ಬೆಂಗಳೂರು: ರಾಜ್ಯದಲ್ಲಿ ಶಾಲೆಗಳು ಆರಂಭವಾಗಿ ಆರು ತಿಂಗಳು ಕಳೆದರೂ ಮಕ್ಕಳಿಗೆ ಶಾಲಾ ಸಮವಸ್ತ್ರ (No School Uniform) ಸಿಕ್ಕಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಹರಿದ ಸಮವಸ್ತ್ರವನ್ನೇ ತೊಟ್ಟು ಶಾಲೆಗಳಿಗೆ ಆಗಮಿಸುತ್ತಿದ್ದಾರೆ. ಸರ್ಕಾರಿ ಶಾಲಾ ಮಕ್ಕಳ ಮೇಲೆ ಶಿಕ್ಷಣ ಇಲಾಖೆಯ ಅಸಡ್ಡೆಗೆ ಪೋಷಕರು ಅಸಮಾಧಾನ ಹೊರಹಾಕಿದ್ದಾರೆ.
ಶಾಲೆಗಳು ನಮ್ಮ ಮಕ್ಕಳ ಮಾನ ಮರ್ಯಾದೆಯನ್ನು ತೆಗೆಯುತ್ತಿದೆ. ಮಕ್ಕಳ ಗೋಳು ಕೇಳುವವರು ಯಾರು? ಇಂತಹ ನಿರ್ಲಕ್ಷ್ಯ ಇನ್ನೆಷ್ಟು ದಿನ ಎಂದು ಪೋಷಕರು ಕಿಡಿಕಾರಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆಗಾಗಿ ಕೋಟಿ ಕೋಟಿ ಖರ್ಚು ಮಾಡುವ ಶಿಕ್ಷಣ ಇಲಾಖೆಗೆ ಶಾಲಾ ಮಕ್ಕಳ ಸಮವಸ್ತ್ರ ಎಂದಾಗ ನಾನಾ ಕುಂಟು ನೆಪಗಳನ್ನು ಹೇಳಿ ಜಾರಿಕೊಳ್ಳುವ ಮನಸ್ಥಿತಿಯನ್ನು ಏಕೆ ಪ್ರದರ್ಶನ ಮಾಡುತ್ತಿದೆ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.
ಪ್ಲೀಸ್ ನಮ್ಗೆ ಸಮವಸ್ತ್ರ ಕೊಡಿ
ಶಾಲೆಯ ಶಿಸ್ತುಕ್ರಮದಿಂದಾಗಿ ಹರಿದ ಸಮವಸ್ತ್ರವನ್ನು ಹಾಕಿಕೊಂಡು ಹೋಗುತ್ತಿದ್ದೇವೆ. ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳೇ ಪ್ರತಿ ವರ್ಷದಂತೆ ನಮಗೆ ಸಮವಸ್ತ್ರವನ್ನು ನೀಡಬೇಕು ಎಂದು ವಿದ್ಯಾರ್ಥಿನಿಯರು ವಿಡಿಯೊ ಮಾಡುವ ಮೂಲಕ ಮನವಿ ಮಾಡಿದ್ದಾರೆ. ಶಾಲೆಗಳು ಆರಂಭವಾಗಿ ತಿಂಗಳು ಕಳೆಯುತ್ತಾ ಬಂದಿದೆ. ಪ್ಲೀಸ್ ನಮಗೆ ಸಮವಸ್ತ್ರ ಕೊಡಿ ಎಂದು ಕೇಳಿಕೊಂಡಿದ್ದಾರೆ.
21 ಜಿಲ್ಲೆಗಳ ಮಕ್ಕಳಿಗೆ ಸಿಕ್ಕಿಲ್ಲ ಸಮವಸ್ತ್ರ
ರಾಜ್ಯದ ಕೇವಲ ಹತ್ತು ಜಿಲ್ಲೆಗಳ ಮಕ್ಕಳಿಗೆ ಮಾತ್ರ ಸ್ಕೂಲ್ ಯೂನಿಫಾರ್ಮ್ ನೀಡಲಾಗಿದೆ. ಉಳಿದ 21 ಜಿಲ್ಲೆಗಳ ಮಕ್ಕಳಿಗೆ ಸಮಪರ್ಕವಾಗಿ ಸಮವಸ್ತ್ರ ದೊರೆತ್ತಿಲ್ಲ. ಕಳೆದ ಎರಡು ವರ್ಷದಿಂದ ಕೋವಿಡ್ ಕಾರಣ ಹೇಳಿ ಮಕ್ಕಳಿಗೆ ಸಮವಸ್ತ್ರ ನೀಡಿರಲಿಲ್ಲ. ಈಗ ಶಾಲೆ ಆರಂಭವಾದರೂ ಕೋವಿಡ್ ಕಾರಣವನ್ನೇ ಹೇಳಿ ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ | Queen Elizabeth Death | ಪ್ರಿನ್ಸ್ ಹ್ಯಾರಿಗೆ ಸೇನಾ ಸಮವಸ್ತ್ರ ಧರಿಸುವ ಭಾಗ್ಯವಿಲ್ಲ ಏಕೆ?