Site icon Vistara News

Hiremagaluru Kannan: ಕಣ್ಣನ್‌ ತಪ್ಪಿಲ್ಲ, ನೋಟಿಸ್‌ ವಾಪಸ್‌ಗೆ ಸೂಚಿಸುವೆ: ಸಚಿವ ರಾಮಲಿಂಗಾರೆಡ್ಡಿ

Hiremagaluru Kannan and Ramalinga Reddy

ಚಿಕ್ಕಮಗಳೂರು: ಹಿರೇಮಗಳೂರು ಕೋದಂಡ ರಾಮಚಂದ್ರಸ್ವಾಮಿ ದೇವಾಲಯದ ಅರ್ಚಕರು, ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್‌ (Hiremagaluru Kannan) ಅವರಿಗೆ ವೇತನ ತಡೆಹಿಡಿದು ಜಿಲ್ಲಾಡಳಿತ ನೋಟಿಸ್ ನೀಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ಇದರಲ್ಲಿ ಕಣ್ಣನ್‌ ಅವರದು ಯಾವುದೇ ತಪ್ಪಿಲ್ಲ. ಅವರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಿಲ್ಲ ಎಂದು ತಿಳಿಸಿದ್ದಾರೆ.

ದೇವಾಲಯದ ವಾರ್ಷಿಕ ಆದಾಯಕ್ಕಿಂತ ವೆಚ್ಚವೇ ಹೆಚ್ಚುವರಿಯಾಗಿದೆ ಎಂದು ದೇವಸ್ಥಾನದ ಅರ್ಚಕರಿಗೆ ನೀಡುತ್ತಿದ್ದ ಸಂಬಳವನ್ನು ರಾಜ್ಯ ಸರ್ಕಾರವು ವಾಪಸ್ ಕೇಳಿತ್ತು. ಈ ಸಂಬಂಧ ಹಿರೇಮಗಳೂರು ಕಣ್ಣನ್‌ ಅವರ ವೇತನ ತಡೆಹಿಡಿದು ಚಿಕ್ಕಮಗಳೂರು ತಹಸೀಲ್ದಾರ್‌ ನೋಟಿಸ್ ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ಪ್ರತಿ ವರ್ಷ ತಸ್ತೀಕ್ ಹಣವನ್ನು ದೇವಾಲಯಗಳಿಗೆ ನೀಡಲಾಗುತ್ತದೆ. ಕಣ್ಣನ್ ಅವರ ವಿಚಾರದಲ್ಲಿ 24 ಸಾವಿರ ಬದಲು 90 ಸಾವಿರ ರೂ. ನೀಡಲಾಗಿದೆ. ಇದರಲ್ಲಿ ತಹಸೀಲ್ದಾರ್‌ರವರ ತಪ್ಪಿನಿಂದ ಈ ರೀತಿ ಆಗಿರುವುದು ಗಮನಕ್ಕೆ ಬಂದಿದೆ. ಯಾವುದೇ ಕಾರಣಕ್ಕೂ ಕಣ್ಣನ್ ಅವರ ತಪ್ಪಲ್ಲ. ಇಲಾಖೆಯ ಆಯುಕ್ತರ ಗಮನಕ್ಕೆ ತಂದು ನೊಟೀಸ್ ವಾಪಸ್‌ ಪಡೆಯುವಂತೆ ಸೂಚಿಸುತ್ತೇನೆ. ಹೆಚ್ಚುವರಿ ಪಾವತಿ ಮಾಡಿರೋ ಹಣವನ್ನು ತಹಸೀಲ್ದಾರ್‌ರಿಂದ ವಸೂಲು ಮಾಡಬೇಕು. ಕಣ್ಣನ್ ಅವರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Ram Mandir: ರಾಮನನ್ನೇ ಇಬ್ಭಾಗ ಮಾಡಲು ಹೊರಟ ಕಾಂಗ್ರೆಸ್‌ಗೆ ಧಿಕ್ಕಾರ: ಪ್ರಲ್ಹಾದ್ ಜೋಶಿ ಕಿಡಿ

ಏನಿದು ಪ್ರಕರಣ?

ವಾರ್ಷಿಕ ಆದಾಯಕ್ಕಿಂತ ವಾರ್ಷಿಕ ವೆಚ್ಚವೇ ಹೆಚ್ಚುವರಿಯಾಗಿದೆ ಎಂದು ಕನ್ನಡದ ಪೂಜಾರು ಎಂದೇ ಖ್ಯಾತಿ ಪಡೆದಿರುವ ಹಿರೇಮಗಳೂರು ಕಣ್ಣನ್‌ ಅವರಿಗೆ (Hiremagaluru Kannan) ವೇತನ ತಡೆಹಿಡಿದು ಚಿಕ್ಕಮಗಳೂರು ಜಿಲ್ಲಾಡಳಿತವು ನೋಟಿಸ್ ನೀಡಿತ್ತು. ಕಣ್ಣನ್‌ ಅವರು ಹಿರೇಮಗಳೂರು ಗ್ರಾಮದಲ್ಲಿರುವ ಕೋದಂಡ ರಾಮಚಂದ್ರಸ್ವಾಮಿ ದೇವಾಲಯದ ಅರ್ಚಕರಾಗಿದ್ದಾರೆ.

ದೇವಾಲಯದ ಆದಾಯ ಕಡಿಮೆ ಇದ್ದು, ಸಂಬಳ ಹೆಚ್ಚುವರಿಯಾಗಿ ಪಾವತಿ ಆಗಿದೆ. ಹೀಗಾಗಿ 4,500 ರೂಪಾಯಿಯಂತೆ 10 ವರ್ಷದ 4,74,000 ರೂ. ಹಣವನ್ನು ವಾಪಸ್ ನೀಡಲು ಸೂಚನೆ ನೀಡಲಾಗಿತ್ತು. ಕಣ್ಣನ್ ಅವರ ಖಾತೆಗೆ ಪ್ರತಿ ತಿಂಗಳು 7,500 ರೂ. ಸಂಬಳ ಜಮೆಯಾಗುತ್ತಿತ್ತು. 7,500 ರೂಪಾಯಿ ನೀಡಿದ ಸಂಬಳದಲ್ಲಿ 4,500 ರೂ. ನಂತೆ 10 ವರ್ಷದ ಹಣವನ್ನು ವಾಪಸ್ ನೀಡಲು ಸೂಚನೆ ನೀಡಲಾಗಿತ್ತು. ಸದ್ಯ ಪ್ರತಿ ತಿಂಗಳ ಬರುತ್ತಿದ್ದ ಸಂಬಳವನ್ನು ತಡೆ ಹಿಡಿಯಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ಚಿಕ್ಕಮಗಳೂರು ತಹಸೀಲ್ದಾರ್ ಸುಮಂತ್ ನೋಟಿಸ್ ಜಾರಿ ಮಾಡಿದ್ದರು.

ಇದನ್ನೂ ಓದಿ | Ram Mandir: ಯುವನಿಧಿ ಹೆಸರಲ್ಲಿ ಯುವಜನತೆಗೆ ಟೋಪಿ ಹಾಕಿದ ನೀವು ರಾಮನಂತೆ ಸತ್ಯವಂತರೇ? ಸಿಎಂಗೆ ಅಶೋಕ್ ಪ್ರಶ್ನೆ

ಕನ್ನಡದ ಪೂಜಾರಿ ಎಂದೇ ಖ್ಯಾತಿ ಪಡೆದಿರುವ ಹಿರೇಮಗಳೂರು ಕಣ್ಣನ್ ಅವರು 50 ವರ್ಷಗಳಿಂದ ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಈ ನೋಟಿಸ್ ಕಂಡು ಕಣ್ಣನ್ ಅವರು ಆತಂಕಗೊಂಡಿದ್ದಾರೆ.

ಶ್ರೇಷ್ಠ ಕನ್ನಡ ವಿದ್ವಾಂಸರಿಗೆ ನೋಟಿಸ್‌ ಖಂಡನೀಯ; ಬಿ.ವೈ.ವಿಜಯೇಂದ್ರ

BY Vijayendra in yojana Sabhe

ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಅವರಿಗೆ ನೋಟಿಸ್‌ ನೀಡಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಡಳಿತ ತುಘಲಕ್ ಹಾದಿಯಲ್ಲಿ ನಡೆದಿದೆ. ಹಿಂದು ಧರ್ಮೀಯರ ಧಾರ್ಮಿಕ ಕ್ಷೇತ್ರದಲ್ಲಿಯೂ ಆದಾಯ ಗಳಿಕೆಯನ್ನು ಮಾನದಂಡವನ್ನಾಗಿಸಿಕೊಂಡು ಹಿರೇಮಗಳೂರು ಕಣ್ಣನ್ ಅವರಂತಹ ನಾಡಿನ ಶ್ರೇಷ್ಠ ಕನ್ನಡ ವಿದ್ವಾಂಸ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶಕರಿಗೆ ನೋಟಿಸ್ ನೀಡಿರುವ ಕ್ರಮ ಅತ್ಯಂತ ಹಾಸ್ಯಾಸ್ಪದ ಹಾಗೂ ಖಂಡನೀಯ.

ಹಿಂದು ಆಚಾರ-ವಿಚಾರ ಹಾಗೂ ಧಾರ್ಮಿಕ ಕೇಂದ್ರಗಳನ್ನೇ ಗುರಿಯನ್ನಾಗಿಸಿಕೊಂಡು ಕಾಂಗ್ರೆಸ್ ಸರ್ಕಾರ ಆಗಾಗ ಸರಣೀ ರೂಪದಲ್ಲಿ ಜನರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಧರ್ಮನಿಷ್ಠರ ಸಹನೆಯನ್ನು ಕೆಣಕುವಂತಿದೆ ಎಂದು ಟೀಕಿಸಿದ್ದಾರೆ.

ಹಿರೇಮಗಳೂರು ಕಣ್ಣನ್ ಅವರಿಗೆ ನೀಡಿರುವ ನೋಟಿಸ್ ಅನ್ನು ಈ ಕೂಡಲೇ ಬೇಷರತ್ ಕ್ಷಮೆ ಯಾಚಿಸಿ ಸರ್ಕಾರ ವಾಪಸ್ ಪಡೆಯಬೇಕು, ಇಂಥ ಅಸಂಬದ್ಧ ನೋಟಿಸ್ ನೀಡಿದ ಅವಿವೇಕಿ ಅಧಿಕಾರಿಯನ್ನು ಕೂಡಲೇ ಅಮಾನತ್ತಿನಲ್ಲಿಡಲಿ ಎಂದು ಒತ್ತಾಯಿಸಿದ್ದಾರೆ.

Exit mobile version