Site icon Vistara News

Tippu sultan: ಉರಿಗೌಡ, ನಂಜೇಗೌಡ ಕುರಿತ ಚರ್ಚೆ ತಕ್ಷಣ ನಿಲ್ಲಿಸಿ: ನಿರ್ಮಲಾನಂದನಾಥ ಸ್ವಾಮೀಜಿ ಫರ್ಮಾನು

Nirmalananda swameeji

#image_title

ಬೆಂಗಳೂರು: ಟಿಪ್ಪು ಸುಲ್ತಾನನನ್ನು ಕೊಂದಿದ್ದು ಉರಿ ಗೌಡ ಮತ್ತು ನಂಜೇಗೌಡರೆಂಬ (Uri gowda and Nanjegowda) ಒಕ್ಕಲಿಗ ಯೋಧರು ಎಂಬ ಬಿಜೆಪಿ ನಾಯಕರ ಪ್ರಚಾರಕ್ಕೆ ಹಿನ್ನಡೆಯುಂಟಾಗಿದೆ. ಇಂಥ ಕಾಲ್ಪನಿಕವಾದ, ಇದುವರೆಗೆ ಯಾವುದೇ ದಾಖಲೆಗಳು ಸಿಗದ ವಾದವನ್ನು ಮುಂದಿಟ್ಟುಕೊಂಡು ಒಕ್ಕಲಿಗ ಯೋಧರ ಹೆಸರಿನಲ್ಲಿ ರಾಜಕೀಯ ಮಾಡಬಾರದು ಎಂಬ ಸ್ಪಷ್ಟ ಸಂದೇಶವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿಗಳಾಗಿರುವ ಶ್ರೀ ನಿರ್ಮಲಾನಂದನಾಥ ಸ್ವಾಮಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಉರಿಗೌಡ, ನಂಜೇಗೌಡರ ವಿಚಾರಗಳು ದೊಡ್ಡ ಮಟ್ಟದಲ್ಲಿ ಚರ್ಚೆಯಲ್ಲಿವೆ. ಅದರ ನಡುವೆ ಸಚಿವ ಮುನಿರತ್ನ ಅವರು ಈ ಕುರಿತು ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು ಈ ಹಂತದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅವರು ಮಧ್ಯ ಪ್ರವೇಶ ಮಾಡಿದ್ದಾರೆ. ಮುನಿರತ್ನ ಅವರನ್ನು ಕರೆಸಿಕೊಂಡು ಈ ರೀತಿ ಸಿನಿಮಾ ಮಾಡುವುದು ಬೇಡ ಎಂಬ ಸಂದೇಶವನ್ನು ನೀಡಿದ್ದಾರೆ ಮತ್ತು ಅವರ ಮಾತಿನಂತೆ ಸಿನಿಮಾ ನಿರ್ಮಾಣವನ್ನು ಕೈಬಿಟ್ಟಿರುವುದಾಗಿ ಮುನಿರತ್ನ ಅವರೂ ಘೋಷಣೆ ಮಾಡಿದ್ದಾರೆ.

ಈ ನಡುವೆ, ನಿರ್ಮಲಾನಂದನಾಥ ಸ್ವಾಮೀಜಿಯವರು ಈ ವಿಚಾರದಲ್ಲಿ ಯಾರೆಲ್ಲ ಮಾತನಾಡುತ್ತಿದ್ದಾರೋ ಅವರೆಲ್ಲ ಕೂಡಲೇ ಸುಮ್ಮನಾಗಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ. ಈಗ ನಡೆಯುತ್ತಿರುವ ಯಾವ ಚರ್ಚೆಯಲ್ಲೂ ಹುರುಳಿಲ್ಲ ಎಂದಿರುವ ಸ್ವಾಮೀಜಿ, ಒಂದು ವೇಳೆ ಸೂಕ್ತವಾದ ಶಾಸನ ದಾಖಲೆಗಳು ಕಂಡುಬಂದರೆ ಅದನ್ನು ಸಂಸ್ಥಾನಕ್ಕೆ ತನ್ನಿ, ಬಳಿಕ ಪರಾಮರ್ಶಿಸೋಣ ಎಂದಿದ್ದಾರೆ.

ನಿರ್ಮಲಾನಂದನಾಥ ಶ್ರೀಗಳು ನೀಡಿರುವ ಹೇಳಿಕೆಯ ಪೂರ್ಣ ಪಾಠ ಇಂತಿದೆ.

ಸಿ.ಟಿ ರವಿ ಇರಬಹುದು, ಅಶ್ವತ್ಥ ನಾರಾಯಣ ಅವರಿರಬಹುದು, ಗೋಪಾಲಯ್ಯ ಅವರಿರಬಹುದು, ಈ ವಿಷಯದಲ್ಲಿ ಯಾರೆಲ್ಲ ಮಾತನಾಡುತ್ತಿದ್ದಾರೋ ಅವರೆಲ್ಲರಿಗೂ ಇತಿಹಾಸದ ಹಿನ್ನೆಲೆಯನ್ನು ಮನದಟ್ಟು ಮಾಡಿಕೊಟ್ಟಿದ್ದರಿಂದ ಅವರೆಲ್ಲರೂ ಸುಮ್ಮನಾಗಬೇಕು, ಸುಮ್ಮನಾಗಿದ್ದಾರೆ ಎಂದು ಭಾವಿಸಿದ್ದೇನೆ.

ಕಲ್ಪನೆ ಮಾಡಿಕೊಂಡು ಬರೆಯುವುದು ಕಾದಂಬರಿ ಆಗುತ್ತದೆ, ಶಾಸನಗಳು ಮತ್ತು ಇತಿಹಾಸದ ಹಿನ್ನೆಲೆಯನ್ನು ಇಟ್ಟುಕೊಂಡು ಬರೆದಿರುವುದು ಮುಂದಿನ ಪೀಳಿಗೆಗೆ ಒಂದಿಷ್ಟು ಶಕ್ತಿಯಾಗುತ್ತದೆ. ಅಂತಹುದ್ಯಾವುದೂ ಇದುವರೆಗೆ ಕಂಡುಬಾರದೆ ಇರುವುದರಿಂದ ಹೇಳಿಕೆಗಳ ಮೂಲಕ ಯುವಕರಲ್ಲಿ ಮತ್ತು ಸಮಕಾಲೀನ ಜಗತ್ತಿನಲ್ಲಿ ಗೊಂದಲವನ್ನು ಸೃಷ್ಟಿ ಮಾಡಿ ವ್ಯಕ್ತಿಗಳ ಶಕ್ತಿಯನ್ನು ಹಾಳು ಮಾಡಬಹುದು, ಸಮುದಾಯಕ್ಕೆ ಧಕ್ಕೆಯನ್ನು ಕೂಡಾ ತರಬಾರದು.

ಇನ್ನು ಮುಂದುವರಿದು, ಯಾವ ವಿಚಾರ ಪ್ರಸ್ತಾಪ ಆಗುತ್ತಿದೆಯೋ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಉರಿಗೌಡರು ಮತ್ತು ನಂಜೇಗೌಡರ ಬಗೆಗೆ ಇತಿಹಾಸವನ್ನು ಸಾರುವಂತಹ, ನಮೂದು ಆಗಿರುವಂಥ ಅಥವಾ ಶಾಸನಗಳು ಸಿಕ್ಕದ್ದೇ ಆದರೆ ಶ್ರೀಕ್ಷೇತ್ರ ಆದಿಚುಂಚನಗಿರಿ ಸಂಸ್ಥಾನ ಮಠಕ್ಕೆ ಸರಿಯಾದ ರೀತಿಯಲ್ಲಿ ತಂದೊಪ್ಪಿಸಿದ್ದೇ ಆದಲ್ಲಿ ಎಲ್ಲವನ್ನೂ ಕೂಡಾ ಕ್ರೋಡೀಕರಿಸಿ, ಯಾಕೆಂದರೆ ಶಾಸನ ತಜ್ಞರು ಇರುತ್ತಾರೆ, ಕಾರ್ಬನ್‌ ಡೇಟಿಂಗ್‌ ಟೆಕ್ನಾಲಜಿ ನಮ್ಮಲ್ಲಿದೆ, ಇತಿಹಾಸವನ್ನು ವಿಮರ್ಶೆ ಮಾಡುವ ಐತಿಹಾಸಿಕ ಶ್ರೇಷ್ಠ ವಿಮರ್ಶಕರು ಇದ್ದಾರೆ, ಇವರೆಲ್ಲರನ್ನೂ ಇಟ್ಟುಕೊಂಡು ತಂದುಕೊಟ್ಟ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಒರೆಗೆ ಹಚ್ಚಿ ನಂತರದಲ್ಲಿ ಒಂದು ನಿರ್ಧಾರಕ್ಕೆ ಬರಲಾಗುತ್ತದೆ.

ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಒಂದು ಗೊಂದಲಕ್ಕೆ ಮತ್ತು ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂಥ ಕೆಲಸ ಆಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು ಎನ್ನುವುದು ಕೂಡಾ ನಮ್ಮ ಆಗ್ರಹ.

ಇದನ್ನೂ ಓದಿ : Tipu Sultan: ʼಉರಿಗೌಡ ನಂಜೇಗೌಡ’ ಸಿನಿಮಾ ನಿರ್ಮಾಣ ಕೈಬಿಟ್ಟ ಮುನಿರತ್ನ; ನಿರ್ಮಲಾನಂದ ಸ್ವಾಮೀಜಿ ಸೂಚನೆ

Exit mobile version