ಅಥಣಿ: ಕೇಂದ್ರದ ಹಾಲಿ ಸರ್ಕಾರ ಮತ್ತು ರಾಜ್ಯದಲ್ಲಿ ಈ ಹಿಂದೆ ಇದ್ದ BJP ಸರ್ಕಾರ ರಾಜ್ಯದ ಯಾವ ನೀರಾವರಿ ಯೋಜನೆಗಳಿಗೂ ಬೆಂಬಲ ನೀಡಲಿಲ್ಲ. ಕೃಷ್ಣಾ ಮೇಲ್ದಂಡೆ, ಮಹದಾಯಿ, ಭದ್ರಾ ಮೇಲ್ದಂಡೆ, ಮೇಕೆದಾಟು ಯೋಜನೆಗಳಿಗೆ ಕೇಂದ್ರ ಒಂಚೂರು ಸಹಕಾರ ನೀಡುತ್ತಿಲ್ಲ. ಬೆಳಗಾವಿಯಲ್ಲಿ ಗೆದ್ದಿರುವ ಇಬ್ಬರು ಸಂಸದರು ಸೇರಿ ಬಿಜೆಪಿಯ ಒಬ್ಬೇ ಒಬ್ಬ ಸಂಸದ ಪಾರ್ಲಿಮೆಂಟಲ್ಲಿ ಧ್ವನಿ ಎತ್ತಲಿಲ್ಲ. ಇದು ಬೆಳಗಾವಿ ಜನತೆಗೆ, ರಾಜ್ಯದ ಜನತೆಗೆ ಬಿಜೆಪಿ ಸಂಸದರು ಬಗೆದ ದ್ರೋಹ ಅಲ್ಲವೇ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಖಾರವಾಗಿ ಪ್ರಶ್ನಿಸಿದರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿಯ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, 1500 ಕೋಟಿ ವೆಚ್ಚದ ಬೃಹತ್ ಏತ ನೀರಾವರಿ ಯೋಜನೆಯನ್ನು ಬೆಳಗಾವಿ ಜಿಲ್ಲೆಗೆ ಕೊಡುವ ಮೂಲಕ ಲಕ್ಷ್ಮಣ ಸವದಿ ಅವರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ. ನಮ್ಮ ಕಾಂಗ್ರೆಸ್ ಸರ್ಕಾರ ಈ ಬೃಹತ್ ಯೋಜನೆಯನ್ನು ಬೆಳಗಾವಿ ಜಿಲ್ಲೆಗೆ ನೀಡಿದ್ದನ್ನು ಮರೆಯಲಾಗದು ಎಂದು ಹೇಳಿದರು.
ಈ ಯೋಜನೆಯಿಂದ ಎರಡು ರೀತಿಯ ಲಾಭ ಆಗಲಿದೆ. ಮೊದಲಿಗೆ ಒಣ ಭೂಮಿ ಇರುವ ಜಮೀನುಗಳಿಗೆ ನೀರು ಒದಗುತ್ತದೆ. ಎರಡನೆಯದಾಗಿ ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಅಭಿವೃದ್ಧಿ ಕೂಡ ಆಗುತ್ತದೆ ಎಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಉದಾಹರಣೆಗಳನ್ನು ನೀಡಿ ವಿವರಿಸಿದರು.
ಇದನ್ನೂ ಓದಿ | DK Shivakumar : ಎಸ್ಟಿಎಸ್, ಹೆಬ್ಬಾರ್ ಮಾತ್ರ ಅಲ್ಲ, ಇನ್ನೂ ಹಲವರು ಕಾಂಗ್ರೆಸ್‌ಗೆ ಬರ್ತಾರೆ ಎಂದ ಡಿಕೆಶಿ
ನೀರಾವರಿ ಯೋಜನೆಗಳ ಬಗ್ಗೆಯೂ ಬಿಜೆಪಿ ಸಂಸದರು ಬಾಯಿಯನ್ನೇ ಬಿಡಲಿಲ್ಲ, ರಾಜ್ಯಕ್ಕೆ ಆರ್ಥಿಕವಾಗಿ ವಂಚಿಸುತ್ತಿರುವ ಬಗ್ಗೆಯೂ ತುಟಿ ಬಿಡದ ಈ ಸಂಸದರಿಗೆ ನೀವು ಕೊಟ್ಟ ಓಟಿಗೆ ಏನು ಗೌರವ ಬಂತು ಹೇಳಿ. BJP ಇವತ್ತಿನವರೆಗೂ ನುಡಿದಂತೆ ನಡೆದ ಒಂದೇ ಒಂದು ಉದಾಹರಣೆ ಇದೆಯಾ ನೀವೇ ವಿಚಾರ ಮಾಡಿ. ಕಾಂಗ್ರೆಸ್ ಸರ್ಕಾರ, ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡು ನೀವು ಕೊಟ್ಟ ಓಟಿಗೆ ಗೌರವ ಕೊಟ್ಟಿದ್ದೇವೆ. ಹೌದೋ ಇಲ್ಲವೋ ಎದೆ ಮುಟ್ಟಿಕೊಂಡು ಕೇಳಿಕೊಳ್ಳಿ ಎಂದು ಸಿಎಂ ಕರೆ ನೀಡಿದರು.
ನಿಮ್ಮನ್ನು ಕೆರಳಿಸಿ ವಂಚಿಸುವವರು ಬೇಕಾ? ನಾವು ಬೇಕಾ?
ನಿಮ್ಮ ಬದುಕಿಗೆ ಆಸರೆ ಆಗುತ್ತಿರುವ, ಕುಟುಂಬದ ಕಷ್ಟಗಳಿಗೆ ಸ್ಪಂದಿಸುವ ಕಾರ್ಯಕ್ರಮ ಕೊಡುತ್ತಿರುವ ನಾವು ಬೇಕೋ? ದೇವರ ಹೆಸರಲ್ಲಿ ನಿಮ್ಮ ಭಾವನೆ ಕೆರಳಿಸಿ ನಿಮ್ಮನ್ನು ವಂಚಿಸುತ್ತಿರುವ BJP ಬೇಕಾ? ನಿಮ್ಮ ಹೃದಯವನ್ನು ಕೇಳಿಕೊಳ್ಳಿ. ನಿಮ್ಮ ಹೃದಯ ಹೇಳಿದವರಿಗೆ ಮತ ಹಾಕಿ ಎಂದು ಸಿ.ಎಂ ಕರೆ ನೀಡಿದರು.
ನರೇಂದ್ರ ಮೋದಿಯವರ ಸುಳ್ಳುಗಳಿಗೆ, ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯಗಳಿಗೆ ಕೋಲೆ ಬಸವನಂತೆ ತಲೆ ಆಡಿಸುವ ಬಿಜೆಪಿಯನ್ನು ತಿರಸ್ಕರಿಸಿ. ನಾವು ಕೆಲಸ ಮಾಡಿ ಕೂಲಿ ಕೇಳುತ್ತಿದ್ದೇವೆ. ಕೆಲಸ ಮಾಡಿದವರಿಗೆ ನೀವು ಕೂಲಿ ಕೊಡಿ ಎಂದು ಮನವಿ ಮಾಡಿದರು.
ನಾಡಿನ ಬಡವರ, ಮಧ್ಯಮ ವರ್ಗದವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದೇವೆ. ಇದು ತಪ್ಪಾ? ಆದರೆ ಬಿಜೆಪಿ ಇದನ್ನು ವಿರೋಧಿಸುತ್ತಿದೆ. ನಾಡಿನ ನಾಲ್ಕೂವರೆ ಕೋಟಿ ಫಲಾನುಭವಿಗಳನ್ನು BJP ಅವಮಾನಿಸುತ್ತಿದೆ. ನಿಮ್ಮನ್ನು ಅವಮಾನಿಸುವವರನ್ನು ಕ್ಷಮಿಸಬೇಡಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಇದನ್ನೂ ಓದಿ | Sedition Case: ಖಾಸಗಿ ಸಂಸ್ಥೆಗಳ FSL ವರದಿಗೆ ಮಾನ್ಯತೆ ಕೊಡಲ್ಲ; ಪೊಲೀಸ್ ವರದಿಯೇ ಅಧಿಕೃತ: ಸಿಎಂ ಸಿದ್ದರಾಮಯ್ಯ
ಶಾಸಕರಾದ ಲಕ್ಷ್ಮಣ್ ಎಂ ಸವದಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಡಿಸಿಎಂ ಹಾಗೂ ಬೃಹತ್ ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಬ ಹಟ್ಟಿಹೊಳಿ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ಶಾಸಕರಾದ ಮಹೇಂದ್ರ ತಮ್ಮಣ್ಣವರ, ಅಶೋಕ ಎಂ ಪಟ್ಟಣ ಸೇರಿ ಹಲವು ನಾಯಕರು ವೇದಿಕೆಯಲ್ಲಿದ್ದರು.