ತುಮಕೂರು: ದೇವೇಗೌಡರು ಇಳಿ ವಯಸ್ಸಿನಲ್ಲಿಯೂ ಪಕ್ಷಕ್ಕಾಗಿ ಓಡಾಡುತ್ತಿದ್ದಾರೆ. ಕುಮಾರಸ್ವಾಮಿಯವರು 64ನೇ ವಯಸ್ಸಿನಲ್ಲಿ ಒಬ್ಬರೇ ಇಡೀ ರಾಜ್ಯವನ್ನು ಸುತ್ತುತ್ತಿದ್ದಾರೆ. ಆದರೆ, ಸುರೇಶ್ ಗೌಡರು ಲೋಕಸಭಾ ಚುನಾವಣೆ (Karnataka Election) ವೇಳೆ ಪಕ್ಷದ ನಾಯಕರ ಬಗ್ಗೆ ಲಘುವಾಗಿ ಮಾತನಾಡಿದ್ದರು. ಈ ಬಾರಿ ತುಮಕೂರು ಜಿಲ್ಲೆಯಲ್ಲಿ ಹನ್ನೊಂದಕ್ಕೆ ಹನ್ನೊಂದು ಕ್ಷೇತ್ರದಲ್ಲೂ ನಾವು ಗೆಲ್ಲುತ್ತೇವೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಮಧುಗಿರಿಯಲ್ಲಿ ರಾಜಣ್ಣ, ದೇವೇಗೌಡರ ಸಾವು ಬಯಸಿ ಮಾತನಾಡಿದ್ದರು. ಬಿಜೆಪಿಯವರು ಉರಿಗೌಡ, ನಂಜೇಗೌಡರ ಕತೆ ಹೇಳುತ್ತಿದ್ದಾರೆ. ಅದೊಂದು ಕಾಲ್ಪನಿಕ ಕತೆ. ಅದನ್ನೂ ಯಾರೂ ನಂಬುವುದಿಲ್ಲ ಎಂದು ಕಿಡಿಕಾರಿದರು.
ನಾನು, ಕುಮಾರಣ್ಣನ ಜತೆ ಹೋದಲ್ಲೆಲ್ಲ ತಾಯಂದಿರು ತಲೆ ಮೇಲೆ ಕುಂಭ ಹೊತ್ತು ನಡೆಯುತ್ತಾ ಅದ್ಧೂರಿ ಸ್ವಾಗತ ಕೋರುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಗೌರಿಶಂಕರ್ ಅವರು ಮನೆ ಮನೆಗೂ ರೇಷನ್ ಕಿಟ್ ವಿತರಿಸಿದ್ದರು. ಆದರೆ, ಸಮ್ಮಿಶ್ರ ಸರ್ಕಾರ ಬಿದ್ದ ನಂತರ ಬಿಜೆಪಿ ಸರ್ಕಾರ ಬಂತು. ನಂತರ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡರ ಕುಮ್ಮಕ್ಕಿನಿಂದ ಕ್ಷೇತ್ರಕ್ಕೆ ಸರಿಯಾದ ಅನುದಾನ ಬಂದಿಲ್ಲ ಎಂದು ಆರೋಪಿಸಿದರು.
ಸುರೇಶ್ ಗೌಡರು ಸಂಸ್ಕಾರ ಕಲಿತಿಲ್ಲ ಎಂದ ಸಿ.ಎಂ.ಇಬ್ರಾಹಿಂ
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಪಾಪ ಸುರೇಶ್ ಗೌಡರು ಸಂಸ್ಕಾರ ಕಲಿತಿಲ್ಲ. ಅವರು ದೇವೇಗೌಡರು, ಕುಮಾರಸ್ವಾಮಿ ಬಗ್ಗೆ ಮಾತನಾಡಿದ್ದನ್ನು ಕೇಳಿ ಬೇಸರವಾಯಿತು. ದೇವೇಗೌಡರು ಪ್ರಧಾನ ಮಂತ್ರಿಯಾಗಿ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದರು. ಇದಕ್ಕೆ ಸುರೇಶ್ ಗೌಡ ಹೆಮ್ಮೆ ಪಡಬೇಕಾಗಿತ್ತು. ಆದರೆ ದೊಡ್ಡ ಗೌಡರ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದೀರಿ, ಬಸವಣ್ಣನವರು ಕಳಬೇಡ, ಕೊಲಬೇಡ ಎಂದು ಹೇಳಿದ್ದರು. ಸುರೇಶ್ ಗೌಡರೇ ಬಸವಣ್ಣನವರ ವಚನದಲ್ಲಿರೋ ಒಂದು ಆದರ್ಶವಾದರೂ ನಿಮ್ಮಲ್ಲಿ ಇದೆಯಾ ಎಂದು ಪ್ರಶ್ನಿಸಿದರು.
ಬಿಜೆಪಿ ಕತೆ ಮುಗಿದಿದೆ. ಯಡಿಯೂರಪ್ಪ ಒಂದು ಕಡೆ, ಬೊಮ್ಮಾಯಿ ಒಂದು ಕಡೆ. ಇನ್ನು ಸದಾನಂದ ಗೌಡ ಅವರದ್ದೂ ಸಿಡಿ ಇದೆ. ಅವರೂ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಮೇ 15 ಚುನಾವಣೆ ಮುಗಿಯುತ್ತದೆ. ತುಮಕೂರು ಜಿಲ್ಲೆಯ 11 ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ. ಮೇ 20ಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ. ಶಾಸಕ ಗೌರಿಶಂಕರ್ ಕೂಡ ಮಂತ್ರಿಯಾಗುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ | Tipu Sultan: ಉರಿಗೌಡ-ನಂಜೇಗೌಡ ಸಿನಿಮಾಗೆ ಬ್ರೇಕ್?: ಅಂತರ ಕಾಯ್ದುಕೊಂಡ ಕಟೀಲ್; ಚರ್ಚಿಸಲು ಮುನಿರತ್ನಗೆ ಚುಂಚಶ್ರೀ ಆಹ್ವಾನ
ಜಿಲ್ಲೆಯಲ್ಲಿ ಕನಿಷ್ಠ 9 ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುತ್ತೆ
ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಮಾತನಾಡಿ, ಈ ಕ್ಷೇತ್ರದ ಮಾಜಿ ಶಾಸಕ ನಾನು ಅಭಿವೃದ್ಧಿ ಮಾಡಿದ್ದೇನೆ ಎನ್ನುತ್ತಾರೆ. ನೀವು ಹತ್ತು ವರ್ಷ ಅಧಿಕಾರದಲ್ಲಿದ್ದಿರಿ, ಆದರೆ ನನಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಎರಡೂವರೇ ವರ್ಷ ಮಾತ್ರ. ನಮ್ಮ ಸರ್ಕಾರ ಇಲ್ಲದೇ ಇದ್ದರೂ ಕುಮಾರಣ್ಣನ ಸರ್ಕಾರದಲ್ಲಿ ಕ್ಷೇತ್ರಕ್ಕೆ 2200 ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಬಾರಿಯ ಚುನಾವಣೆಯಲ್ಲಿ ಜಿಲ್ಲೆಯಿಂದ 9 ಶಾಸಕರಾದರೂ ಜೆಡಿಎಸ್‌ನಿಂದ ಆಯ್ಕೆಯಾಗಿಯೇ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.