ಬೆಂಗಳೂರು: ಸರ್ಜಾಪುರ ರಸ್ತೆಯಲ್ಲಿ ಉದ್ದೇಶಪೂರ್ವಕವಾಗಿ ಕಾರಿಗೆ ಬೈಕ್ ಡಿಕ್ಕಿ ಹೊಡೆಸಿ ಹಣ ಸುಲಿಗೆಗೆ ಯತ್ನಿಸಿದರು (Night Robbery Case) ಎಂಬ ಪ್ರಕರಣಕ್ಕೀಗ ತಿರುವು ಸಿಕ್ಕಿದೆ. ಬಂಧಿತರು ಸುಲಿಗೆಕೋರರು ಅಲ್ಲ, ವಾಹನಕ್ಕೆ ಡಿಕ್ಕಿ ಹೊಡೆದಿದ್ದನ್ನು ಪ್ರಶ್ನಿಸಿದವರು ಅಷ್ಟೇ ಎಂದು ತಿಳಿದು ಬಂದಿದೆ.
ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು ಎಂಬ ಮಾತು ಅಕ್ಷರಶಃ ಈ ಪ್ರಕರಣಕ್ಕೆ ಹೊಂದಿಕೊಳ್ಳುತ್ತದೆ. ಜನವರಿ 29ರ ನಸುಕಿನ ಜಾವ 3ಗಂಟೆ ಹೊತ್ತಲ್ಲಿ ಅಂಕಿತಾ ಜೈಸ್ವಾಲ್ ಹಾಗೂ ಕುಶ್ ಜೈಸ್ವಾಲ್ ಎಂಬ ದಂಪತಿ ಕಾರಿನಲ್ಲಿ ವೈಟ್ ಫೀಲ್ಡ್ ಕಡೆಯಿಂದ ಚಿಕ್ಕನಾಯಕನಹಳ್ಳಿ ಕಡೆ ಹೋಗುತ್ತಿದ್ದರು.
ಇದೇ ವೇಳೆ ಶನಿ ಮಹಾತ್ಮ ದೇವಸ್ಥಾನ ಬಳಿ ಬೈಕ್‌ನಲ್ಲಿ ರಾಂಗ್ ರೂಟ್‌ನಲ್ಲಿ ಬಂದ ಧನುಷ್ (24) ಹಾಗೂ ರಕ್ಷಿತ್ (20) ಏಕಾಏಕಿ ಕಾರಿಗೆ ಡಿಕ್ಕಿ ಹೊಡೆದಿದ್ದರು. ಅಪಘಾತದಲ್ಲಿ ಕಾರಿಗೆ ಹಾಗೂ ಬೈಕ್‌ಗೂ ಡ್ಯಾಮೇಜ್ ಆಗಿತ್ತು. ಬೈಕ್ ಡ್ಯಾಮೇಜ್ ಆದ ಹಿನ್ನೆಲೆ ಹಣ ಕೇಳಲು ಬೈಕ್ ಸವಾರರು ಮುಂದಾಗಿದ್ದರು. ಇತ್ತ ಮಧ್ಯರಾತ್ರಿ ಆದ ಕಾರಣ ಕಾರಿನಲ್ಲಿದ್ದ ದಂಪತಿ ಭೀತಿಗೊಳಗಾಗಿದ್ದರು.
ಕಾರಿನವರು ತಪ್ಪಿಸಿಕೊಂಡು ಹೋಗುತ್ತಾರೆಂದು ಧನುಷ್ ಹಾಗೂ ರಕ್ಷಿತ್ ಕಾರಿನ ಹಿಂದೆ ಬಿದ್ದಿದ್ದರು. ಸುಮಾರು ೫ ಕಿ.ಮೀ ಕಾರನ್ನು ಹಿಂಬಾಲಿಸಿದ್ದರು. ಇದೆಲ್ಲವೂ ಒಂದು ರೀತಿ ದರೋಡೆಗೆ ಯತ್ನಿಸಿದಂತಹ ವಾತಾವರಣ ನಿರ್ಮಾಣವಾಗಿತ್ತು. ಬೈಕ್ ಸವಾರರಿಗೆ ಗಾಡಿ ಡ್ಯಾಮೇಜ್ ಆಯಿತು ರಿಪೇರಿಗೆ ಹಣ ಸಿಕ್ಕಿಲ್ಲ ಎಂಬ ಟೆನ್ಷನ್ ಇದ್ದರೆ, ಇತ್ತ ಕಾರಿನಲ್ಲಿದ್ದವರಿಗೆ ನಾಲ್ಕೈದು ಜನ ರಾಬರಿಗೆ ಮುಂದಾಗಿದ್ದಾರೆ ಎಂಬ ಭಯ ಶುರುವಾಗಿತ್ತು.
ಈ ಭಯದಲ್ಲಿಯೇ ದಂಪತಿ ಕಾರು ಚಲಾಯಿಸಿಕೊಂಡು ಅವರಿಂದ ತಪ್ಪಿಸಿಕೊಂಡು ಹೋಗಿದ್ದರು. ಈ ಎಲ್ಲ ಘಟನೆಯೂ ಕಾರ್‌ನಲ್ಲಿ ಫಿಕ್ಸ್ ಮಾಡಲಾಗಿದ್ದ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿತ್ತು. ಈ ವಿಡಿಯೊವನ್ನು ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ, ಬೆಂಗಳೂರು ಸಿಟಿ ಪೊಲೀಸರಿಗೆ ಶೇರ್ ಮಾಡಿದ್ದರು.
ಸೋಷಿಯಲ್ ಮೀಡಿಯಾ ಒತ್ತಡ
ಈ ವಿಡಿಯೊ ಸೋಶಿಯಲ್ ಮೀಡಿಯಾಲ್ಲಿ ವೈರಲ್ ಆಗುತ್ತಿದ್ದಂತೆ ಒತ್ತಡಕ್ಕೆ ಸಿಲುಕಿದ ಪೊಲೀಸರು ಕಾರ್ಯಾಚರಣೆಗಿಳಿದು ಘಟನೆ ನಡೆದ ಒಂದೇ ದಿನಕ್ಕೆ ಬೈಕ್ ಸವಾರರನ್ನು ಬಂಧಿಸಿದ್ದರು. ಬಂಧಿಸಿ ತನಿಖೆ ನಡೆಸಿದಾಗ ಬೈಕ್ ಸವಾರ ಧನುಷ್ ಹಾಗೂ ರಕ್ಷಿತ್ ದರೋಡೆಗೆ ಯತ್ನಿಸಿಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ಇಬ್ಬರು ಮೀನು ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Saanya iyer : ಪುತ್ತೂರು ಕಂಬಳದಲ್ಲಿ ಸೆಲ್ಫಿ ಕಿರಿಕ್, ಯುವಕನ ಕಪಾಳಕ್ಕೆ ಬಾರಿಸಿದ ಸಾನ್ಯಾ ಅಯ್ಯರ್
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ವಾಹನ ಬೆನ್ನಟ್ಟಿದ್ದಕ್ಕೆ, ಹೆಲ್ಮೆಟ್ ಧರಿಸದೆ ಒನ್ ವೇನಲ್ಲಿ ಬೈಕ್ ಚಲಾಯಿಸಿದ್ದಾರೆಂದು ಪ್ರಕರಣ ದಾಖಲಿಸಲಾಗಿದೆ. ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಂದೂರು ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ತನಿಖೆ ವೇಳೆ ಬಂಧಿತ ಆರೋಪಿಗಳು ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ