Site icon Vistara News

Caste Census: ಕಾಂತರಾಜ ವರದಿಗೆ ವಿರೋಧವಿಲ್ಲ, ಸರಿಪಡಿಸಲಷ್ಟೇ ಕೋರಿಕೆ: ಎಂ.ಬಿ. ಪಾಟೀಲ್‌

Minister MB Patil statement in janandolana programme by congress party at ramanagara

ಬೆಂಗಳೂರು: ಕಾಂತರಾಜ ವರದಿಗೆ (Caste Census) ನಮ್ಮ ವಿರೋಧವೇನೂ ಇಲ್ಲ. ಆದರೆ, ಅದನ್ನು ಸ್ವಲ್ಪಮಟ್ಟಿಗೆ ಸರಿಪಡಿಸುವಂತೆ ಮುಖ್ಯಮಂತ್ರಿ ಅವರಲ್ಲಿ ಕೇಳಿಕೊಂಡಿದ್ದೇವೆ ಎಂದು ಸಚಿವ ಎಂ.ಬಿ. ಪಾಟೀಲ್‌ ಮಂಗಳವಾರ ಸ್ಪಷ್ಟಪಡಿಸಿದರು.

ಹಿಂದುಳಿದ ವರ್ಗಗಳ ಸ್ವಾಮೀಜಿಗಳ ತಂಡವೊಂದು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಕಾಂತರಾಜ ವರದಿ ಸ್ವೀಕರಿಸಲು ಆಗ್ರಹಿಸಿರುವ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಈಗಿನ ನಿಯಮಗಳ ಪ್ರಕಾರ, ಜಾತಿ ನಮೂದಿಸುವಾಗ ಲಿಂಗಾಯತ ಉಪಪಂಗಡಗಳ ಹೆಸರನ್ನು ನಮೂದಿಸಿದರೆ ಸಮುದಾಯದ ಉಪಪಂಗಡಗಳಿಗೆ ಸೇರಿದವರಿಗೆ ಮೀಸಲಾತಿ ಸಿಗುವುದಿಲ್ಲ. ಆದ್ದರಿಂದ, ಸಮುದಾಯಕ್ಕೆ ಸೇರಿದವರು ಜಾತಿ ನಮೂದಿಸುವಾಗ ಲಿಂಗಾಯತ ಉಪಪಂಗಡದ ಹೆಸರು ಹಾಕುತ್ತಿಲ್ಲ. ಇದನ್ನು ಸರಿಪಡಿಸಿದರೆ, ಜಾತಿ ನಮೂದಿಸುವಾಗ ಲಿಂಗಾಯತ ಉಪಪಂಗಡಗಳ ಹೆಸರು ನಮೂದಿಸಲು ಸಾಧ್ಯವಾಗುತ್ತದೆ. ಹೀಗಾದಾಗ, ಸಹಜವಾಗಿಯೇ ಲಿಂಗಾಯತ ಸಮುದಾಯದ ಜನಸಂಖ್ಯೆ ಶೇ. 22ರವರೆಗೆ ಹೆಚ್ಚಾಗುವ ಸಂಭವವಿದೆ ಎಂದು ಅವರು ವಿವರಿಸಿದರು.

ಬೆಳಗಾವಿ ಮುಂಚೆ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಹೌದು, ಅವರು ಹೇಳಿರುವುದು ಐತಿಹಾಸಿಕ ಸತ್ಯ. ಅದು ಎಲ್ಲರಿಗೂ ಗೊತ್ತಿರುವಂತದ್ದೇ. ಅದನ್ನು ಹೇಳುವುದು ತಪ್ಪೇನೂ ಅಲ್ಲ. ಆದರೆ, ಮುಂಚೆ ಮುಂಬೈ, ಹೈದರಾಬಾದ್, ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟ ಪ್ರದೇಶಗಳು ಪುನರ್ ವಿಂಗಡಣೆ ನಂತರ ಸಮಗ್ರ ಕರ್ನಾಟಕದ ಭಾಗವಾಗಿವೆ. ಅಂತಹ ಎಲ್ಲಾ ಪ್ರದೇಶಗಳು ಈಗ ಸಮಗ್ರ ಕರ್ನಾಟಕದಲ್ಲೇ ಇವೆ ಎಂದರು.

ಸರ್ಕಾರದಲ್ಲಿ ಇನ್ನೂ ಮೂವರು ಡಿಸಿಎಂಗಳ ನೇಮಕಾತಿ ಬಗ್ಗೆ ಕೇಳಿದಾಗ, ಇದಕ್ಕೆ ಸಂಬಂಧಿಸಿದಂತೆ ನನ್ನ ನಿಲುವಿನಲ್ಲಿ ಯಾವ ಬದಲಾವಣೆಯೂ ಇಲ್ಲ. ಈ ಬಗ್ಗೆ ಹೈಕಮಾಂಡ್ ಅಭಿಪ್ರಾಯ ಕೇಳಿದರೆ, ಅದನ್ನು ನಾಯಕರ ಮುಂದೆ ನಾಲ್ಕು ಗೋಡೆಗಳ ಮಧ್ಯೆ ತಿಳಿಸುತ್ತೇನೆ. ಅದನ್ನು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ ಎಂದು ಪುನರುಚ್ಚರಿಸಿದರು.

ಸಬರ್ಬನ್ ರೈಲು; 31 ಮೀ. ಉದ್ದದ ಯು-ಗರ್ಡರ್ ಸಿದ್ಧ

suburban rail project 3

ಬೆಂಗಳೂರು: ಮಹತ್ವಾಕಾಂಕ್ಷಿ ಬೆಂಗಳೂರು ಸಬರ್ಬನ್ ರೈಲು ಯೋಜನೆಯ (Bengaluru Suburban Rail Project) ಕಾರಿಡಾರ್-2ರಲ್ಲಿ ಅಳವಡಿಸಲಿರುವ ದಾಖಲೆಯ 31 ಮೀ. ಉದ್ದದ ಯು-ಗರ್ಡರ್ ಅನ್ನು ದೇವನಹಳ್ಳಿಯಲ್ಲಿರುವ ಕಾಮಗಾರಿ ಸ್ಥಾವರದಲ್ಲಿ (ಕಾಸ್ಟಿಂಗ್ ಯಾರ್ಡ್) ಶನಿವಾರ ರಾತ್ರಿ ಸಿದ್ಧಪಡಿಸಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.

ಈ ಬಗ್ಗೆ ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ದೇಶದ ಉಳಿದ ಮೆಟ್ರೋಗಳಲ್ಲಿ 28 ಮೀ. ಉದ್ದದ ಗರ್ಡರ್ (ಸಿಮೆಂಟ್ ಮತ್ತು ಕಬ್ಬಿಣದ ತೊಲೆ) ತಯಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಬೆಂಗಳೂರು ಸಬರ್ಬನ್ ರೈಲು ಯೋಜನೆಯಲ್ಲಿ ಈ ದಾಖಲೆಯನ್ನು ಮುರಿಯಲಾಗಿದೆ. ‘ಯು’ ಆಕಾರದಲ್ಲಿರುವ ಇಂತಹ 450 ‘ಯು-ಗರ್ಡರ್’ಗಳು ಕಾರಿಡಾರ್-2ರಲ್ಲಿ (ಮಲ್ಲಿಗೆ ಲೈನ್) ಅಗತ್ಯವಾಗಿವೆ. ಇದನ್ನು ಯಶವಂತಪುರ-ಹೆಬ್ಬಾಳ ನಡುವಿನ 8 ಕಿ.ಮೀ. ಮಾರ್ಗದಲ್ಲಿ ಸದ್ಯದಲ್ಲೇ ಅಳವಡಿಸಲಾಗುವುದು’ ಎಂದಿದ್ದಾರೆ.

ಇಂತಹ ಪ್ರತೀ ಒಂದು ಗರ್ಡರ್ ತಯಾರಿಕೆಗೂ ಎಂ60 ಗುಣಮಟ್ಟದ 69.5 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಬೇಕಾಗುತ್ತದೆ. ಇಂತಹ ತೊಲೆಗಳು ತಲಾ 178 ಟನ್ ಭಾರವಿರುತ್ತವೆ. ಇವುಗಳಿಂದ ಕಾಮಗಾರಿಗೆ ತಗುಲುವ ಸಮಯ ಸಾಕಷ್ಟು ಉಳಿಯಲಿದೆ. ಇದನ್ನು ಆಸ್ ಸಿಸ್ಟಮ್ ಕಂಪನಿಯು ಬೆಂಗಳೂರು ಸಬರ್ಬನ್ ರೈಲು ಯೋಜನೆಗಾಗಿ ವಿನ್ಯಾಸಗೊಳಿಸಿದ್ದು, ಚೆನ್ನೈನ ಐಐಟಿ ಮತ್ತು ಜನರಲ್ ಕನ್ಸಲ್ಟೆಂಟ್ ಕಂಪನಿಗಳು ಕೂಡ ಇದರಲ್ಲಿ ಸಕ್ರಿಯ ಪಾತ್ರ ವಹಿಸಿ, ಗುಣಮಟ್ಟವನ್ನು ಖಾತ್ರಿಪಡಿಸಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Fire Station: ರಾಜ್ಯದ 17 ಕಡೆ 329 ಕೋಟಿ ರೂ. ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ: ಕೃಷ್ಣ ಬೈರೇಗೌಡ

ಈ ರೀತಿಯ ಯು-ಗರ್ಡರ್ ಸಿದ್ಧಪಡಿಸಿರುವುದು ಒಂದು ತಾಂತ್ರಿಕ ಅದ್ಭುತವಾಗಿದ್ದು, ಸರ್ಕಾರಿ ಸ್ವಾಮ್ಯದ ಕೆ-ರೈಡ್ ಇದರ ಉಸ್ತುವಾರಿ ಮತ್ತು ಗುಣಮಟ್ಟ ನಿಯಂತ್ರಣಗಳನ್ನು ನೋಡಿಕೊಂಡಿದೆ. ಇಂತಹ ಗರ್ಡರ್ ಅಳವಡಿಸುವುದರಿಂದ ನೇರವಾಗಿ ಹಳಿಗಳನ್ನು ಅಳವಡಿಸಲು ಸಾಧ್ಯವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

Exit mobile version