Site icon Vistara News

CM Siddaramaiah : ದೀಪಾವಳಿಗೂ ಪಟಾಕಿ ಹೊಡೀಬಾರದಾ? ಸಿದ್ದರಾಮಯ್ಯ ಹೇಳಿದ್ದೇನು?

Siddaramaiah Deepavali

ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಮದುವೆ, ಉತ್ಸವ, ರಾಜಕೀಯ ಕಾರ್ಯಕ್ರಮಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಆದರೆ, ದೀಪಾವಳಿಯ ವೇಳೆ ಪಟಾಕಿ ಸಿಡಿಸಲು ಯಾವುದೇ ಅಡ್ಡಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಸ್ಪಷ್ಟಪಡಿಸಿದ್ದಾರೆ.

14 ಮಂದಿಯನ್ನು ಬಲಿ ಪಡೆದುಕೊಂಡ ಅತ್ತಿಬೆಲೆ ಪಟಾಕಿ ದುರಂತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮಂಗಳವಾರ ಸಂಬಂಧಿತ ಅಧಿಕಾರಿಗಳ ಸಭೆಯನ್ನು ಕರೆದಿದ್ದರು. ಈ ಸಭೆಯ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಪಟಾಕಿ ಬಳಕೆ, ಪರವಾನಗಿ ವ್ಯವಸ್ಥೆ ಮೇಲೆ ನಿಗಾ ವಹಿಸಬೇಕಾಗಿದೆ. ಹೀಗಾಗಿ ತುಂಬ ಜನ ಸೇರುವ ಜಾತ್ರೆ, ಮೆರವಣಿಗೆ, ರಾಜಕೀಯ ಕಾರ್ಯಕ್ರಮ, ಮೆರವಣಿಗೆಗಳ ವೇಳೆ ಪಟಾಕಿ ಹೊಡೆಯದಂತೆ ನಿಷೇಧ ವಿಧಿಸಲಾಗುವುದು ಎಂದು ಸಿಎಂ ಹೇಳಿದ್ದರು.

ಆದರೆ, ಸಿಎಂ ಅವರ ಈ ಹೇಳಿಕೆ ದೀಪಾವಳಿ ಸಂದರ್ಭದಲ್ಲೂ ಪಟಾಕಿ ಹೊಡೆಯಬಾರದು ಎಂಬರ್ಥದಲ್ಲಿ ಸುದ್ದಿಯಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಸಿಎಂ ಅವರ ಕಾರ್ಯಾಲಯ, ಕೆಲವು ಮಾಧ್ಯಮಗಳಲ್ಲಿ ದೀಪಾವಳಿಗೆ ಪಟಾಕಿ ಬ್ಯಾನ್ ಮಾಡಲಾಗಿದೆ ಎಂದು ಸುದ್ದಿ ಪ್ರಸಾರ ಆಗುತ್ತಿದೆ. ಇದು ತಪ್ಪು ಗ್ರಹಿಕೆ. ಮದುವೆ, ರಾಜಕೀಯ ಇನ್ನಿತರೆ ಕಾರ್ಯಕ್ರಮಗಳಿಗೆ ಪಟಾಕಿ ನಿಷೇಧವಾಗಿದೆ. ಆದರೆ ಹಸಿರು ಪಟಾಕಿಗೆ ಅವಕಾಶ ಇದೆ. ದೀಪಾವಳಿಗೆ ರೆಗ್ಯುಲರ್ ಪಟಾಕಿಗೂ ಅವಕಾಶ ಇದೆ. ಆದರೆ ಲೈಸೆನ್ಸ್ ನಿಯಮಗಳನ್ನು ಉಲ್ಲಂಘಿಸುವವರ ಲೈಸೆನ್ಸ್ ಮಾತ್ರ ರದ್ದಾಗಲಿದೆ ಎಂದು ತಿಳಿಸಲಾಗಿದೆ.

ʻʻದೀಪಾವಳಿಗೂ ಹಸಿರು ಪಟಾಕಿ ಸಿಡಿಸುವುದು ಮಕ್ಕಳ ಆರೋಗ್ಯ, ಸುರಕ್ಷತೆ ಮತ್ತು ಪರಿಸರಕ್ಕೂ ಒಳ್ಳೆಯದು ಎನ್ನುವ ಚರ್ಚೆ ನಡೆದಿದೆ ಅಷ್ಟೆ. ಆದರೆ ದೀಪಾವಳಿಗೆ ಯಾವ ಪಟಾಕಿಯನ್ನೂ ನಿಷೇಧಿಸಿಲ್ಲʼʼ ಎಂದು ಸಿಎಂ ಅವರ ಕಾರ್ಯಾಲಯ ಸ್ಪಷ್ಟಪಡಿಸಿದೆ.

ಇದನ್ನೂ ಓದಿ : Attibele Fire Accident: ಅತ್ತಿಬೆಲೆ ದುರಂತ; ಮೃತ 14 ಜನರ ಪೈಕಿ 8 ಯುವಕರು ಒಂದೇ ಗ್ರಾಮದವರು!

ಸಭೆಯಲ್ಲಿ ಚರ್ಚೆಯಾದ ವಿಚಾರಗಳು, ಸಿದ್ದರಾಮಯ್ಯ ಹೇಳಿದ್ದು

  1. ಪಟಾಕಿಗಳನ್ನು ಸಿಡಿಸುವ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಆದೇಶವನ್ನು ರಾಜ್ಯದಲ್ಲೂ ಕಡ್ಡಾಯವಾಗಿ ಪಾಲಿಸಲಾಗುವುದು.
  2. ದೀಪಾವಳಿ ಸನಿಹದಲ್ಲಿರುವುದರಿಂದ ಇನ್ನಷ್ಟು ಮುನ್ನೆಚ್ಚರಿಕೆ ವಹಿಸಬೇಕು.
  3. ಇನ್ನು ಮುಂದೆ ಖಾಸಗಿ ಕಾರ್ಯಕ್ರಮಗಳಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಬೇಕು ಎಂದು ಸೂಚನೆ ನೀಡಿದ್ದೇನೆ.
  4. ಇನ್ನು ಮುಂದೆ ಮೆರವಣಿಗೆಯ ವೇಳೆ ಪಟಾಕಿ ಹೊಡೆಯೋ ಹಾಗಿಲ್ಲ. ಮದುವೆ, ಗಣೇಶೋತ್ಸವ ಮತ್ತಿತರ ತುಂಬ ಜನರು ಸೇರುವ ಕಡೆಗಳಲ್ಲೂ ಪಟಾಕಿ ಬ್ಯಾನ್‌ ಮಾಡಲಾಗುತ್ತದೆ. ರಾಜಕೀಯ ಕಾರ್ಯಕ್ರಮಗಳಲ್ಲೂ ಪಟಾಕಿ ಹೊಡೆಯುವಂತಿಲ್ಲ.
  5. ಹೊಡೆಯುವುದಿದ್ದರೆ ಕಡಿಮೆ ತೀವ್ರತೆಯ ಹಸಿರು ಪಟಾಕಿ ಹೊಡೆಯಬಹುದು.
  6. ಅತ್ತಿಬೆಲೆ ದುರಂತವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ನಿಗದಿತ ಮಾನದಂಡ ಪೂರೈಸದಿದ್ದರೂ, ತಪಾಸಣಾ ವರದಿ ನೀಡಿ ಪಟಾಕಿ ಅಂಗಡಿ ಇಡಬಹುದು ಎಂದು ಶಿಫಾರಸು ಮಾಡಿದ ಸರ್ಕಲ್‌ ಇನ್ಸ್‌ಪೆಕ್ಟರ್‌, ತಹಸೀಲ್ದಾರ್‌, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳನ್ನು ಅಮಾನತು ಮಾಡಲು ಸೂಚನೆ
  7. ಎಕ್ಸ್‌ಪ್ಲೋಸಿವ್‌ ಆಕ್ಟ್‌ ನಲ್ಲಿ ಲೈಸೆನ್ಸ್‌ ಕೊಡುವಾಗ ನೀವು ಎಚ್ಚರಿಕೆ ವಹಿಸಬೇಕು.
  8. ಇನ್ನು ಮುಂದೆ ಲೈಸನ್ಸ್‌ ನೀಡುವಾಗ ಜಿಲ್ಲಾಧಿಕಾರಿಗಳು, ಪೊಲೀಸ್‌ ಅಧೀಕ್ಷಕರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು.
Exit mobile version