ಬೆಂಗಳೂರು: ಸರ್ಜಾಪುರ ರಸ್ತೆಯಲ್ಲಿ ಉದ್ದೇಶಪೂರ್ವಕವಾಗಿ ಕಾರಿಗೆ ಬೈಕ್ ಡಿಕ್ಕಿ ಹೊಡೆಸಿ ಹಣ ಸುಲಿಗೆಗೆ ಯತ್ನಿಸಿದ ಇಬ್ಬರು ದುಷ್ಕರ್ಮಿಗಳನ್ನು (Night Robbery Case) ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಧನುಷ್ (24) ಹಾಗೂ ರಕ್ಷಿತ್ (20) ಬಂಧಿತ ಆರೋಪಿಗಳು.
ನಸುಕಿನ ಜಾವ 3ಗಂಟೆ ಹೊತ್ತಿಗೆ ದಂಪತಿ ಕಾರಿನಲ್ಲಿ ಸರ್ಜಾಪುರ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ರಾಂಗ್ ರೂಟ್‌ನಲ್ಲಿ ಬಂದ ಇಬ್ಬರು ಸುಲಿಗೆಕೋರರು ಏಕಾಏಕಿ ಕಾರಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದವರಂತೆ ನಾಟಕ ಮಾಡಿದ್ದಾರೆ.
ಅಪಘಾತಕ್ಕೆ ಕಾರಿನವರೇ ಕಾರಣವೆಂದು ಬಿಂಬಿಸಿ, ರಸ್ತೆಯಲ್ಲಿ ಅಡ್ಡಗಟ್ಟಿ ಸುಲಿಗೆಗೆ ಯತ್ನಿಸಿದ್ದಾರೆ. ಡಿಕ್ಕಿ ಹೊಡೆದು ಕೆಳಗೆ ಇಳಿಯುವಂತೆ ತಾಕೀತು ಮಾಡಿದ್ದು, ಇವರ ಕಳ್ಳಾಟವನ್ನು ಅರಿತ ದಂಪತಿ ಕಾರಿನ ವಿಂಡೋ ಕ್ಲೋಸ್ ಮಾಡಿಕೊಂಡಿದ್ದಾರೆ.
ಕಾರಿನಿಂದ ಇಳಿಯದೆ ಇದ್ದಾಗ ಕಾರಿನ ಗಾಜು ಒಡೆಯಲು ಮುಂದಾಗಿದ್ದು, ಈ ವೇಳೆ ಕಾರು ಚಲಾಯಿಸಿಕೊಂಡು ಅವರಿಂದ ತಪ್ಪಿಸಿಕೊಂಡು ಹೋಗಿದ್ದಾರೆ. ಇವರಿಬ್ಬರ ಕೃತ್ಯವೆಲ್ಲ ಕಾರ್‌ನಲ್ಲಿ ಫಿಕ್ಸ್ ಮಾಡಲಾಗಿದ್ದ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಈ ಸಂಬಂಧ ಬೆಳ್ಳಂದೂರಿನಲ್ಲಿ ಪ್ರಕರಣವನ್ನು ದಾಖಲಿಸಿದ್ದರು.
ಇದನ್ನೂ ಓದಿ: ದೇವರ ಒಲಿಸಿಕೊಳ್ಳಲು ನಾಲಿಗೆಯನ್ನೇ ಕತ್ತರಿಸಿಕೊಂಡ; ಇದು ಭಕ್ತಿಯೋ, ಕುಡಿತದ ಮತ್ತೋ ದೇವರೇ ಬಲ್ಲ!
ಸುಲಿಗೆ ಯತ್ನಿಸಿದವರನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬೆಳ್ಳಂದೂರು ಬಳಿ ಮೀನು ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಬಂಧಿತರ ವಿರುದ್ಧ ಐಪಿಸಿ 384, 504 ಹಾಗೂ 506 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.