ಚಿತ್ರದುರ್ಗ: ಈ ಬಾರಿಯ ಗಣರಾಜ್ಯೋತ್ಸವದಲ್ಲಿ (Republic Day 2023) ಕರ್ನಾಟಕದ ಸ್ತಬ್ಧಚಿತ್ರ ಪಾಲ್ಗೊಳ್ಳುತ್ತಿಲ್ಲ(No Karnataka Tableau). ಈ ವಿಷಯವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಖಚಿತಪಡಿಸಿದ್ದಾರೆ. ದಿಲ್ಲಿಯ ಕರ್ತವ್ಯಪಥದಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಈವರೆಗೆ ಕರ್ನಾಟಕವು 13 ಬಾರಿ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಿದ್ದು, ಸಾಕಷ್ಟು ಬಾರಿ ಟಾಪ್ 3 ಪಟ್ಟಿಯಲ್ಲಿ ಜಾಗವನ್ನು ಪಡೆದುಕೊಂಡಿದೆ. ಕಳೆದ ಬಾರಿ ಎರನಡೇ ಸ್ಥಾನವನ್ನು ಪಡೆದುಕೊಂಡಿತ್ತು. ಕರ್ನಾಟಕ ಸರ್ಕಾರವು ಈ ಬಾರಿ ಮಹಿಳಾ ಸಬಲೀಕರಣದ ಪರಿಕಲ್ಪನೆಯಡಿ ಸಾಲುಮರದ ತಿಮ್ಮಕ್ಕ ಮತ್ತು ಸೂಲಗಿತ್ತಿ ನರಸಮ್ಮ ಅವರ ಟ್ಯಾಬ್ಲೋ ಮಾದರಿಯನ್ನು ಆಯ್ಕೆ ಸಮಿತಿಗೆ ಕಳುಹಿಸಿತ್ತು.
ಗಣರಾಜ್ಯೋತ್ಸವಕ್ಕೆ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲು ಕೇಂದ್ರ ಸರ್ಕಾರವು ತನ್ನದೇ ಆದ ವ್ಯವಸ್ಥೆಯನ್ನು ಹೊಂದಿದೆ. ಪ್ರತಿ ವರ್ಷ 36 ಸ್ತಬ್ಧಚಿತ್ರಗಳಲ್ಲಿ 12 ಸ್ತಬ್ಧಚಿತ್ರಗಳನ್ನು ಮಾತ್ರವೇ ಆಯ್ಕೆ ಮಾಡಲಾಗುತ್ತದೆ. ಆದರೆ, ಈ ಬಾರಿ ಕರ್ನಾಟಕದ ಸ್ತಬ್ಧಚಿತ್ರವೂ ಆಯ್ಕೆಯಾಗಿಲ್ಲ. ಈಗಾಗಲೇ 13 ಬಾರಿ ಕರ್ನಾಟಕ ಪ್ರತಿನಿಧಿಸಿದೆ. ಒಂದೊಮ್ಮೆ ಸ್ಪರ್ಧೆಗೆ ಆಗಮಿಸುವ ಎಲ್ಲ 36 ಸ್ತಬ್ಧಚಿತ್ರಗಳಿಗೆ ಅವಕಾಶ ಕೊಟ್ಟರೆ, ಒಂದೂವರೆ ಗಂಟೆಯ ಬದಲು 4 ಗಂಟೆ ಸ್ತಬ್ಧಚಿತ್ರ ಮೆರವಣಿಗೆ ಮಾಡಬೇಕಾಗುತ್ತದೆ. ಹಾಗಿದ್ದೂ, ಕರ್ನಾಟಕದ ಟ್ಯಾಬ್ಲೋ ಆಯ್ಕೆಗೆ ಪ್ರಯತ್ನಿಸಲಾಗುವುದು ಎಂದು ಸಚಿವ ಪ್ರಹ್ಲಾದ್ ಜೋಶಿ ಅವರು ಚಿತ್ರದುರ್ಗದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸಾಲಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮ ಟ್ಯಾಬ್ಲೋ
ಕರ್ನಾಟಕವು ಈ ಬಾರಿ ಮಹಿಳಾ ಸಬಲೀಕರಣದ ಪರಿಕಲ್ಪನೆಯಡಿ, ಸಾಲುಮರದ ತಿಮ್ಮಕ್ಕ (salumarad Timmakka) ಮತ್ತು ಸೂಲಗಿತ್ತಿ ನರಸಮ್ಮ (Sulagitti Narasamma) ಅವರ ಟ್ಯಾಬ್ಲೋ ಮಾದರಿಯನ್ನು ತಯಾರಿಸಿ, ಆಯ್ಕೆ ಸಮಿತಿಗೆ ಕಳುಹಿಸಿತ್ತು. ಆದರೆ, ಕೇಂದ್ರ ಆಯ್ಕೆ ಸಮಿತಿಯು ಈ ಮಾದರಿಯನ್ನು ತಿರಸ್ಕರಿಸಿದೆ. ಬೇರೆ ರಾಜ್ಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವುದಕ್ಕಾಗಿ ಕೇಂದ್ರ ಆಯ್ಕೆ ಸಮಿತಿಯು ಈ ಬಾರಿ ಕರ್ನಾಟಕದ ಟ್ಯಾಬ್ಲೋವನ್ನು ಆಯ್ಕೆ ಮಾಡಿಲ್ಲ ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಪಿ ಹರ್ಷ ತಿಳಿಸಿದ್ದಾರೆ.
ಸ್ಯಾಂಟ್ರೋ ರವಿ ಗೊತ್ತಿಲ್ಲ
ಕರ್ನಾಟಕದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ಸ್ಯಾಂಟ್ರೋ ರವಿ ಯಾರೆಂದು ತಮಗೆ ಗೊತ್ತಿಲ್ಲ ಎಂದು ಹೇಳಿರುವ ಪ್ರಹ್ಲಾದ್ ಜೋಶಿ ಅವರು, ವಿವಿದ ಸಮುದಾಯಗಳಿಗೆ ಮೀಸಲಾತಿ ನೀಡುವ ವಿಷಯದಲ್ಲಿ ಮುಖ್ಯಮಂತ್ರಿ ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಹೆಜ್ಜೆ ಇಟ್ಟಿದ್ದಾರೆಂದು ಬಣ್ಣಿಸಿದರು.
ಖರ್ಗೆ ವಿರುದ್ಧ ಕಿಡಿ
ರಾಮ ಮಂದಿರ ಉದ್ಘಾಟಿಸುವುದಾಗಿ ಅಮಿತ್ ಶಾ ಹೇಳಿದ್ದಾರೆ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರು, ಅಮಿತ್ ಶಾ ಮೇಸ್ತ್ರೀ ನಾ? ಗೌಂಡಿನಾ ಎಂದು ಕೇಳಿದ್ದಾರೆ. ರಾಮ ಮಂದಿರ ಉದ್ಘಾಟಿಸುತ್ತೇವೆಂದರೆ ಇವರಿಗೆ ಯಾಕೆ ಹೊಟ್ಟೆಕಿಚ್ಚು? ರಾಮನ ಬಗ್ಗೆ, ಹಿಂದೂಗಳ ಬಗ್ಗೆ ಯಾಕಷ್ಟು ದ್ವೇಷ ಎಂದು ಪ್ರಶ್ನಿಸಿದರು.
ಇದನ್ನೂ ಓದಿ | Amrit Mahotsav | ಕತಾರ್‌ನ ಇಂಡಿಯನ್ ಕಲ್ಚರಲ್ ಸೆಂಟರ್‌ನಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ