ಹಾಸನ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಗೆ (Karnataka Election 2023) ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಗದ್ದಲ ಇನ್ನೂ ಮುಗಿದಿಲ್ಲ. ಈ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಹೋದರ, ಮಾಜಿ ಸಚಿವ ಎಚ್.ಡಿ. ರೇವಣ್ಣ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಸ್ವರೂಪ್‌ರನ್ನು ಕಣಕ್ಕಿಳಿಸಲು ಎಚ್‌ಡಿಕೆ ಒಲವು ತೋರಿದ್ದರೆ, ಪತ್ನಿ ಭವಾನಿಯೇ ಸ್ಪರ್ಧೆ ಮಾಡಬೇಕೆಂದು ರೇವಣ್ಣ ಪಟ್ಟು ಹಿಡಿದಿದ್ದಾರೆ. ಆದರೆ, ಈ ಗದ್ದಲದ ನಡುವೆ ಈಗ ರೇವಣ್ಣ ಕಾಂಗ್ರೆಸ್ ಮುಖಂಡ ಎಚ್.ಕೆ. ಮಹೇಶ್ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದರು ಎಂಬ ಸುದ್ದಿ ಹಬ್ಬಿತ್ತು. ಈಗ ಈ ಬಗ್ಗೆ ಸ್ವತಃ ಎಚ್.ಕೆ. ಮಹೇಶ್ ಸ್ಪಷ್ಟನೆ ನೀಡಿದ್ದು, ತಮ್ಮನ್ನು ಯಾರೂ ಸಂಪರ್ಕ ಮಾಡಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಹಾಸನ ತಾಲೂಕಿನ ಕಟ್ಟಾಯ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವ ವಿಚಾರವಾಗಿ ನನ್ನನ್ನು ಈವರೆಗೆ ಯಾರೂ ಸಂಪರ್ಕ ಮಾಡಿಲ್ಲ. ಅವರ ಜತೆ ನನಗೆ ವಿಶ್ವಾಸವಿದೆ. ಪಾರ್ಲಿಮೆಂಟ್ ಚುನಾವಣೆಗೆ ಜತೆಯಲ್ಲಿ ಕೆಲಸ ಮಾಡಿದ್ದೆವು. ಅದನ್ನು ಬಿಟ್ಟರೆ ನಿನ್ನನ್ನು ಚುನಾವಣೆಯಲ್ಲಿ ಅಭ್ಯರ್ಥಿ ಮಾಡುತ್ತೇವೆ ಎಂದು ಅವರು ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ಜತೆಗೆ ನನ್ನನ್ನು ಅಭ್ಯರ್ಥಿ ಮಾಡಿ ಎಂದು ನಾನೂ ಸಹ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಯಾರ ಜತೆಯೂ ಸಂಪರ್ಕದಲ್ಲಿಲ್ಲ. ಖಂಡಿತಾ ಸಂಪರ್ಕವನ್ನೂ ಮಾಡಿಲ್ಲ. ಇನ್ನು ನಾನು ಬೆಂಗಳೂರಿನಲ್ಲಿ ಎಲ್ಲಿ ಭೇಟಿ ಮಾಡುತ್ತೇನೆ. ಖಂಡಿತ ಯಾರ ಬಳಿಯೂ ನಾನು ಏನೂ ಹೇಳಿಲ್ಲ. ಇವತ್ತು ಬೆಳಗ್ಗೆ ನಾನು ತಿಳಿದಂತೆ ಎಲ್ಲರೂ ಕೂಡ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡಬೇಕು ಎಂಬ ಆಗ್ರಹ ಆ ಪಕ್ಷದಲ್ಲಿದೆ ಎಂದರು.
ಇದನ್ನೂ ಓದಿ: Karnataka Elections : ಸೆಲ್ಫಿ ವಿತ್ ಫಲಾನುಭವಿ; ಮಹಿಳಾ ಮೋರ್ಚಾದಿಂದ ದೇಶಾದ್ಯಂತ ಅಭಿಯಾನ, 1 ಕ್ಷೇತ್ರದಲ್ಲಿ 1000 ಚಿತ್ರ!
ರೇವಣ್ಣ-ಎಚ್‌ಡಿಕೆ ಗುದ್ದಾಟ
ಹಾಸನ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಭವಾನಿಗೇ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಈ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಅಲ್ಲದೆ, ನನ್ನ ಕುಟುಂಬಕ್ಕೆ ಟಿಕೆಟ್ ಕೊಡದೇ ಇದ್ದರೆ, ಇದಕ್ಕೆ ಅಡ್ಡಗಾಲಾಗಿರುವ ಎಚ್.ಪಿ. ಸ್ವರೂಪ್‌ಗೂ ಬೇಡ ಎಂಬ ವಾದವನ್ನು ಮುಂದಿಟ್ಟಿದ್ದಾರೆ. ಇದಕ್ಕಾಗಿ ಹೊಸ ಅಭ್ಯರ್ಥಿ ಎಚ್.ಕೆ. ಮಹೇಶ್ ಅವರ ಹೆಸರನ್ನು ಎಳೆದು ತಂದಿದ್ದಾರೆ. ಇಷ್ಟಾದರೂ ಕೇಳದ ಎಚ್.ಡಿ. ಕುಮಾರಸ್ವಾಮಿ, ಹಾಸನದಿಂದ ಸೂಕ್ತ ಅಭ್ಯರ್ಥಿ ಇದ್ದಾರೆ. ಭವಾನಿ ಅವಶ್ಯಕತೆ ಸದ್ಯಕ್ಕೆ ಇಲ್ಲ. ಸ್ವರೂಪ್ ಅವರನ್ನೇ ಕಣಕ್ಕೆ ಇಳಿಸೋಣ ಎಂಬ ವಾದವನ್ನು ಮುಂದಿಟ್ಟಿದ್ದಾರೆ.
ಭವಾನಿ ರೇವಣ್ಣ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ಕೊಡುವುದಿಲ್ಲ. ಅಲ್ಲದೆ, ಭವಾನಿ ಸೂಚಿಸಿದ್ದ ಕೆ.ಎಂ. ರಾಜೇಗೌಡ ಸಹ ಕಣಕ್ಕಿಳಿಯುವುದು ಬೇಡ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದರು. ಆದರೆ, ಇದಕ್ಕೆ ಒಪ್ಪದ ರೇವಣ್ಣ ಅವರು ಕುಮಾರಸ್ವಾಮಿಗೆ ಟಕ್ಕರ್ ಕೊಡುವ ಸಂಬಂಧ ಎಚ್.ಕೆ. ಮಹೇಶ್ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ.
ಏಕೆ ಮಹೇಶ್‌ಗೆ ಟಿಕೆಟ್?
ಕಾಂಗ್ರೆಸ್ ನಾಯಕ, ಎರಡು ಬಾರಿ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಎಚ್.ಕೆ. ಮಹೇಶ್‌ಗೆ ರೇವಣ್ಣ ಗಾಳ ಹಾಕಿದ್ದಾರೆ. 2013ರಲ್ಲಿ ಕೇವಲ 4196 ಅಂತರದಲ್ಲಿ ಪರಾಜಯಗೊಂಡಿದ್ದ ಅವರು ಈ ಬಾರಿ ಸ್ಪರ್ಧೆ ಮಾಡಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿರುವ ರೇವಣ್ಣ, ಸ್ವರೂಪ್‌ಗೆ ಟಿಕೆಟ್ ಬೇಡವೇ ಬೇಡ ಎಂದು ಪಟ್ಟುಹಿಡಿದಿದ್ದಾರೆ.
ಇದನ್ನೂ ಓದಿ: Harsh Summer: ಹೆಚ್ಚಾಗಲಿದೆ ಬಿಸಿಲು, 3 ತಿಂಗಳು ದಾಟದಿರಿ ಮನೆಯ ಹೊಸ್ತಿಲು; ಹವಾಮಾನ ವರದಿ ಇಲ್ಲಿದೆ
ಎಚ್.ಕೆ. ಮಹೇಶ್‌ಗೆ ಟಿಕೆಟ್ ಕೊಟ್ಟರೆ ಎರಡು ಬಾರಿ ಸೋತಿರುವ ಸಿಂಪತಿ ವರ್ಕೌಟ್ ಆಗಲಿದೆ. ಹಾಲಿ ಶಾಸಕ ಪ್ರೀತಂಗೌಡ ವಿರುದ್ಧ ಕಣಕ್ಕಿಳಿಯಲು ಬಲಿಷ್ಠ ಅಭ್ಯರ್ಥಿ ಸಿಕ್ಕಂತೆ ಆಗುತ್ತದೆ ಎಂದು ಹೇಳಿರುವ ರೇವಣ್ಣ, ತಮ್ಮನ್ನು ಎದುರು ಹಾಕಿಕೊಂಡು ಟಿಕೆಟ್ ಪಡೆಯಲು ಮುಂದಾಗಿರುವ ಸ್ವರೂಪ್‌ಗೆ ಟಿಕೆಟ್ ತಪ್ಪಿಸುವ ಲೆಕ್ಕಾಚಾರವನ್ನು ಹೊಂದಿದ್ದಾರೆ ಎನ್ನಲಾಗಿದೆ.