ಬೆಂಗಳೂರು: ಗುಜರಾತ್ ಮೂಲದ ಅಮುಲ್ (Nandini vs Amul) ಜತೆ ಕೆಎಂಎಫ್ ನಂದಿನಿಯನ್ನು ವಿಲೀನ ಮಾಡುವ ಯಾವುದೇ ಪ್ರಸ್ತಾಪ ಇಲ್ಲ. ನಂದಿನಿ ಬ್ರ್ಯಾಂಡ್ ಅನ್ನು ಅಳಿಸುವುದು ಅಸಾಧ್ಯ. ಸರ್ಕಾರದಿಂದ ಗರಿಷ್ಠ ಸಹಕಾರ ನೀಡಲಾಗುತ್ತಿದೆ. ಗುಜರಾತ್ ಮಾದರಿ ಅನುಸರಿಸಿದರೆ ಇನ್ನಷ್ಟು ಬೆಳೆಸಲು ಸಾಧ್ಯ ಎಂಬ ಚಿಂತನೆ ಇದೆ. ಗುಜರಾತ್, ಕರ್ನಾಟಕ ಎರಡೂ ಕಡೆ ಮಿಲ್ಕ್ ಯೂನಿಯನ್‍ಗಳು ಬಲಾಢ್ಯವಾಗಿವೆ. ಆಂಧ್ರಕ್ಕೆ ಲಾಡು ತಯಾರಿಸಲು ನಮ್ಮ ನಂದಿನಿ ತುಪ್ಪವನ್ನು ಸರಬರಾಜು ಮಾಡುತ್ತಿದ್ದೇವೆ ಎಂದು ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ (Minister ST Somashekhar) ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಭಾನುವಾರ (ಏ.9) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸೇರಿದಂತೆ ಹಲವು ಕಡೆ ಲಕ್ಷಾಂತರ ನಂದಿನಿ ಕೌಂಟರ್‌ಗಳು ಇವೆ. ಆನ್‍ಲೈನ್ ಮಾರಾಟ ವ್ಯವಸ್ಥೆ ಈಗಲೂ ಇದೆ. ಕೆಎಂಎಫ್ ಭದ್ರ ಬುನಾದಿ ಕರ್ನಾಟಕದಲ್ಲಿದೆ. ಪ್ರತಿ ಬೇಸಿಗೆ ಕಾಲದಲ್ಲಿಯೂ ಹಾಲು ಉತ್ಪಾದನೆ ಕಡಿಮೆಯಾಗುತ್ತದೆ. ಆ ಕಾರಣಕ್ಕಾಗಿ ಇಂತಹ ಸುದ್ದಿಗಳನ್ನು ಹರಡಬಾರದು ಎಂದು ತಿಳಿಸಿದರು.
ಕರ್ನಾಟಕದಲ್ಲಿ 15 ಹಾಲು ಒಕ್ಕೂಟಗಳಿದ್ದು, ಎಲ್ಲವೂ ಲಾಭದಲ್ಲಿವೆ. ಕೋವಿಡ್ ವೇಳೆ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಮಿಗತೆ ಹಾಲಿನ ಪುಡಿಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ಕೊಡಲು ಏರ್ಪಾಡು ಮಾಡಲಾಗಿತ್ತು. ಅದಕ್ಕೆ ಬೇಕಾದ ಹಣವನ್ನು ಕೆಎಂಎಫ್‍ಗೆ ಕೊಡಲಾಗಿತ್ತು ಎಂದು ವಿವರಿಸಿದರು.
ಇದನ್ನೂ ಓದಿ: Lorry Accident: ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಸಿಮೆಂಟ್ ಲಾರಿ; ಆಂಬ್ಯುಲೆನ್ಸ್ ಸಿಗದೆ ಒಂದೂವರೆ ಗಂಟೆ ನರಳಾಡಿದ ಚಾಲಕ
ಅಮಿತ್ ಶಾ ಹೇಳಿದ್ದೇ ಬೇರೆ
ಕೆಎಂಎಫ್‍ನ ನಂದಿನಿ ವಿಶ್ವಾದ್ಯಂತ ವಹಿವಾಟು ಹೊಂದಿದೆ. ಕಳೆದ ವರ್ಷ ಡಿಸೆಂಬರ್ 30ರಂದು ಮಂಡ್ಯ ಜಿಲ್ಲೆ ಮದ್ದೂರಿನ ಗೆಜ್ಜಲಗೆರೆಯಲ್ಲಿ ಕೇಂದ್ರದ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರು ನಂದಿನಿ ಮಾರುಕಟ್ಟೆ ವಿಸ್ತರಣೆ, ತಂತ್ರಜ್ಞಾನ ನೆರವು ಪಡೆಯಲು ಅಮೂಲ್ ಜತೆ ಚರ್ಚಿಸಲು ತಿಳಿಸಿದ್ದರೇ ವಿನಃ ವಿಲೀನ ಮಾಡಲು ಅಲ್ಲ ಎಂದು ಸೋಮಶೇಖರ್ ತಿಳಿಸಿದರು.
ನಂದಿನಿ ಸೊಸೈಟಿಗಳು 25-26 ಲಕ್ಷ ರೈತರಿಂದ ಹಾಲನ್ನು ಖರೀದಿಸುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ನಂದಿನಿ ಉತ್ಪನ್ನವನ್ನೇ ಖರೀದಿ ಮಾಡುತ್ತಾರೆ. ನಂದಿನಿ ಉತ್ಪನ್ನಗಳು ಕರ್ನಾಟಕದಲ್ಲಿ ಭದ್ರವಾಗಿ ಬೆಳೆದಿವೆ. ಯಾರೇ ಸ್ಪರ್ಧೆ ಮಾಡಿದರೂ ಸಮರ್ಥ ಕೆಎಂಎಫ್ ಫೆಡರೇಷನ್, ಇಲ್ಲಿನ ಮಿಲ್ಕ್ ಯೂನಿಯನ್‍ಗಳ ಜತೆ ಸ್ಪರ್ಧೆ ಮಾಡಿ ಗೆಲ್ಲಲು ಅಸಾಧ್ಯ ಎಂದು ಹೇಳಿದರು.
ಅಮುಲ್ ಲೀಟರ್‌ಗೆ 57, ನಂದಿನಿ ಲೀಟರ್‌ಗೆ 39
ಅಮೂಲ್ ಹಾಲನ್ನು ಆನ್‍ಲೈನ್ ಮೂಲಕ ಲೀಟರ್‌ಗೆ 57 ರೂಪಾಯಿಗೆ ಮಾರಾಟ ಮಾಡಿದರೆ, ನಾವು 39 ರೂಪಾಯಿಗೆ ಮಾರಾಟ ಮಾಡುತ್ತೇವೆ. ತಮಿಳುನಾಡು ಮತ್ತಿತರ ರಾಜ್ಯಗಳಿಗೆ ನಮ್ಮ ಉತ್ಪನ್ನಗಳನ್ನು ಕಳುಹಿಸುತ್ತಿದ್ದೇವೆ. ಕೆಎಂಎಫ್ ಬಗ್ಗೆ ತಿಳಿದವರು ಇದರ ಕುರಿತು ತಪ್ಪಾಗಿ ಮಾತನಾಡಲು ಅಸಾಧ್ಯ. ಕರ್ನಾಟಕದಲ್ಲಿ ಭದ್ರ ಬುನಾದಿ ಆ ಸಂಸ್ಥೆಗೆ ಇದೆ. ಅಮೂಲ್ ಸ್ಪರ್ಧೆ ಎದುರಿಸಲು ನಂದಿನಿ ಉತ್ಪನ್ನಗಳು ಅತ್ಯಂತ ಸಮರ್ಥವಾಗಿವೆ. ಬಳ್ಳಾರಿ, ಹಾವೇರಿ, ಮಂಡ್ಯದಲ್ಲಿ ಮೆಗಾ ಡೈರಿ ಆಗಿದೆ. ಚುನಾವಣಾ ರಾಜಕಾರಣ ಮಾಡುತ್ತಿದ್ದಾರೆ. ಕೆಎಂಎಫ್ ಅಭದ್ರತೆ ಪ್ರಶ್ನೆಯೇ ಇಲ್ಲ. ಹಾಲು ಮತ್ತು ಹಾಲಿನ ಉತ್ಪನ್ನದ ವಿಚಾರದಲ್ಲಿ ಕೃತಕ ಅಭಾವವನ್ನು ಸೃಷ್ಟಿಸಲಾಗಿಲ್ಲ. ಇದು ವೃಥಾ ಆರೋಪವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Urfi Javed: ಉರ್ಫಿ ಜಾವೇದ್ ಫ್ಯಾಷನ್ ʻಬ್ಯಾಡ್ ಟೇಸ್ಟ್ʼ ಎಂದು ರಣಬೀರ್ ಅಂದಿದಕ್ಕೆ ಉರ್ಫಿ ಪ್ರತಿಕ್ರಿಯೆ ನೀಡಿದ್ದೇನು?
ವಿಲೀನಕ್ಕೆ ಸಹಕಾರಿ ಇಲಾಖೆ ಒಪ್ಪಿಗೆ ಬೇಕು
ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಮಾತನಾಡಿ, ಕೆಎಂಎಫ್ ಸರಿಸುಮಾರು 20 ರಿಂದ 22 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸುತ್ತದೆ. ಸಹಕಾರಿ ಇಲಾಖೆ ಒಪ್ಪಿಗೆ ಇಲ್ಲದೆ, ಮಾತುಕತೆ ಇಲ್ಲದೆ ಇನ್ನೊಂದು ರಾಜ್ಯದ ಸಂಸ್ಥೆ ಜತೆ ವಿಲೀನ ಅಸಾಧ್ಯ. ಮಹಾಸಭೆಯ ಒಪ್ಪಿಗೆ, ಕ್ಯಾಬಿನೆಟ್ ಒಪ್ಪಿಗೆ ಬೇಕು ಎಂದರು. ಬೆಳವಣಿಗೆಗಾಗಿ ತಂತ್ರಜ್ಞಾನದ ಸಹಕಾರ ಸ್ವಾಗತಾರ್ಹ ಎಂದು ತಿಳಿಸಿದರು.
ಕೆಎಂಎಫ್ ಉತ್ಪಾದನೆಗಳು ದೇಶದ 12 ರಾಜ್ಯಗಳಲ್ಲಿ ಮಾರಾಟ ಆಗುತ್ತಿವೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ಸಹಜ. ಕನ್ನಡ- ಮಾರವಾಡಿಗಳು ಎಂದು ಶಬ್ದ ಬಳಸಿ ಮಾಜಿ ಸಿಎಂಗಳಾದ ಕಾಂಗ್ರೆಸ್ಸಿನ ಸಿದ್ದರಾಮಯ್ಯ, ಜೆಡಿಎಸ್‍ನ ಕುಮಾರಸ್ವಾಮಿ ಅವರು ಜವಾಬ್ದಾರಿರಹಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು. ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಇದನ್ನೂ ಓದಿ: D.K. Shivakumar: ಆರೋಗ್ಯ ಇಲಾಖೆಯಲ್ಲಿ ಡಾ. ಸುಧಾಕರ್ ಭ್ರಷ್ಟಾಚಾರ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್ ಆರೋಪ
ಅಮುಲ್ ಮರಾಟ ತಡೆಗಟ್ಟಲು ಸಾಧ್ಯವಿಲ್ಲ- ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಗುಜರಾತ್‌ನಿಂದ ಅಮುಲ್ ಬಂದರೆ ನಂದಿನಿ ಬ್ರಾಂಡ್‌ಗೆ ತೊಂದರೆ ಆಗುತ್ತದೆ ಎಂದು ಹೇಳುತ್ತಾರೆ. ನಂದಿನಿ ಉತ್ಪನ್ನಗಳು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಮಾರಾಟವಾಗುತ್ತಿವೆ. ನಮ್ಮ ಕೆಎಂಎಫ್ ಅಗಾಧವಾದ ವ್ಯಾಪ್ತಿ, ವ್ಯವಹಾರವನ್ನು ಹೊಂದಿದೆ. ಗುಜರಾತ್ ಅಂದ ಕೂಡಲೇ ಕೆಲವರಿಗೆ ಆತಂಕ ಶುರುವಾಗುತ್ತದೆ. ಗುಜರಾತ್ ಮಾದರಿ ಎಂದರೆ ಸಂಕಟಪಡುತ್ತಾರೆ. ಇಡೀ ದೇಶದಲ್ಲಿ ಗುಜರಾತ್ ಒಂದು ಮಾದರಿ ರಾಜ್ಯವಾಗಿದೆ. ಗುಜರಾತ್ ನಮ್ಮದೇ ದೇಶದ ಒಂದು ಭಾಗ ನಮಗೆ ಹೆಮ್ಮೆ ಇದೆ. ಅಮುಲ್ ಸೇರಿದಂತೆ ಯಾವುದೇ ಬ್ರ್ಯಾಂಡ್‌ಗಳು ರಾಜ್ಯದ ಯಾವುದೇ ಮೂಲೆಯಲ್ಲಿ ಮಾರಾಟವಾದರೆ ತಡೆಗಟ್ಟಲು ಸಾಧ್ಯವಿಲ್ಲ. ಅದನ್ನು ನಾವು ಸ್ವಾಗತ ಮಾಡುತ್ತೇವೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ.