ತುಮಕೂರು: ಸ್ಮಶಾನವಿಲ್ಲದ್ದಕ್ಕೆ (No Cemetery) ನಡುರಸ್ತೆಯಲ್ಲಿಯೇ ಶವ ಇಟ್ಟು ಇಲ್ಲಿನ ಮಧುಗಿರಿ ತಾಲೂಕಿನ ಬಿಜವಾರ ಗ್ರಾಮಸ್ಥರು ಪ್ರತಿಭಟಿಸಿದ್ದಾರೆ. ಅನಾರೋಗ್ಯದಿಂದ ಭಾನುವಾರದಂದು ಬಿಜವರ ಗ್ರಾಮದ ಹನುಮಕ್ಕ (75) ಎಂಬುವವರು ಸಾವನ್ನಪ್ಪಿದರು. ಆದರೆ ಶವ ಹೂಳಲು ಜಾಗವಿಲ್ಲದೆ ಕುಟುಂಬದವರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಯಿತು.
ರುದ್ರಭೂಮಿ ಮಂಜೂರು ಮಾಡುವಂತೆ ತಾಲೂಕು ಆಡಳಿತಕ್ಕೆ ಹಲವು ಭಾರಿ ಮನವಿ ಮಾಡಿದರೂ ಯಾವೊಬ್ಬ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದರು. ಸ್ಮಶಾನಕ್ಕೆ ಜಾಗ ಗುರುತಿಸಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದಕ್ಕೆ ಅಸಮಾಧಾನ ಹೊರಹಾಕಿದರು. ತಾಲೂಕು ಆಡಳಿತಾಧಿಕಾರಿಗಳು ಸ್ಥಳ ಗುರುತಿಸುವ ವರೆಗೂ ಮೃತ ದೇಹವನ್ನು ತೆಗೆಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ನನ್ನ ಅವ್ವಳನ್ನ ಎಲ್ಲಿ ಹೂಳಲಿ?
ತಾಯಿಯನ್ನು ಕಳೆದುಕೊಂಡ ದುಃಖ ಒಂದು ಕಡೆಯಾದರೆ ಮತ್ತೊಂದು ಕಡೆ ಮಣ್ಣು ಮಾಡಲು ಜಾಗವಿಲ್ಲದೆ ಇರುವುದಕ್ಕೆ ಮೃತ ಹನುಮಕ್ಕ ಅವರ ಮಗ ಲಕ್ಷ್ಮಣ ಕಣ್ಣೀರು ಹಾಕಿದರು. ʻʻಕೂಲಿ ಕೆಲಸವನ್ನು ಮಾಡುವ ನಾನು ಬಡವ ನನ್ನ ತಾಯಿಯ ಶವ ಹೂಳಲು ಹೊಲ- ಗದ್ದೆ ಯಾವುದು ಇಲ್ಲ. ಗ್ರಾಮದಲ್ಲಿ ಸ್ಮಶಾನವೂ ಇಲ್ಲ. ಈಗ ನನ್ನ ತಾಯಿಯ ಶವವನ್ನು ಎಲ್ಲಿ ಹೊಳುವುದು. ಯಾವ ಅಧಿಕಾರಿಗಳು ನಮ್ಮ ಸಂಕಷ್ಟವನ್ನು ಕೇಳುತ್ತಿಲ್ಲʼʼ ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ | Motivational story| ಯಾರದೋ ಮಗನನ್ನು ಉಳಿಸಲು ಓಡಿ ಬಂದ ಆ ವೈದ್ಯರ ಮಗು ಸ್ಮಶಾನದಲ್ಲಿತ್ತು!