ್ತಿಯನ್ನು ಹಾಗೂ ಸಂಚಾರ ದಕ್ಷಿಣ ವಿಭಾಗದ ತಲಘಟಪುರ, 6. ಕೆ.ಎಸ್.ಲೇಔಟ್, ಹುಳಿಮಾವು ಹಾಗೂ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಒಟ್ಟು 21 ಕಿ.ಮೀಗಳನ್ನು ನೈಸ್ ರಸ್ತೆಯು ಒಳಗೊಂಡಿರುತ್ತದೆ. ಈ ರಸ್ತೆಗಳಲ್ಲಿ ವಾಹನ ಚಾಲಕರು, ಸವಾರರ ಮತ್ತು ನಿರ್ಲಕ್ಷ್ಯತೆಯ ಚಾಲನೆಯಿಂದ ಮಾರಣಾಂತಿಕ, ಮಾರಣಾಂತಿಕವಲ್ಲದ ರಸ್ತೆ ಅಪಘಾತ ಪ್ರಕರಣಗಳು ದಾಖಲಾಗುತ್ತಿದ್ದು, ಪ್ರತಿ ವರ್ಷವೂ ಅಪಘಾತದಲ್ಲಿ ಗಾಯಗೊಂಡು, ಮರಣಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನೈಸ್ ರಸ್ತೆಯಲ್ಲಿ ವೇಗ ಮಿತಿ ಎಚ್ಚರಿಕೆಯ ಬೋರ್ಡ್‌ಗಳು ಹಾಗೂ ಸೂಚಿಸುವ ಎಲ್.ಇ.ಡಿ. ಫಲಕಗಳು ಇರುತ್ತವೆ. ಈ ಎಲ್ಲಾ ಕ್ರಮಗಳನ್ನು ಅನುಸರಿಸಿಯೂ ರಸ್ತೆ ಅಪಘಾತಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಇದರಿಂದಾಗಿ, ಪ್ರಯಾಣಿಕರ ಹಾಗೂ ವಾಹನ ಸವಾರರ ಸಾವು-ನೋವು ಹೆಚ್ಚಾಗುತ್ತಿವೆ.
ಇದನ್ನೂ ಓದಿ | Bangalore–Mysore Expressway : ಇಂದಿನಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸ್ಮಾರ್ಟ್ ಟ್ರಾಫಿಕ್ ಸಿಸ್ಟಂ
ನೈಸ್ ರಸ್ತೆಯಲ್ಲಿ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಅಪಘಾತ ಪ್ರಕರಣಗಳು ವರದಿಯಾಗುತ್ತಲೇ ಇದ್ದು, ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳೂ ಕೂಡ ತೀವ್ರ ಆಕ್ಷೇಪಣೆಯನ್ನು ವ್ಯಕ್ತ ಪಡಿಸಿರುತ್ತಾರೆ. ಹೀಗಾಗಿ ನೈಸ್ ರಸ್ತೆಯಲ್ಲಿ ಉಂಟಾಗುತ್ತಿರುವ ಮಾರಣಾಂತಿಕ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಂಟಾಗುತ್ತಿರುವ ಅಪಘಾತಗಳಿಗೆ ಕಾರೆಣಗಳನ್ನು ವಿಶ್ಲೇಷಿಸಲಾಗಿದ್ದು, ಹೆಚ್ಚಿನ ಅಪಘಾತಗಳು ವಾಹನೆಗಳ ಅತಿವೇಗ ಹಾಗೂ ಅಜಾರೂಕತೆಯ ಚಾಲನೆಯಿಂದ ಉಂಟಾಗಿರುವುದು ಕಂಡುಬಂದಿರುತ್ತದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಪಥ ಶಿಸ್ತಿನ ನಿಯಮವನ್ನು ಪಾಲಿಸದೇ ಇರುವುದೂ ಸಹ ಅಪಘಾತಗಳು ಸಂಭವಿಸಲು ಕಾರಣವಾಗಿದೆ. ಹೀಗಾಗಿ ರಸ್ತೆಯಲ್ಲಿ ವಾಹನಗಳಿಗೆ ವೇಗ ಮಿತಿ ಜಾರಿ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ನೈಸ್ ರಸ್ತೆಯಲ್ಲಿ ಉಂಟಾಗಿರುವ ಅಪಘಾತಗಳ ಅಂಕಿಅಂಶಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.
ನೈಸ್ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ
2022:
ಮಾರಣಾಂತಿಕ ಅಫಘಾತಗಳ ಸಂಖ್ಯೆ: 42
ಮಾರಣಾಂತಿಕವಲ್ಲದ ಅಫಘಾತಗಳ: 69
2023:
ಮಾರಣಾಂತಿಕ ಅಫಘಾತಗಳ ಸಂಖ್ಯೆ: 37
ಮಾರಣಾಂತಿಕವಲ್ಲದ ಅಫಘಾತಗಳ: 83
2024ರ ಜೂನ್‌ವರೆಗೆ
ಮಾರಣಾಂತಿಕ ಅಫಘಾತಗಳ ಸಂಖ್ಯೆ:13
ಮಾರಣಾಂತಿಕವಲ್ಲದ ಅಫಘಾತಗಳ:52
ಇದನ್ನೂ ಓದಿ | Bangalore Mysore Expressway: ಬೆಂಗಳೂರು- ಮೈಸೂರು ಹೈವೇಯಲ್ಲಿ ಓವರ್‌ಸ್ಪೀಡ್ ಹೋದರೆ ಬೀಳಲಿದೆ ಪೊಲೀಸ್ ಕೇಸ್!
ದ್ವಿಚಕ್ರ ವಾಹನಗಳ ಸಂಚಾರಕ್ಕೆ ನಿರ್ಬಂಧ
ನೈಸ್ ರಸ್ತೆಯಲ್ಲಿ ಪ್ರತಿ ದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 05 ಗಂಟೆಯವರೆಗೆ ದ್ವಿಚಕ್ರ ವಾಹನಗಳ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಅಲ್ಲದೇ ಸಂಚಾರ ವ್ಯವಸ್ಥೆ ಮಾರ್ಪಾಡುಗಳನ್ನು ಜಾರಿಗೊಳಿಸಲು ಬೇಕಾದ ಅಗತ್ಯ ಸೂಚನಾ ಫಲಕಗಳನ್ನು (ನಿಯಮಾನುಸಾರ) ಅಗತ್ಯ ಸ್ಥಳಗಳಲ್ಲಿ ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಕಮಿಷನರ್ ಆದೇಶಿಸಿದ್ದಾರೆ.