ಸಂದೀಪ ಸಾಗರ, ಕಾರವಾರ
ಅವರು ದಶಕಗಳಿಂದ ಗುಡ್ಡದ ಮೇಲೆ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಜನ. ಅಗತ್ಯ ವಸ್ತುಗಳು ಏನೇ ಬೇಕಾದರೂ ಐದಾರು ಕಿ.ಮೀ ಕಾಡಿನ ಹಾದಿಯಲ್ಲಿ ಗುಡ್ಡ ಇಳಿದು ಇನ್ನೊಂದು ಗ್ರಾಮಕ್ಕೆ ತೆರಳಬೇಕಾದ ಸ್ಥಿತಿ ಇದೆ. ಉತ್ತಮ ರಸ್ತೆ (No Road) ಇಲ್ಲಿಲ್ಲ. ಇಂತಹ ಗ್ರಾಮದಲ್ಲಿ ಅನಾರೋಗ್ಯಕ್ಕೆ ತುತ್ತಾದರಂತೂ ಅವರ ಕಷ್ಟ ಹೇಳತೀರದು. ಇದೇ ರೀತಿ ಅನಾರೋಗ್ಯ ಪೀಡಿತ ವೃದ್ಧರೊಬ್ಬರನ್ನು ಜೋಳಿಗೆಯಲ್ಲಿ ಹೊತ್ತು ತಂದು ಆಸ್ಪತ್ರೆಗೆ ಸಾಗಿಸಿದ ದಯನೀಯ ಘಟನೆ ನಡೆದಿದೆ.
ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವರಿಲಬೇಣ ಗ್ರಾಮದಲ್ಲಿ ನಡೆದಿದೆ. ಗುಡ್ಡದ ಮೇಲಿರುವ ಗ್ರಾಮಕ್ಕೆ ತೆರಳಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲವಾಗಿದ್ದು, ಕಾಡಿನ ನಡುವಿನ ಕಾಲು ಹಾದಿಯಲ್ಲೇ ಸಾಗಬೇಕು. ಗ್ರಾಮದ ನಿವಾಸಿ ನೂರಾ ಪೊಕ್ಕಾ ಗೌಡ ಎಂಬುವವರಿಗೆ ಎದೆನೋವು ಕಾಣಿಸಿಕೊಂಡಿದ್ದು ನಡೆದು ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಕುಟುಂಬಸ್ಥರು, ಗ್ರಾಮಸ್ಥರು ಸೇರಿ ಕುರ್ಚಿಯ ಮೇಲೆ ಅವರನ್ನು ಕೂರಿಸಿ ಜೋಳಿಗೆ ಮಾಡಿಕೊಂಡು ಸುಮಾರು 5 ಕಿ.ಮೀ ದೂರದ ಸಕಲಬೇಣ ಗ್ರಾಮದವರೆಗೆ ಹೊತ್ತುಕೊಂಡೇ ತಂದರು. ಅಲ್ಲಿಂದ ಆಂಬ್ಯುಲೆನ್ಸ್ ತಡವಾಗುತ್ತದೆ ಎಂದು ಖಾಸಗಿ ವಾಹನದಲ್ಲೇ ಅಂಕೋಲಾ ತಾಲೂಕು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ | Deepika Padukone | ಪಠಾಣ್ ಕೇಸರಿ ವಿವಾದ : ಅಕ್ಷಯ್ ಕುಮಾರ್‌ಗೆ ಬೇರೆ ರೂಲ್ಸ್? ಏನಿದು ವಾದ?
ವರಿಲಬೇಣ ಗ್ರಾಮದಲ್ಲಿ 10ರಿಂದ 12 ಮನೆಗಳಿದ್ದು ಹಾಲಕ್ಕಿ ಗೌಡ ಸಮುದಾಯದ ಕುಟುಂಬಗಳೇ ವಾಸವಾಗಿವೆ. ಹಟ್ಟಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಈ ಗ್ರಾಮ ಹೆದ್ದಾರಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿದ್ದು, ಗ್ರಾಮಕ್ಕೆ ತೆರಳಲು 3 ಕಿ.ಮೀ. ಮಾತ್ರ ರಸ್ತೆ ಇದೆ. ಅಲ್ಲಿಂದ ಸುಮಾರು 5 ಕಿ.ಮೀ. ಕಾಡಿನ ನಡುವೆ ಕಾಲು ಹಾದಿಯಲ್ಲಿ ಗುಡ್ಡ ಹತ್ತಿ ಗ್ರಾಮಕ್ಕೆ ತೆರಳಬೇಕು. ಮಳೆಗಾಲದಲ್ಲಂತೂ ಇಲ್ಲಿನವರ ಪರಿಸ್ಥಿತಿ ಹೇಳತೀರದಾಗಿದ್ದು, ತಿಂಗಳಿಗಾಗುವಷ್ಟು ಅಗತ್ಯ ವಸ್ತುಗಳನ್ನು ಮೊದಲೇ ಖರೀದಿಸಿ ಹೊತ್ತು ತಂದು ಸಂಗ್ರಹಿಸಿಕೊಳ್ಳುತ್ತಾರೆ.
ಇದನ್ನೂ ಓದಿ | Actor Vishal | ರಾಜ್ ಕುಟುಂಬ ಶಕ್ತಿಧಾಮವನ್ನು ಚೆನ್ನಾಗಿ ನೋಡಿಕೊಳ್ತಿದೆ, ಸದ್ಯ ಯಾರ ನೆರವೂ ಬೇಕಿಲ್ಲ ಎಂದ ನಟ ವಿಶಾಲ್
ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ತೆರಳಲು ಬೇರೆ ಊರುಗಳ ಸಂಬಂಧಿಕರ ಮನೆಗಳಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಗ್ರಾಮದವರಿಗೆ ಕೃಷಿಯೊಂದೇ ಜೀವನಾಧಾರವಾಗಿದ್ದು, ಬೇರೆ ಕೆಲಸಕ್ಕೆ ತೆರಳಬೇಕಾದರೆ ಗುಡ್ಡ ಇಳಿದು ಸಮೀಪದ ಅವರ್ಸಾ ಗ್ರಾಮಕ್ಕೇ ಆಗಮಿಸಬೇಕು. ಪ್ರತಿನಿತ್ಯ ಓಡಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆಲವರು ಗುಡ್ಡದ ಕೆಳಗೆ ಜಾಗ ಖರೀದಿಸಿ ಮನೆ ಕಟ್ಟಿಕೊಂಡಿದ್ದಾರೆ. ಗ್ರಾಮಕ್ಕೆ ರಸ್ತೆ ನಿರ್ಮಿಸಿಕೊಂಡುವಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಹ ಸಲ್ಲಿಸಿದ್ದು, ಅರಣ್ಯ ಇಲಾಖೆಯ ಕಾನೂನು ತೊಡಕಿನಿಂದಾಗಿ ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಮೂಲಭೂತ ಅಗತ್ಯವಾದ ರಸ್ತೆ ವ್ಯವಸ್ಥೆಯೇ ಇಲ್ಲದೆ ಗ್ರಾಮಸ್ಥರು ಪ್ರತಿನಿತ್ಯ ಸಂಕಷ್ಟ ಅನುಭವಿಸುತ್ತಿದ್ದು, ಕಚ್ಚಾ ರಸ್ತೆಯನ್ನಾದರೂ ನಿರ್ಮಿಸಿಕೊಟ್ಟಲ್ಲಿ ಓಡಾಟಕ್ಕೆ ಅನುಕೂಲವಾಗಲಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕಿದೆ ಎಂಬ ಆಗ್ರಹ ಕೇಳಿಬಂದಿದೆ.
ಇದನ್ನೂ ಓದಿ | ಏನ್ ಮಗಾ ಎಲ್ಲಿದ್ದೀಯ?: ಬೆಂಗಳೂರು ಸಂಚಾರ ದಟ್ಟಣೆ ಕುರಿತು ಪೊಲೀಸರ ಹೊಸ ಡೈಲಾಗ್