Site icon Vistara News

KSRTC Employees Strike: ಶೇ.15 ವೇತನ ಹೆಚ್ಚಳಕ್ಕೆ ಇಲ್ಲ ಸಹಮತ; ಸಾರಿಗೆ ನೌಕರರ ಮುಷ್ಕರ ಅಬಾಧಿತ

KSRTC Employees Strike

ಬೆಂಗಳೂರು: ಮೂಲ ವೇತನ ಪರಿಷ್ಕರಣೆ, ಭತ್ಯೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿರುವ ಕೆಎಸ್‌ಆರ್‌ಟಿಸಿ ನೌಕರರ (KSRTC Employees Strike) ಆಕ್ರೋಶ ಇನ್ನೂ ತಣ್ಣಗೆ ಆಗಿಲ್ಲ. ಶೇ. 15ರಷ್ಟು ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇದನ್ನು ತಾವು ಒಪ್ಪುವುದಿಲ್ಲ. ತಮ್ಮ ಮುಷ್ಕರವನ್ನು ಹಿಂಪಡೆಯುವುದಿಲ್ಲ ಎಂದು ಎರಡೂ ಬಣಗಳೂ ಪಟ್ಟುಹಿಡಿದಿವೆ. ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆ ಅಧ್ಯಕ್ಷ ಅನಂತ ಸುಬ್ಬರಾವ್ ಹಾಗೂ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಆರ್. ಚಂದ್ರಶೇಖರ್ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಸರ್ಕಾರ ಏಕಾಏಕಿ ಶೇಕಡಾ 15ರಷ್ಟು ವೇತನ ಪರಿಷ್ಕರಣೆ ಮಾಡಿ ಆದೇಶ ಮಾಡಿದೆ. ಈ ವಿಚಾರವನ್ನು ನಾವು ಸುತಾರಾಂ ಒಪ್ಪುವುದಿಲ್ಲ. ನಮಗೆ ಬೇಕಾದ ಸ್ಪಷ್ಟತೆಯನ್ನು ರಾಜ್ಯ ಸರ್ಕಾರ ಕೊಟ್ಟಿಲ್ಲ. ನಮ್ಮ ಪ್ರಮುಖ ಬೇಡಿಕೆಗಳ ಬಗ್ಗೆ ಸ್ಪಷ್ಟ ಉತ್ತರ ಕೊಟ್ಟಿಲ್ಲ. ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಮಂಡಳಿ ಜತೆ ಶುಕ್ರವಾರವೂ (ಮಾ. 17) ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ. ಮಾತುಕತೆ ಆಗುವ ಸಂದರ್ಭದಲ್ಲಿ ಸರ್ಕಾರ ಹೇಗೆ ಏಕ ಸ್ವಾಮ್ಯವಾಗಿ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಗೊತ್ತಾಗುತ್ತಿಲ್ಲ ಎಂದು ಅನಂತ್ ಸುಬ್ಬರಾವ್ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: Murder Case: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ತಮ್ಮನನ್ನೇ ತುಂಡು ತುಂಡಾಗಿ ಕತ್ತರಿಸಿದ್ದ ಅಕ್ಕ; 8 ವರ್ಷಗಳ ಬಳಿಕ ಸೆರೆ ಸಿಕ್ಕಿದ್ದು ಹೇಗೆ?

ವೇತನ ಪರಿಷ್ಕರಣೆ ಆಗಬೇಕು. ಆದರೆ ಈಗ 2023ರಿಂದ ವೇತನ ಪರಿಷ್ಕರಣೆ ಎಂದು ಹೇಳುತ್ತಿದ್ದಾರೆ. ಹಾಗಾದರೆ 38 ತಿಂಗಳ ಅರಿಯರ್ಸ್ ಅನ್ನು ಯಾರು ಕೊಡುತ್ತಾರೆ? ನಮಗೆ 15 ಪರ್ಸೆಂಟ್ ವೇತನ ಪರಿಷ್ಕರಣೆಗೆ ಸಮ್ಮತಿಯಿಲ್ಲ. ಆದರೂ ಈಗ ಏಕಪಕ್ಷೀಯವಾಗಿ ಸರ್ಕಾರ ನಿರ್ಧರಿಸಿದೆ. ನಾವು ಯಾವುದೇ ಕಾರಣಕ್ಕೂ ಮಾರ್ಚ್‌ 21ರಂದು ಕರೆ ನೀಡಿರುವ ಮುಷ್ಕರವನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ. ಈ ಸಂಬಂಧ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಮತ್ತೊಮ್ಮೆ ಪತ್ರ ಬರೆಯುತ್ತೇನೆ. ನಮಗೆ 2020ರ ಜನವರಿ 1ರಿಂದ ವೇತನ ಪರಿಷ್ಕರಣೆ ಆಗಬೇಕು ಎಂದು ಆಗ್ರಹಿಸಿದರು.

24ಕ್ಕೆ ಇನ್ನೊಂದು ಬಣದ ಮುಷ್ಕರ

ಸರ್ಕಾರ ಸಾರಿಗೆ ನೌಕರರ ಮೂಲ ವೇತನಕ್ಕೆ ಶೇಕಡಾ 15ರಷ್ಟನ್ನು ಮಾತ್ರ ಏರಿಕೆ ಮಾಡಿದೆ. ಸರ್ಕಾರ ಹೊರಡಿಸಿರುವ ಈ ಆದೇಶದಿಂದ ನಮ್ಮನ್ನು ಮತ್ತಷ್ಟು ಆರ್ಥಿಕವಾಗಿ ಸಂಕಷ್ಟಕ್ಕೀಡು ಮಾಡುತ್ತಿದೆ. ನಮಗೆ ಅನ್ಯಮಾರ್ಗವಿಲ್ಲದೆ ಮಾರ್ಚ್‌ 24ರಂದು ಅನಿರ್ದಿಷ್ಟಾವಧಿ ಮುಷ್ಕರ ಮಾಡುವ ಸಂದರ್ಭ ಬಂದಿದೆ ಎಂದು ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಇಂಡಿಗೋ ವಿಮಾನದ ಟಾಯ್ಲೆಟ್‌ನಲ್ಲಿ ಸಿಗರೇಟ್‌ ಸೇದಿ ಸಿಕ್ಕಿಬಿದ್ದ; ಒಂದು ಸಿಗರೇಟ್‌ಗಾಗಿ ಜೈಲು ಸೇರಿದ!

ನಾವು ಮೊದಲೇ ಮುಷ್ಕರದ ಬಗ್ಗೆ ನೋಟಿಸ್ ಕೊಟ್ಟಿದ್ದೇವೆ. 8, 10 ದಿನದಲ್ಲಿ ಯಾವುದೇ ನೋಟಿಸ್ ಕೊಡದೇ ಅವರು ಮುಷ್ಕರ ಎಂದು ಘೋಷಣೆ ಮಾಡಿದ್ದಾರೆ. ಇದು ದಾರಿ ತಪ್ಪಿಸುವ, ಗೊಂದಲ ಸೃಷ್ಟಿಸುವ ಹುನ್ನಾರವೇ? ಕಾರ್ಮಿಕ‌ ಸಂಘಟನೆಗಳಲ್ಲಿ ಚುನಾವಣೆ ನಡೆಯಬೇಕು. ಚುನಾವಣೆ ನಡೆಯದಿರುವುದೇ ಇಷ್ಟೆಲ್ಲ ಸಮಸ್ಯೆಗೆ ಕಾರಣ. ನಮ್ಮ ಬೇಡಿಕೆಗಳನ್ನು ಇನ್ನೊಂದು ಬಣದವರು ಸೇರಿಸಿಕೊಂಡರೆ ನಾವು ಅವರ ಮುಷ್ಕರಕ್ಕೆ ಬೆಂಬಲ ಕೊಡುತ್ತೇವೆ. ಈಗಲೂ ಅದನ್ನೇ ಹೇಳುತ್ತೇವೆ. ಒಗ್ಗಟ್ಟು ಇಲ್ಲದಿರುವುದೇ ಸಮಸ್ಯೆಗೆ ಮೂಲ ಕಾರಣ. 26 ವರ್ಷದಿಂದ ಕಾರ್ಮಿಕ ಸಂಘಗಳ ಚುನಾವಣೆ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಇನ್ನೊಂದು ಬಣದ ವಿರುದ್ಧ ನೇರವಾಗಿ ಆರೋಪ ಮಾಡಿದ್ದಾರೆ.

ಸಾರಿಗೆ ನೌಕರರ ಬೇಡಿಕೆ ಏನಿತ್ತು?
• ಮೂಲ ವೇತನವನ್ನು ಶೇ. 25ರಷ್ಟು ಪರಿಷ್ಕರಣೆ ಮಾಡಬೇಕು
• ಬಾಟಾ/ಭತ್ಯೆಯನ್ನು ಐದು ಪಟ್ಟು ಹೆಚ್ಚಿಸಬೇಕು
• ಏಪ್ರಿಲ್ 2011 ರಂದು ವಜಾಗೊಂಡ ಸಿಬ್ಬಂದಿಯ ಮರುನೇಮಕ ಮಾಡಬೇಕು
• ಸಿಬ್ಬಂದಿ ಮೇಲಿನ FIR ರದ್ದು ಮಾಡಬೇಕು
• ಮುಷ್ಕರದ ಸಮಯದಲ್ಲಿ ವರ್ಗಾವಣೆಯಾದ ನೌಕರರ ಮರು ನಿಯೋಜನೆ ಮಾಡಿಕೊಳ್ಳಬೇಕು

Exit mobile version