Site icon Vistara News

BPL Card : ಸ್ವಂತ ಕಾರಿದೆಯಾ? ನಿಮಗೆ BPL ಕಾರ್ಡ್‌ ಇಲ್ಲ; ಯೆಲ್ಲೋ ಬೋರ್ಡ್‌ ಇದ್ದೋರು ಅಪ್ಲೈ ಮಾಡಿ!

BPL Card and Anna bhagya

ಬೆಂಗಳೂರು: ಅನ್ನಭಾಗ್ಯ ಯೋಜನೆಗೆ (Annabhagya Scheme) ಚಾಲನೆ ದೊರೆತು 25 ದಿನಗಳ ಅವಧಿಯಲ್ಲಿ 1 ಕೋಟಿ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ಹೊಸ ಪಡಿತರ ಚೀಟಿ (New Ration Card) ವಿತರಣೆಗೆ ಅಗತ್ಯ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಅಲ್ಲದೆ, ರೇಷನ್ ಕಾರ್ಡ್ ತಿದ್ದುಪಡಿ (Ration card correction), ರದ್ದತಿ, ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಸ್ವಂತ ಕಾರನ್ನು ಹೊಂದಿರುವವರಿಗೆ ಬಿಪಿಎಲ್‌ ಕಾರ್ಡ್‌ ಇಲ್ಲ ಎಂಬ ಈ ಹಿಂದಿನ ಆದೇಶವನ್ನು ಮುಂದುವರಿಸಲಾಗುವುದು. ಅವರಿಗೆ ಯಾವುದೇ ಕಾರಣಕ್ಕೂ ಬಿಪಿಎಲ್‌ ಕಾರ್ಡ್‌ ಇಲ್ಲ.

ಯೆಲ್ಲೊ ಬೋರ್ಡ್‌ ಕಾರು (Yellow Board Car) ಹೊಂದಿರುವವರಿಗೆ ಕಾರ್ಡ್ ರದ್ದು ಆಗಿದ್ದರೆ, ಪರಿಶೀಲಿಸಿ ವಾಪಸ್ ನೀಡುವ ಬಗ್ಗೆ ಸರ್ಕಾರ ನಿರ್ಧಾರ ಮಾಡಲಿದೆ. ಯೆಲ್ಲೋ ಬೋರ್ಡ್ ಹೊಂದಿರುವವರು ಜೀವನಕ್ಕಾಗಿ ದುಡಿಯಲು ಕಾರ್ ತೆಗೆದುಕೊಂಡಿರುತ್ತಾರೆ. ಹೀಗಾಗಿ ಅವರ ಕಾರ್ಡ್ ರದ್ದು ಮಾಡುವುದಿಲ್ಲ. ವೈಟ್ ಬೋರ್ಡ್ ಕಾರು (White board car) ಹೊಂದಿರುವವರ ಕಾರ್ಡ್ ರದ್ದು ಆದೇಶವನ್ನು ವಾಪಸ್ ಪಡೆಯುವುದಿಲ್ಲ.

ಇದನ್ನೂ ಓದಿ: Annabhagya Scheme : ಶೀಘ್ರ ಹೊಸ ಪಡಿತರ ಕಾರ್ಡ್‌; ಯೆಲ್ಲೋ ಬೋರ್ಡ್‌ ಕಾರಿದ್ದವರಿಗೆ BPL: ಕೆ.ಎಚ್. ಮುನಿಯಪ್ಪ

ಹಿಂದಿನ ಆದೇಶದ ಗೊಂದಲದಿಂದ ಸಮಸ್ಯೆ ಆಗಿತ್ತು!

ಈ ಹಿಂದೆ ಸರ್ಕಾರ ಬಿಪಿಎಲ್‌ ಕಾರ್ಡ್‌ ಬಗ್ಗೆ ಹೊರಡಿಸಿದ್ದ ಆದೇಶದಲ್ಲಿ ಸ್ವಂತ ಕಾರನ್ನು ಹೊಂದಿರುವವರಿಗೆ ಬಿಪಿಎಲ್‌ ಕಾರ್ಡ್‌ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಈ ಹಿನ್ನೆಲೆಯಲ್ಲಿ ಸ್ವಂತ ಕಾರು ಇರುವ ಅದೆಷ್ಟೊ ಕುಟುಂಬಗಳು ಬಿಪಿಎಲ್‌ ಕಾರ್ಡ್‌ ಸೌಲಭ್ಯವನ್ನು ಕಳೆದುಕೊಂಡಿದ್ದರು. ಅವರ ಕಾರುಗಳು ರದ್ದುಗೊಂಡಿದ್ದವು. ಆದರೆ, ಇದು ವೈಟ್‌ ಬೋರ್ಡ್‌ ಹೊಂದಿರುವ ಕಾರುಗಳಿಗೆ ಅನ್ವಯ ಆಗುವ ಬಗ್ಗೆ ಮಾತ್ರ ಎಂದು ಹೇಳಲಾಗಿತ್ತಾದರೂ, ಯೆಲ್ಲೋ ಬೋರ್ಡ್‌ ಕಾರುಗಳನ್ನು ಹೊಂದಿರುವವರ ಕಾರ್ಡ್‌ಗಳೂ ರದ್ದುಗೊಂಡಿದ್ದವು.

ಇದರಿಂದ ಸಮಸ್ಯೆಗೊಳಪಟ್ಟ ಯೆಲ್ಲೋ ಬೋರ್ಡ್‌ ಕಾರು ಹೊಂದಿರುವವರು ಸರ್ಕಾರಕ್ಕೆ ಮೊರೆ ಇಟ್ಟಿದ್ದರು. ನಾವು ಜೀವನೋಪಾಯಕ್ಕಾಗಿ ಕಾರನ್ನು ಹೊಂದಿದ್ದೇವೆಯೇ ಹೊರುತು, ಇದು ಐಷಾರಾಮಿ ಜೀವನ ಸಾಗಿಸುವುದಕ್ಕೆ ಅಲ್ಲ. ಇದರ ಸಂಬಂಧ ನಾವು ಕಾಲ ಕಾಲಕ್ಕೆ ಟ್ಯಾಕ್ಸ್‌ ಅನ್ನು ಸಹ ಕಟ್ಟುತ್ತೇವೆ. ನಮ್ಮ ಕುಟುಂಬಗಳನ್ನು ಬಿಪಿಎಲ್‌ ಎಂದು ಪರಿಗಣಿಸಬೇಕು ಎಂದು ಮನವಿ ಮಾಡಿದ್ದರು. ಸಾಕಷ್ಟು ಬಾರಿ ಸರ್ಕಾರಕ್ಕೆ ಈ ಮನವಿ ಹೋಗಿತ್ತು. ಅಂತಿಮವಾಗಿ ಸರ್ಕಾರ ಈಗ ಯೆಲ್ಲೋ ಬೋರ್ಡ್‌ ಹೊಂದಿರುವವರಿಗೆ ಬಿಪಿಎಲ್‌ ಕಾರ್ಡ್‌ ವಿತರಿಸಲು ನಿರ್ಧಾರ ಮಾಡಿದೆ.

ಯೆಲ್ಲೋ ಬೋರ್ಡ್‌ ಕಾರು ಇದ್ದು ಕಾರ್ಡ್‌ ರದ್ದಾಗಿದ್ದರೆ ಏನು ಮಾಡಬೇಕು?

ಯೆಲ್ಲೋ ಬೋರ್ಡ್‌ ಕಾರ್ಡ್‌ ಹೊಂದಿದವರ ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದರೆ ಇಲ್ಲವೇ ಯೆಲ್ಲೋ ಕಾರ್ಡ್‌ ಹೊಂದಿ ಹೊಸ ರೇಷನ್‌ ಕಾರ್ಡ್‌ ಪಡೆಯಲು ಯೋಚಿಸುತ್ತಿರುವವರಿಗೆ ಇನ್ನು ನಿರಾಂತಕವಾಗಿ ಬಿಪಿಎಲ್‌ ಕಾರ್ಡ್‌ ದೊರೆಯಲಿದೆ. ಸರ್ಕಾರ ರೇಷನ್‌ ಕಾರ್ಡ್‌ ನೀಡಲು ಚಾಲನೆ ನೀಡಿದ ಬಳಿಕ ನೀವು ಸಮೀಪದ ಬೆಂಗಳೂರು ಒನ್‌, ಸೇವಾ ಸಿಂಧು ಪೋರ್ಟಲ್‌ ಸೇರಿದಂತೆ ಇನ್ನಿತರ ನೋಂದಣಿ ಕೇಂದ್ರಗಳಿಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.

ನೀವೇ ಅಪ್ಲೈ ಮಾಡಬಹುದಾ?

ನೀವೂ ಸಹ ಆನ್‌ಲೈನ್‌ ಮೂಲಕ ಅಪ್ಲೈ ಮಾಡಬಹುದಾಗಿದೆ. ಅದಕ್ಕೆ ನೀವು ಆಹಾರ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ನೀವು ಇ-ಸರ್ವಿಸ್‌ (ಇ-ಸೇವೆ) ಮೇಲೆ ಕ್ಲಿಕ್‌ ಮಾಡಬೇಕು. ಇದರಲ್ಲಿ ಕೆಳಗಡೆ ನಿಮಗೆ ಇ-ಪಡಿತರ ಚೀಟಿ ಆಯ್ಕೆ ಕಾಣುತ್ತದೆ. ಅದರಲ್ಲಿ ಕೆಳಗಿನ ಬಾಣದ ಗುರುತಿನ ಮೇಲೆ ಕ್ಲಿಕ್‌ ಮಾಡಿದರೆ ಹೊಸ ಪಡಿತರ ಚೀಟಿ ಎಂಬ ಆಯ್ಕೆ ತೋರಿಸುತ್ತದೆ. ಅಲ್ಲಿ ಎಪಿಎಲ್‌ ಹಾಗೂ ಬಿಪಿಎಲ್‌ ಆಯ್ಕೆ ಇರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದ ಬಳಿಕ ಅಗತ್ಯ ದಾಖಲೆಗಳನ್ನು ನೀವು ಸಲ್ಲಿಸಬೇಕಾಗುತ್ತದೆ. ಆದರೆ, ಸದ್ಯಕ್ಕೆ ಮಾತ್ರ ಪಡಿತರ ನೋಂದಣಿ ಸೇವೆಯನ್ನು ತಾತ್ಕಾಲಿವಾಗಿ ಸ್ಥಗಿತಗೊಳಿಸಲಾಗಿದೆ. ಹೊಸ ಪಡಿತರ ಚೀಟಿ ಆಯ್ಕೆ ಮೇಲೆ ಕ್ಲಿಕ್‌ ಮಾಡಿದರೆ “ಹೊಸ ಪಡಿತರ ಚೀಟಿಗಾಗಿ ಅರ್ಜಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ” ಎಂಬುದನ್ನು ತೋರಿಸುತ್ತದೆ. ಹೀಗಾಗಿ ಸರ್ಕಾರಕ್ಕೆ ಇದಕ್ಕೆ ಪುನಃ ಚಾಲನೆ ಕೊಟ್ಟಾಗ ನೀವು ಪ್ರಯತ್ನಿಸಬಹುದಾಗಿದೆ.

ಬಿಪಿಎಲ್‌ ಕಾರ್ಡ್‌ ಪಡೆಯಲು ಏನೇನು ದಾಖಲೆ ಬೇಕು?

ನೀವು ಬಿಪಿಎಲ್‌ ಕಾರ್ಡ್‌ ಪಡೆಯುವವರಿದ್ದರೆ ಇದಕ್ಕೆ ಕೆಲವು ದಾಖಲೆಗಳು ಕಡ್ಡಾಯವಾಗಿದೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಆದಾಯ ಪ್ರಮಾಣ ಪತ್ರ, ಕುಟುಂಬದ ಸದಸ್ಯರ ಪಾಸ್ ಪೋರ್ಟ್ ಗಾತ್ರದ ಛಾಯಾಚಿತ್ರಗಳು ಮುಖ್ಯವಾಗಿ ಬೇಕಿವೆ. ಇದಲ್ಲದೆ, 3 ಹೆಕ್ಟೇರ್‌ (7.5 ಎಕರೆ) ಹೊಂದಿರುವವರು ಸಹ ಪಡೆಯಬಹುದಾಗಿದೆ.

ಆಹಾರ ಸಚಿವರಿಂದ ಮಾಹಿತಿ

ಅನ್ನಭಾಗ್ಯ ಯೋಜನೆ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಕೆ.ಎಚ್. ಮುನಿಯಪ್ಪ ಅವರು, ಯೆಲ್ಲೋ ಬೋರ್ಡ್‌ ಕಾರು ಹೊಂದಿರುವವರಿಗೆ ಬಿಪಿಎಲ್‌ ಕಾರ್ಡ್‌ ನೀಡುವ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಆದರೆ, ಸ್ವಂತ ವೈಟ್‌ ಬೋರ್ಡ್ ಕಾರನ್ನು ಹೊಂದಿದವರು ಬಿಪಿಎಲ್‌ ಕಾರ್ಡ್‌ಗೆ ಅರ್ಹರಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: DK Shivakumar : ಡಿ.ಕೆ ಶಿವಕುಮಾರ್‌ಗೆ ಬಿಗ್‌ ರಿಲೀಫ್‌; ಹೈಕೋರ್ಟ್‌ ತೀರ್ಪು ಎತ್ತಿಹಿಡಿದ ಸುಪ್ರೀಂಕೋರ್ಟ್‌

ಈ ಹಿನ್ನೆಲೆಯಲ್ಲಿ ಜುಲೈ ಅಂತ್ಯಕ್ಕೆ ಬಾಕಿ ಇರುವ 2,95,986 ಪಡಿತರ ಚೀಟಿ ವಿಲೇವಾರಿಗೆ ಕ್ರಮ ವಹಿಸಲಾಗಿದೆ. ಆಂಧ್ರ ಮಾದರಿಯಲ್ಲಿ ವೈದ್ಯಕೀಯ ಚಿಕಿತ್ಸೆ ಕಾರಣಕ್ಕೆ ಬಿ ಕಾರ್ಡ್ ಹಾಗೂ ಆಹಾರ ಪಡೆಯುವವರಿಗೆ ಎ ಕಾರ್ಡ್ ವಿತರಣೆ ಮಾಡಲಾಗುತ್ತದೆ. ತುರ್ತು ವೈಧ್ಯಕೀಯ ಕಾರಣಗಳಿಗೆ ಹೊಸ ಪಡಿತರ ಚೀಟಿ ನೀಡಿಕೆಗೆ ಅನುಮತಿ ಕೊಡಲಾಗಿದೆ ಎಂದು ತಿಳಿಸಿದ್ದಾರೆ.

Exit mobile version