Site icon Vistara News

Nikhil Kumaraswamy : ಕಾಂಗ್ರೆಸ್‌ ನಾಯಕರೇ ಕಪಟ ನಾಟಕ ನಿಲ್ಲಿಸಿ; ಕಾವೇರಿ ವಿಚಾರದಲ್ಲಿ ನಿಖಿಲ್‌ ಕುಮಾರಸ್ವಾಮಿ ಕೆಂಡಾಮಂಡಲ

Nikhil kumaraswamy

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery water Management Authority) ಹೇಳಿತು ಎಂದ ಮಾತ್ರಕ್ಕೆ ತಮಿಳುನಾಡಿಗೆ ಕಾವೇರಿ ನೀರು (Cauvery water dispute) ಹರಿಸಿದ್ದು ಅಕ್ಷಮ್ಯ ಅಪರಾಧ ಎಂದು ಚಿತ್ರನಟರೂ ರಾಜಕಾರಣಿಯೂ ಆಗಿರುವ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಹೇಳಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಣಕ್ಕಿಳಿದು ಚಿತ್ರ ನಟಿ ಸುಮಲತಾ ಅವರ ವಿರುದ್ಧ ಸೋಲನುಭವಿಸಿದ್ದ ನಿಖಿಲ್‌ ಈಗ ಮಂಡ್ಯದ ಜನರ ಆಶೋತ್ತರಗಳೆಂಬಂತೆ ಕಾವೇರಿ ಬಗ್ಗೆ ಧ್ವನಿ ಎತ್ತಿದ್ದಾರೆ. ಇದರ ಜತೆಗೆ ಚಿತ್ರ ನಟರು ಯಾರೂ ಕಾವೇರಿ ವಿಚಾರದಲ್ಲಿ ಮಾತಾಡುತ್ತಿಲ್ಲ. ಬಾಯಿಗೆ ಪ್ಲಾಸ್ಟರ್‌ ಹಾಕಿಕೊಂಡು ಕೂತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾದ ಬೆನ್ನಿಗೇ ನಿಖಿಲ್‌ ಕುಮಾರಸ್ವಾಮಿ ಅವರು ಟ್ವೀಟ್‌ ಮಾಡಿದ್ದಾರೆ.

ಇದರಲ್ಲಿ ರಾಜ್ಯ ಸರ್ಕಾರದ ವಿರುದ್ಧ, ನಾಯಕರ ವಿರುದ್ಧ ಅವರು ಗರಂ ಆಗಿದ್ದಾರೆ. ಗುರುವಾರ ನಡೆದ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್‌ ಕಾವೇರಿ ನದಿ ಪ್ರಾಧಿಕಾರ ನೀಡಿದ ತೀರ್ಪು ಸರಿಯಾಗಿದೆ. ಮುಂದಿನ 10 ದಿನಗಳ ವರೆಗೆ ದಿನವೂ 5000 ಕ್ಯೂಸೆಕ್‌ ನೀರು ಬಿಡುಗಡೆ ಮಾಡಿ ಎಂದು ರಾಜ್ಯಕ್ಕೆ ಕಟ್ಟಾಜ್ಞೆ ವಿಧಿಸುವುದಕ್ಕೆ ಮೊದಲು ಟ್ವೀಟ್‌ ಮಾಡಿದ ನಿಖಿಲ್‌ ಕುಮಾರಸ್ವಾಮಿ ಅವರ ಆಕ್ರೋಶದ ನುಡಿಗಳು ಇಲ್ಲಿವೆ.

ನಿಖಿಲ್‌ ಕುಮಾರಸ್ವಾಮಿ ಅವರು ಗುರುವಾರ ಬೆಳಗ್ಗೆ ತಮ್ಮ ತಂದೆ ಎಚ್‌.ಡಿ ಕುಮಾರಸ್ವಾಮಿ ಅವರ ಜತೆ ದಿಲ್ಲಿಗೆ ಪ್ರಯಾಣಿಸಿದ್ದಾರೆ. ಅಲ್ಲಿ ಅವರು ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಬಗ್ಗೆ ಬಿಜೆಪಿಯ ಉನ್ನತ ನಾಯಕರ ಜತೆ ಚರ್ಚೆ ನಡೆಸಲಿದ್ದಾರೆ.

ರಾಜ್ಯದ ಹಿತಾಸಕ್ತಿ ಕಡೆಗಣಿಸುವ ಕೃತ್ಯವನ್ನು ಖಂಡಿಸುತ್ತೇನೆ

ಕಾವೇರಿ ಕನ್ನಡಿಗರ ಹಕ್ಕು. ಕಾವೇರಿ ಕನ್ನಡಿಗರ ಜೀವನಾಡಿ, ಈ ವಿಷಯದಲ್ಲಿ ಅನ್ಯಾಯ ಸಹಿಸುವುದಿಲ್ಲ ಹಾಗೂ ರಾಜಿ ಪ್ರಶ್ನೆಯೇ ಇಲ್ಲ. ರಾಜ್ಯ ಕಾಂಗ್ರೆಸ್ ಸರಕಾರ ಈ ಬಗ್ಗೆ ಆಡುತ್ತಿರುವ ಕಪಟ ನಾಟಕ ಸಾಕು. ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸುವ ಯಾವುದೇ ಕೃತ್ಯವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ.

ಬ್ರಿಟಿಷರ ಕಾಲದ ಅನ್ಯಾಯದ ಪರಂಪರೆ ಈಗಲೂ ಮುಂದುವರಿದಿದೆ

ರಾಜ್ಯದಲ್ಲಿ ನೀರಿನ ಕೊರತೆ ಇದೆ ಮಳೆ ಕೈಕೊಟ್ಟಿದೆ. ಜಲಾಶಯಗಳು ಬರಿದಾಗಿವೆ. ಆದರೂ ತಮಿಳುನಾಡಿಗೆ ರಾಜ್ಯ ಸರಕಾರ ಏಕಪಕ್ಷೀಯವಾಗಿ ನೀರು ಹರಿಸಿದ್ದು ಅಕ್ಷಮ್ಯ. ಬ್ರಿಟೀಷರ ಕಾಲದಲ್ಲಿಯೇ ಶುರುವಾದ ಅನ್ಯಾಯದ ಪರಂಪರೆಯನ್ನು ನಮ್ಮ ರಾಜ್ಯ ಸರಕಾರವೇ ಮುಂದುವರಿಸಿದೆ.

ಕಾಂಗ್ರೆಸ್‌ಗೆ ಕಾವೇರಿ ಎನ್ನುವುದು ಲಾಭದ ವಿಚಾರವಾಗಿಯೇ ಉಳಿದಿದೆ

ಸ್ವಾತಂತ್ರ್ಯ ನಂತರವೂ ಮುಂದುವರಿದಿದೆ. ಕಾಂಗ್ರೆಸ್ ಪಕ್ಷಕ್ಕೆ ಕಾವೇರಿ ಎನ್ನುವುದು ರಾಜಕೀಯ ಲಾಭದ ವಸ್ತುವಂತೆ ಆಗಿರುವುದು ನೋವಿನ ಸಂಗತಿ. ಕಾವೇರಿ ವಿಷಯದಲ್ಲಿ ಕನ್ನಡಿಗರ ನಿಲುವೇ ನನ್ನ ನಿಲುವು. ಆರೂವರೆ ಕೋಟಿ ಕನ್ನಡಿಗರ ದನಿಯೇ ನನ್ನ ದನಿ. ತಾಯಿ ಕಾವೇರಿಗಾಗಿ ಯಾವುದೇ ಹೋರಾಟಕ್ಕೆ ನಾನು ಸಿದ್ಧನಿದ್ದೇನೆ.

Exit mobile version