Site icon Vistara News

ಸರ್ಕಾರಿ ಸೇವಾ ನಿವೃತ್ತಿ ನಂತರ ಅನಗತ್ಯ ಅಲೆದಾಟಕ್ಕೆ ಬ್ರೇಕ್;‌ ತ್ವರಿತ ಸೌಲಭ್ಯಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ

shadakshari

ಶಿವಮೊಗ್ಗ: ಸರ್ಕಾರವು ಸಂಘರ್ಷಕ್ಕೆ ಅವಕಾಶ ಮಾಡಿಕೊಡದೇ ನೌಕರರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ಇದನ್ನೂ ಓದಿ | 86,500 ಸರ್ಕಾರಿ ನೌಕರರು ಕಂಪ್ಯೂಟರ್‌ ಪರೀಕ್ಷೆಯಲ್ಲಿ ಫೇಲ್‌ !

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ನೌಕರರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಗುರುಸ್ಪಂದನ, ಗುರುತಿನ ಚೀಟಿ ವಿತರಣೆ, ಇ-ಫೈಲಿಂಗ್ ನಮೂನೆಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಸರ್ಕಾರಿ ನೌಕರರ ವೇತನ-ಭತ್ಯೆ ಮತ್ತಿತರ ದಾಖಲೆಗಳನ್ನು ನಿರ್ವಹಿಸಲು, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನೌಕರರ ಸ್ನೇಹಿಯಾಗಿ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರವೂ ಕೂಡ ಕಾರ್ಯತತ್ಪರವಾಗಿರುವುದು ಸಂತಸದ ಸಂಗತಿ ಎಂದರು.

ನೌಕರರು ತಮ್ಮ ಸೇವಾ ನಿವೃತ್ತಿಯ ನಂತರ ದೊರೆಯಬೇಕಾದ ಸೌಲಭ್ಯಗಳನ್ನು ಪಡೆಯಲು ಅನೇಕ ತಿಂಗಳುಗಳ ಕಾಲ ಬೇಕಾಗಿತ್ತು. ಆದರೆ, ಇನ್ನು ಕೆಲವೇ ದಿನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಪರಿಣಾಮವಾಗಿ ನೌಕರರಿಗೆ ತ್ವರಿತವಾಗಿ ಸೌಲಭ್ಯಗಳು ಕೂಡಲೇ ದೊರೆಯಲಿದೆ. ಇದರಿಂದಾಗಿ ಕಚೇರಿಗಳಿಗೆ ಅನಗತ್ಯ ಅಲೆದಾಟ ತಪ್ಪಲಿದೆ. ಪ್ರಸ್ತುತ ಎಲ್ಲಾ ಕಚೇರಿಗಳಲ್ಲಿ ನಿರ್ವಹಿಸಲಾಗುತ್ತಿರುವ ಸೇವಾ ವಹಿಯ ಬದಲಾಗಿ ಮುಂದಿನ 6-8 ತಿಂಗಳಲ್ಲಿ ಇ.ಎಸ್.ಆರ್. ಸಿಸ್ಟಮ್ ಅನುಷ್ಠಾನಗೊಳ್ಳಲಿದೆ.

ಇದರಿಂದಾಗಿ ನೌಕರರ ಬಡ್ತಿ, ರಜೆ ಸೌಲಭ್ಯ, ವೇತನ, ಮುಂತಾದ ಮಾಹಿತಿಗಳು ಎಚ್.ಆರ್.ಎಂ.ಎಸ್ ಮೂಲಕ ಉನ್ನತೀಕರಣಗೊಂಡು ತಮ್ಮ ಸೇವಾ ವಹಿ ಇ.ಎಸ್.ಆರ್.ನಲ್ಲಿ ದಾಖಲಾಗಲಿವೆ. ಅಲ್ಲದೇ ಪಡೆಯುವ ಸಾಲ-ಸೌಲಭ್ಯಗಳಿಗಾಗಿ ಅನಗತ್ಯ ಅಲೆದಾಡದೆ ಆನ್‍ಲೈನ್ ಮೂಲಕ ಎಲ್ಲ ರೀತಿಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಷಡಾಕ್ಷರಿ ಹೇಳಿದರು. ಮುಂದಿನ ಮೂರು ತಿಂಗಳ ಅವಧಿಯೊಳಗಾಗಿ ಎಲ್ಲಾ ನೌಕರರಿಗೆ ವೇತನ ಬಟವಾಡೆಯ ಮಾಹಿತಿ ಮೊಬೈಲ್ ಸಂದೇಶದ ಮೂಲಕ ತಲುಪಲಿದೆ. ಅದಕ್ಕಾಗಿ ನೌಕರರು ತಮ್ಮ ಮೊಬೈಲ್ ನಂಬರ್‌ಅನ್ನು ನೋಂದಾಯಿಸಿಕೊಳ್ಳುವಂತೆ ಅವರು ಸೂಚಿಸಿದರು.

ಅನಾರೋಗ್ಯದಿಂದ ಬಾಧಿತರಾಗಿರುವ ನೌಕರರಿಗೆ ವೇತನರಹಿತ ಚಿಕಿತ್ಸಾ ಸೌಲಭ್ಯ ಮುಂದಿನ 3-4 ತಿಂಗಳಲ್ಲಿ ಅನುಷ್ಠಾನಕ್ಕೆ ಬರಲಿದೆ. ವಿಶೇಷ ಪ್ರಕರಣ ಒಂದರಲ್ಲಿ ಶ್ವಾಸಕೋಶ ಸಂಬಂಧಿ ತೀವ್ರತರಹದ ಕಾಯಿಲೆಗೆ 30 ಲಕ್ಷ ರೂ.ವರೆಗೆ ಸರ್ಕಾರದ ಆರ್ಥಿಕ ನೆರವು ದೊರೆಯಲಿದೆ ಎಂದವರು ಹೇಳಿದರು.

ಸಿಬ್ಬಂದಿ ಕೊರತೆ, ತಾಂತ್ರಿಕ ಕಾರಣಗಳು ಇಂತಹ ಅನೇಕ ಸಮಸ್ಯೆಗಳಿಂದಾಗಿ ನೌಕರರ ಅದರಲ್ಲೂ ಶಿಕ್ಷಕರ ಸೇವಾ ವಹಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವಲ್ಲಿ ನ್ಯೂನತೆಗಳುಂಟಾಗಿರುವುದು ನಿಜ. ಆದರೆ, ಕಳೆದ ಕೆಲವು ವರ್ಷಗಳಿಂದೀಚೆಗೆ ಆಡಳಿತದಲ್ಲಿ ಅನೇಕ ಸುಧಾರಣೆಗಳನ್ನು ತಂದಿದ್ದರ ಪರಿಣಾಮವಾಗಿ ಸಮಸ್ಯೆಗಳಲ್ಲಿ ಇಳಿಮುಖವಾಗಿರುವುದನ್ನು ಅರಿತಿದ್ದೇನೆ. ಕಳೆದ ಎರಡೂವರೆ ವರ್ಷಗಳಲ್ಲಿ ಸಾಮಾನ್ಯದಿಂದ ಗಂಭೀರ ಸ್ವರೂಪದ 20ಕ್ಕೂ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಪ್ರಸಕ್ತ ಸಾಲಿನ ಅಂತ್ಯದೊಳಗಾಗಿ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರಕ್ಕೆ ಸಮಾನವಾದ ವೇತನವನ್ನು ಕೊಡುವಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಷಡಾಕ್ಷರಿ ತಿಳಿಸಿದರು.

ಬಳಿಕ ಮಾತಾನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ “”ಎಚ್.ಆರ್.ಎಂ.ಎಸ್.ನಲ್ಲಿ ಕಾಲಕಾಲಕ್ಕೆ ನೌಕರರ ಸೇವಾ ಮಾಹಿತಿಯನ್ನು ಉನ್ನತೀಕರಿಸಲಾಗುತ್ತಿದೆ.  ಭೌತಿಕವಾಗಿಯೂ ಮಾಹಿತಿಯನ್ನು ಸೇವಾ ವಹಿಯಲ್ಲಿ ದಾಖಲಿಸಲು ಅವಕಾಶ ನೀಡಲಾಗುತ್ತಿದೆ. ಈ ಅವಧಿಯಲ್ಲಿ ಸೇವಾ ಪುಸ್ತಕದಲ್ಲಿ ದಾಖಲಾಗಬೇಕಾದ, ದಾಖಲಾಗಿರುವ ವಿಷಯದಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ಸದವಕಾಶ ಇದಾಗಿದೆ‌ʼʼ ಷಡಾಕ್ಷರಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ | ಮೃತ ಸರ್ಕಾರಿ ನೌಕರರ ಪಿಂಚಣಿ ಗೊಂದಲ ಬಗೆಹರಿಸಿದ ಸರ್ಕಾರ

Exit mobile version