Site icon Vistara News

ಕೆಲಸಕ್ಕೆ ಕರೀಬೇಡಿ, ಸಂಬಳಕ್ಕೆ ಮಾತ್ರ ಮರಿಲೇಬೇಡಿ, ಇದು ಯಾದಗಿರಿ ಶಿಕ್ಷಕರ ಕಥೆ!

ಯಾದಗಿರಿ

ಯಾದಗಿರಿ: ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಪ್ರಕಟಗೊಂಡರೆ ಯಾದಗಿರಿ ಲಾಸ್ಟ್‌ ಎಂಬ ಹಣೆಪಟ್ಟಿ ಪಡೆಯುತ್ತಲೇ ಬಂದಿದೆ. ಆದರೆ, ಇದರ ಬಗ್ಗೆ ಅಲ್ಲಿನ ಶಿಕ್ಷಕರಿಗೆ ಮಾತ್ರ ಯಾವುದೇ ಯೋಚನೆ, ವಿವೇಚನೆ ಇಲ್ಲ ಎಂಬುದು ಸಾಬೀತಾಗಿದೆ. ಗಡಿ ಭಾಗದ ಶಾಲೆಗಳಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದ್ದು, ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕರೇ ನಿತ್ಯ ಗೈರು ಹಾಜರಾಗುತ್ತಿದ್ದಾರೆ.

ಇದರ ಅಸಲಿಯತ್ತು ತಿಳಿಯಬೇಕೆಂದರೆ ಕರ್ನಾಟಕ‌ ಹಾಗೂ ತೆಲಂಗಾಣ ಗಡಿ ಭಾಗದ ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಒಮ್ಮೆ ಭೇಟಿ ಕೊಡಬೇಕು. ಖಾಲಿ ಖಾಲಿ‌ಯಾಗಿ ಕಾಣುತ್ತಿರುವ ಬೆಂಚುಗಳು, ಬ್ಲ್ಯಾಕ್ ಬೋರ್ಡ್ ಮೇಲೆ‌ ಎಂದೋ ಬರೆದಿರುವ ಅ,ಆ,ಇ,ಈ ಅಕ್ಷರಗಳೆ ಇಲ್ಲಿ ಕಾಣಲಿದೆ.

ಖಾಲಿ ತರಗತಿ

ಗಡಿ ಭಾಗದ ಬಡ ಜನತೆಗೆ ಹಾಗೂ ಅಲೆಮಾರಿ ಜನಾಂಗದವರ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಜೀವನದಲ್ಲಿ ಮುಂದೆ ಬರಬೇಕು ಎಂಬ ಸರ್ಕಾರದ ಆಶಯಕ್ಕೆ ಈ ಶಿಕ್ಷಕರೇ ಕೊಡಲಿಪೆಟ್ಟು ನೀಡುತ್ತಿದ್ದು, ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕಾದವರೇ ಇಲ್ಲಿ ಪತ್ತೆ ಇಲ್ಲ ಎಂಬಂತೆ ಆಗಿದೆ.

ತೆರೆದ ಬಾಗಿಲು, ಹಾಜರಿ ಹಾಕಿ ಓಡಿದರು!

ಈ‌ ಸರ್ಕಾರಿ ಶಾಲೆಯ ಶಿಕ್ಷಕರು ಬಹಳ ಶಿಸ್ತಿನ ಸಿಪಾಯಿಗಳು. ಅಂದರೆ, ಬೆಳಗ್ಗೆ ಶಾಲೆಗೆ ಬರುತ್ತಾರೆ. ಹಾಜರಿಗೆ ಸಹಿಯನ್ನು ಹಾಕುತ್ತಾರೆ. ಮತ್ತೆ ಅಲ್ಲಿಂದ ಕಾಲ್ಕೀಳುತ್ತಾರೆ. ಹೀಗಾದರೆ ಮಕ್ಕಳಿಗೆ ಶಿಕ್ಷಣ ಎಲ್ಲಿಂದ ಸಿಗುತ್ತದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಇದನ್ನೂ ಓದಿ | ಯಾದಗಿರಿಯಲ್ಲಿ ಪತ್ನಿಯ ಸಂಬಂಧಿಕರಿಗೆ ಬೆಂಕಿ ಹಚ್ಚಿದ ಪ್ರಕರಣ, ಮತ್ತಿಬ್ಬರ ಮರಣ

ಶಿಕ್ಷಕರೇ ಇಲ್ಲದ ಮೇಲೆ ಮಕ್ಕಳೇಕೆ ಬರುತ್ತಾರೆ?

ಗುರುಮಿಠಕಲ್ ಪಟ್ಟಣದ ಇಂದಿರಾನಗರದ ಈ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5 ನೇ ತರಗತಿವರೆಗೆ ಹೇಳಿಕೊಡಲಾಗುವುದು. ಇಲ್ಲಿ ಕೇವಲ 28 ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದಾರೆ. ಈ ಭಾಗದಲ್ಲಿ ಅಲೆಮಾರಿ ಜನಾಂಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ಉಳಿದ ಬಡ ಮಂದಿಯ ಮಕ್ಕಳೂ ಇದ್ದಾರೆ. ಇಂಥ ಮಕ್ಕಳಿಗೆ ಪಾಠ ಹೇಳಬೇಕಾದರೆ ಶಿಕ್ಷಕರು ಮೊದಲು ಸರಿಯಾಗಿರಬೇಕು. ಆದರೆ, ಶಿಕ್ಷಕರೇ ಇಲ್ಲದಿರುವುದರಿಂದ ಮಕ್ಕಳೂ ಸಹ ಶಾಲೆಯತ್ತ ಸುಳಿಯುತ್ತಿಲ್ಲ.

ಇದನ್ನೂ ಓದಿ | 2nd puc result | ಮೇಲುಗೈ ಸಾಧಿಸಿದ ಬಾಲಕಿಯರು; ದಕ್ಷಿಣ ಕನ್ನಡ ಜಿಲ್ಲೆ ಫಸ್ಟ್‌, ಚಿತ್ರದುರ್ಗ ಲಾಸ್ಟ್

Exit mobile version