ಬೆಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಂದೆಯವರು ಈಗ ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ. ಅವರನ್ನು ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿದ್ದು, ಶೀಘ್ರವೇ ಮನೆಗೆ ಮರಳಲಿದ್ದಾರೆ. ಕೆಲ ದಿನ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ನಿಖಿಲ್ ಕುಮಾರಸ್ವಾಮಿ ಅವರು, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು, ಅಭಿಮಾನಿಗಳು ಯಾರು ಕೂಡ ಆತಂಕ ಪಡಬೇಕಿಲ್ಲ. ತಂದೆಯವರು ಕ್ಷೇಮವಾಗಿದ್ದು, ಕೆಲ ದಿನಗಳಲ್ಲಿಯೇ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ತಂದೆಯವರ ಆರೋಗ್ಯ ಚೇತರಿಕೆಗಾಗಿ ಪ್ರೀತಿ, ವಾತ್ಸಲ್ಯದಿಂದ ಪ್ರಾರ್ಥನೆ ಮಾಡಿದ ಎಲ್ಲ ಕಾರ್ಯಕರ್ತ ಬಂಧುಗಳು, ನಾಡಿನ ಜನರಿಗೆ ನನ್ನ ವಂದನೆಗಳು. ಹಾಗೆಯೇ, ತಂದೆಯವರ ಆರೋಗ್ಯ ವಿಚಾರಿಸಿದ ವಿವಿಧ ಮಠಗಳ ಪೂಜ್ಯ ಸ್ವಾಮೀಜಿಗಳವರಿಗೆ ಹಾಗೂ ಕ್ಷೇಮ ವಿಚಾರಿಸಿದ ಹಲವಾರು ಪಕ್ಷಗಳ ಹಿರಿಯ ನಾಯಕರಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು ಎಂದು ಹೇಳಿದ್ದಾರೆ.
ಇದನ್ನೂ ಓದಿ | HD Kumaraswamy: ಎಚ್‌ಡಿಕೆ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ
ಕುಮಾರಸ್ವಾಮಿ ಆರೋಗ್ಯದಲ್ಲಿ ತೊಂದರೆ ಇಲ್ಲ: ಸುತ್ತೂರು ಶ್ರೀಗಳು
ಕುಮಾರಸ್ವಾಮಿ ಅವರು ಆರೋಗ್ಯವಾಗಿ ಲವಲವಿಕೆಯಿಂದ ಇದ್ದಾರೆ. ನಾನು ಹೋದಾಗ ಪೇಪರ್ ಓದುತ್ತಾ ಕುಳಿತಿದ್ದರು. ನಿಖಿಲ್ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಕೂಡ ಅಲ್ಲೇ ಇದ್ದರು. ಕುಮಾರಸ್ವಾಮಿ ಆರೋಗ್ಯದಲ್ಲಿ ಏನೂ ತೊಂದರೆ ಇಲ್ಲ. ಇಂದು ಅವರು ಡಿಸ್ಚಾರ್ಜ್ ಅಗಬೇಕಿತ್ತು. ಅದರೆ, ನಾಳೆ ಡಿಸ್ಚಾರ್ಜ್ ಮಾಡುವುದಾಗಿ ವೈದ್ಯರು ತಿಳಿಸಿರುವುದಾಗಿ ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರು ತಿಳಿಸಿದ್ದಾರೆ.
ಜಯನಗರದ ಅಪೊಲೋ ಆಸ್ಪತ್ರೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳು ತಮ್ಮ ಜತೆ ತುಂಬಾ ಹೊತ್ತು ಮಾತನಾಡಿದರು. ಅವರಯ ಯಾವ ಸಮಸ್ಯೆ ಇಲ್ಲದೆ ಚೇತರಿಕೆಯಾಗುತ್ತಾರೆ. ಡಾಕ್ಟರ್ ಬಳಿಯೂ ಚರ್ಚೆ ಮಾಡಿದ್ದೇನೆ. ಎಂದು ಹೇಳಿದರು.
ಅಪೊಲೋ ಆಸ್ಪತ್ರೆಗೆ ಆರ್.ಅಶೋಕ್, ಸಿಪಿವೈ ಭೇಟಿ
ಅಪೊಲೋ ಆಸ್ಪತ್ರೆಗೆ ಮಾಜಿ ಸಚಿವರಾದ ಆರ್. ಅಶೋಕ್ ಮತ್ತು ಸಿ.ಪಿ.ಯೋಗೇಶ್ವರ್ ಅವರು ಭೇಟಿ ನೀಡಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದರು.
ಈ ವೇಳೆ ಆರ್.ಅಶೋಕ್ ಮಾತನಾಡಿ, ಈಗ ತಾನೆ ಕುಮಾರಣ್ಣನನ್ನು ಭೇಟಿ ಮಾಡಿದೆ. ಅವರ ಕುಟುಂಬಸ್ಥರು ಕೂಡ ಜತೆಯಲ್ಲಿ ಇದ್ದರು. ನನ್ನ ಜತೆ ರಾಜಕಾರಣ, ಬೇರೆ ಬೇರೆ ವಿಚಾರ ಚರ್ಚೆ ಮಾಡಿದರು. ಅವರ ಆರೋಗ್ಯ ಉತ್ತಮವಾಗಿದ್ದು, ನಾಳೆ ಡಿಸ್ಚಾರ್ಜ್ ಆಗಲಿದ್ದಾರೆ. ಕುಮಾರಣ್ಣ ಅವರ ಮೈಂಡ್ ಸ್ಟ್ರೆಂತ್ ಚೆನ್ನಾಗಿದೆ. ಅವರ ಮೇಲೆ ತಿರುಪತಿ ತಿಮ್ಮಪ್ಪನ ಆಶೀರ್ವಾದ ಇದೆ. ಕುಮಾರಸ್ವಾಮಿ ಅವರ ರಾಜಕೀಯ ಜೀವನ ದೊಡ್ಡದಿದೆ. ದೇವರು ಅವರಿಗೆ ಆರೋಗ್ಯ ಭಾಗ್ಯ ಕೊಡಲಿ ಹಾರೈಸಿದರು.
ಇದನ್ನೂ ಓದಿ | Prajwal Revanna: ಸಂಸತ್ ಸದಸ್ಯತ್ವದಿಂದ ಪ್ರಜ್ವಲ್ ರೇವಣ್ಣ ಅನರ್ಹ; ಹೈಕೋರ್ಟ್ ಆದೇಶ
ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಮಾತನಾಡಿ, ಮಾಜಿ ಸಿಎಂ ಕುಮಾರಸ್ವಾಮಿ ನನ್ನ ಹಳೆಯ ಕ್ಷೇತ್ರದ ಶಾಸಕರು. ಹೀಗಾಗಿ ಅವರ ಆರೋಗ್ಯ ವಿಚಾರಿಸಿದೆ. ವೈಯಕ್ತಿಕವಾಗಿ ನನಗೂ ಅವರಿಗೂ ಯಾವುದೇ ದ್ವೇಷ ಇಲ್ಲ. ರಾಜಕೀಯವಾಗಿ ಯಾವುದೇ ಒಳ ಒಪ್ಪಂದ ಇಲ್ಲ. ಅವರ ಆರೋಗ್ಯ ಸರಿ ಇಲ್ಲದ ಕಾರಣ ಭೇಟಿ ಮಾಡಿದೆ. ಅವರು ಚೆನ್ನಾಗಿದ್ದಾರೆ, ಏನೂ ತೊಂದರೆ ಇಲ್ಲ. ಅದು ಬಿಟ್ಟು ಯಾವುದೇ ರಾಜಕಾರಣ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.