ಬೆಂಗಳೂರು: ಇಲ್ಲಿನ ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯ ಬೌರಿಂಗ್ ಆಸ್ಪತ್ರೆಯಲ್ಲಿ (No power in Bowring Hospital) ಕಳೆದೆರಡು ದಿನಗಳಿಂದ ಸರಿಯಾದ ವಿದ್ಯುತ್ ಪೂರೈಕೆ ಇಲ್ಲದೆ ರೋಗಿಗಳು, ಆಸ್ಪತ್ರೆ ಸಿಬ್ಬಂದಿ ಕತ್ತಲಲ್ಲಿಯೇ ಕಳೆಯುವಂತಾಯಿತು.
ಬೌರಿಂಗ್ ಆಸ್ಪತ್ರೆಗೆ ನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆಗಾಗಿ ದೂರದ ಊರುಗಳಿಂದ ಆಗಮಿಸುತ್ತಾರೆ. ಇಂತಹ ಆಸ್ಪತ್ರೆಯಲ್ಲಿ ಶನಿವಾರ, ಭಾನುವಾರ ಕರೆಂಟ್ ಇಲ್ಲದೆ ಪರದಾಡಬೇಕಾಯಿತು. ಕರೆಂಟ್ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆ ಎಲ್ಲವನ್ನೂ ಮುಂದೂಡಲಾಗಿತ್ತು. ತೀವ್ರ ತರಹದ ರೋಗದಿಂದ ಬಳಲುತ್ತಿರುವ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಬೌರಿಂಗ್ ಆಸ್ಪತ್ರೆಗೆ ಹೆಚ್ಚಾಗಿ ಗರ್ಭಿಣಿಯರು ಅವಲಂಬಿತರಾಗಿದ್ದಾರೆ. ಶನಿವಾರ, ಭಾನುವಾರ ಸೇರಿ ಸೋಮವಾರ ಮುಂಜಾನೆವರೆಗೂ ವಿದ್ಯುತ್ ಸಮಸ್ಯೆಯಿಂದಾಗಿ ಭಾನುವಾರ ಹೆರಿಗೆಯಾದ ತಾಯಿ-ಮಗುವನ್ನು ವಾಣಿ ವಿಲಾಸ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಪ್ರಾಥಮಿಕ ಮೂಲಗಳ ಪ್ರಕಾರ ಆಸ್ಪತ್ರೆ ಮುಂಭಾಗದ ವಿದ್ಯುತ್ ವೈರ್ ಕಟ್ ಆಗಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ: Narendra Modi: ಮೋದಿ ಉದ್ಘಾಟಿಸಲಿರುವ ಎಚ್‌ಎಎಲ್ ಘಟಕದ ವಿಶೇಷತೆ ಏನು?
ಕರೆಂಟ್ ಬಗ್ಗೆ ಬೆಸ್ಕಾಂ ಸಿಬ್ಬಂದಿಗೆ ದೂರು ನೀಡಿದ ಹಿನ್ನೆಲೆ ಸೋಮವಾರ ಬೆಳಗ್ಗೆ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಿದ್ದಾರೆ. ಎರಡು ದಿನಗಳ ಬಳಿಕ ವಿದ್ಯುತ್ ಸಂಪರ್ಕವನ್ನು ದುರಸ್ತಿ ಮಾಡಲಾಗಿದೆ.