ಹಾಸನ: ಚನ್ನರಾಯಪಟ್ಟಣ ತಾಲೂಕಿನ ದಡ್ಡಿಹಳ್ಳಿಯಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ೧೧ ವರ್ಷದ ಬಾಲಕಿ ರಂಜಿತಾಳ ಮೃತದೇಹವನ್ನು ಆಸ್ಪತ್ರೆಗೆ ಮನೆಗೆ ಒಯ್ಯಲು ಆಂಬ್ಯುಲೆನ್ಸ್ ಸಿಗದೆ ಪರದಾಡಿದ ಪೋಷಕರು ಕೊನೆಗೆ ಕಟ್ಟಿಗೆ ಸಾಗಿಸುವ ವಾಹನದಲ್ಲಿ ಸರಕಿನಂತೆ ಶವವನ್ನು ಮನೆಗೆ ಒಯ್ಯಬೇಕಾಯಿತು.
ಹೆಗ್ಗಡಗೆರೆ ಗ್ರಾಮದ ರಂಜಿತಾ ಎಂದಿನಂತೆ ಗುರುವಾರ ಬೆಳಗ್ಗೆ ಶಾಲೆಗೆ ತನ್ನ ದೊಡ್ಡಪ್ಪನ ಮಗನೊಂದಿಗೆ ಬೈಕ್‌ನಲ್ಲಿ ಶಾಲೆಗೆ ತೆರಳಿದ್ದಳು. ಈ ವೇಳೆ ಕೆರೆಕೋಡಿ ತುಂಬಿ ರಸ್ತೆಗೆ ಹರಿಯುತ್ತಿತ್ತು. ಎಂದಿನಂತೆ ಎಂದು ತಿಳಿದ ಸಹೋದರ ಅದರಲ್ಲಿಯೇ ಬೈಕ್ ಚಲಾಯಿಸಿಕೊಂಡು ಹೋಗಿದ್ದಾನೆ. ಆದರೆ, ಈ ವೇಳೆ ನೀರಿನ ರಭಸ ಹೆಚ್ಚು ಇದ್ದಿದ್ದರಿಂದ ಬೈಕ್ ನಿಯಂತ್ರಣ ತಪ್ಪಿದೆ. ಹಾಗೇ ಬೈಕ್ ಸಮೇತ ಇಬ್ಬರೂ ನೀರಿಗೆ ಬಿದ್ದಿದ್ದಾರೆ. ನೀರಿನ ರಭಸಕ್ಕೆ ರಂಜಿತಾ ನೀರು ಪಾಲಾಗಿದ್ದಾಳೆ. ಅವಳನ್ನು ಕಾಪಾಡಲು ಪ್ರಯತ್ನಪಟ್ಟನಾದರೂ ಸಾಧ್ಯವಾಗಲಿಲ್ಲ. ಮೊದಲೇ ಹೆದರಿದ್ದ ಆತ ಈಜಿಕೊಂಡು ದಡ ಸೇರಿದ್ದಾನೆ. ಸುಮಾರು ಒಂದು ಗಂಟೆಯ ಹುಡುಕಾಟದ ಬಳಿಕ ರಂಜಿತಾಳ ಶವ ಸಿಕ್ಕಿದೆ.
ಸ್ಥಳೀಯರೆಲ್ಲರೂ ಸೇರಿ ಬಾಲಕಿಯನ್ನು ಕೂಡಲೇ ಚನ್ನರಾಯಪಟ್ಟಣದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ, ಮರಳಿ ಹೆಗ್ಗಡಗೆರೆ ಶವ ಸಾಗಿಸಲು ಆಂಬ್ಯುಲೆನ್ಸ್ ಸಿಗದೆ ಪೋಷಕರು ಪರದಾಡಿದ್ದಾರೆ.
ಒಂದು ಕಡೆ ಅಧಿಕಾರಿಗಳು, ಆಸ್ಪತ್ರೆಯವರು ಆಂಬ್ಯುಲೆನ್ಸ್ ಒದಗಿಸಲಿಲ್ಲ. ಇನ್ನೊಂದು ಕಡೆ ಪೋಷಕರಿಗೂ ಆಂಬ್ಯುಲೆನ್ಸ್ ಸಿಗಲಿಲ್ಲ. ಬೇರೆ ವಾಹನದದವರು ಶವ ಸಾಗಿಸಲು ಒಪ್ಪಲಿಲ್ಲ. ಇದು ಶಾಲೆಗೆ ಹೋಗುವಾಗ ಸಂಭವಿಸಿದ ದುರಂತವಾದರೂ ಶಿಕ್ಷಣ ಇಲಾಖೆಯೂ ಸ್ಪಂದಿಸಲಿಲ್ಲ.
ಕೊನೆಗೆ ಯಾವ ಅವಕಾಶವೂ ಇಲ್ಲದೆ ಶವನ್ನು ಗೂಡ್ಸ್ ವಾಹನದಲ್ಲಿ, ಅದೂ ಕಟ್ಟಿಗೆ ತುಂಬಿದ್ದ ವಾಹನದಲ್ಲಿ ಒಂದು ಸಾಮಾನ್ಯ ಸರಕಿನಂತೆ ತುಂಬಿ ಕಳುಹಿಸಲಾಯಿತು.
ಮೊದಲೇ ಮಗಳನ್ನು ಕಳೆದುಕೊಂಡ ಸಂಕಟದಲ್ಲಿದ್ದ ಹೆತ್ತವರು ಏನಾದರೂ ಆಗಲಿ ಎಂದು ಗೂಡ್ಸ್ ವಾಹನದಲ್ಲೇ ಮೃತದೇಹವನ್ನು ತಂದು ಅಂತ್ಯಕ್ರಿಯೆ ನೆರವೇರಿಸಿದರು.
ಇದನ್ನೂ ಓದಿ | Rain News | ಅಣ್ಣನೊಂದಿಗೆ ಶಾಲೆಗೆ ಬೈಕ್‌ನಲ್ಲಿ ಹೊರಟ್ಟಿದ್ದವಳು ಹಳ್ಳದಲ್ಲಿ ಕೊಚ್ಚಿಹೋದಳು