Site icon Vistara News

ಸ್ವಂತ ಶಾಲಾ ಕಟ್ಟಡವಿಲ್ಲದೆ ದೇವಸ್ಥಾನದ ಆವರಣದಲ್ಲೇ ಪಾಠ, ಪ್ರವಚನ!

govt school

ವಿಜಯನಗರ: ಸೂಕ್ತ ಕಟ್ಟಡವಿಲ್ಲದೆ ವಿದ್ಯಾರ್ಥಿಗಳು ದೇವಸ್ಥಾನದ ಆವರಣ ಮತ್ತು ಮರದ ಕೆಳಗೆ ಪಾಠ ಕೇಳುವ ಸ್ಥಿತಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಬೈಲುವದ್ದಿಗೇರಿ ಗ್ರಾಮದಲ್ಲಿದೆ.

ಸರ್ಕಾರಿ ಶಾಲೆಗೆ ಕಟ್ಟಡವಿಲ್ಲದೆ ಗ್ರಾಮದಲ್ಲಿ ಕಳೆದೆರಡು ವರ್ಷಗಳಿಂದ ಬಯಲಿನಲ್ಲೇ ಮಕ್ಕಳು ಗಾಳಿ, ಮಳೆ, ಚಳಿಯಲ್ಲಿ ಪಾಠ ಕೇಳುತ್ತಿದ್ದಾರೆ. 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದ್ದು, ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದೇವಸ್ಥಾನದ ಆವರಣವೇ ಪಾಠ ಪ್ರವಚನಗಳ ಕೇಂದ್ರವಾಗಿದೆ.

ಸಚಿವರಾದ ಆನಂದ ಸಿಂಗ್, ಶಶಿಕಲಾ ಜೊಲ್ಲೆ ಕ್ಷೇತ್ರಗಳಲ್ಲೇ ಮಕ್ಕಳು ಶಾಲಾ ಕೊಠಡಿ ಇಲ್ಲದೇ ಪರದಾಡುತ್ತಿದ್ದಾರೆ. ದೇವಸ್ಥಾನದ ಆವರಣದಲ್ಲಿ ಮದುವೆ ಕಾರ್ಯಕ್ರಮಗಳಿದ್ದರೆ ಶಾಲೆಗೆ ಅಂದು ರಜೆ ಘೋಷಿಸಬೇಕಾದ ಸ್ಥಿತಿಯಿದೆ. ಇದ್ದ ಶಾಲಾ ಕಟ್ಟಡ ರಾಷ್ಟ್ರಿಯ ಹೆದ್ದಾರಿ 67ರ ವಿಸ್ತರಣೆ ಸಂದರ್ಭದಲ್ಲಿ ನೆಲಸಮವಾಗಿರುವುದರಿಂದ ಶಾಲಾ ಮಕ್ಕಳಿಗೆ ಬಯಲೇ ಆಸರೆಯಾಗಿದೆ.

ಪ್ರೌಢಶಾಲೆ ಆರಂಭಿಸಿ ಎರಡು ವರ್ಷವಾಗಿದೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳಿಲ್ಲ.‌ ಕೊಠಡಿ ಅಭಾವದಿಂದ ಪ್ರೌಢಶಾಲೆ ಮಕ್ಕಳು ದೇಗುಲ ಆವರಣದಲ್ಲಿ ಪಾಠ ಕೇಳಬೇಕಾಗಿದೆ. ಹೀಗಾಗಿ ಶಾಲೆಗೆ ಸೂಕ್ತ ಕೊಠಡಿ ಸೌಲಭ್ಯ ಒದಗಿಸಬೇಕು ಎಂದು ವಿದ್ಯಾರ್ಥಿನಿ ವಿ. ಎಂ. ಸುಧಾ ಮನವಿ ಮಾಡಿದ್ದಾರೆ.

ಜಿಲ್ಲಾ ಕೇಂದ್ರದಿಂದ ಅನತಿ ದೂರದಲ್ಲಿರುವ ಗ್ರಾಮದ ಸುಡುಗಾಡೆಪ್ಪ ದೇವಸ್ಥಾನದ ಆವರಣದಲ್ಲಿಯೇ ಶಿಕ್ಷಕರಿಂದ ಮಕ್ಕಳಿಗೆ ಪಾಠ ಬೋಧನೆ ಮಾಡಲಾಗುತ್ತಿದೆ. ಸ್ವಂತ ಕಟ್ಟಡ ಕಲ್ಪಿಸಬೇಕು ಇಲ್ಲವೆ ಪಕ್ಕದ ಧರ್ಮಸಾಗರ ಗ್ರಾಮದ ಸರ್ಕಾರಿ ಶಾಲೆಗೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

Exit mobile version