Site icon Vistara News

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ | ಒಂದೇ ಒಂದು ಹಳ್ಳಿಯನ್ನು ಬಿಟ್ಟುಕೊಡಲ್ಲ, ಫಡ್ನವಿಸ್‌ ಬಾಯ್ಮಾತಿನ ಪ್ರತಾಪ

devendra fadnvis

ಮುಂಬೈ: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣಾರ್ಹತೆ ಕುರಿತು ಸುಪ್ರೀಂ ಕೋರ್ಟ್‌ ಇನ್ನೂ ತೀರ್ಮಾನವನ್ನೇ ಕೈಗೊಂಡಿಲ್ಲ. ಆಗಲೇ, ಮಹಾರಾಷ್ಟ್ರದ ಕೋಪ-ತಾಪ ಶುರುವಾಗಿದೆ. ಇದರ ಭಾಗವಾಗಿಯೇ, “ನಾವು ಮಹಾರಾಷ್ಟ್ರದ ಒಂದೇ ಒಂದು ಹಳ್ಳಿಯನ್ನು ಬಿಟ್ಟುಕೊಡುವುದಿಲ್ಲ” ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಹೇಳಿದ್ದಾರೆ.

“ಮಹಾರಾಷ್ಟ್ರದ ಜಾಟ್‌ ತಹಸೀಲ್‌ ವ್ಯಾಪ್ತಿಯ ಹಲವು ಗ್ರಾಮ ಪಂಚಾಯಿತಿಗಳನ್ನು ಕರ್ನಾಟಕದ ಜತೆ ವಿಲೀನಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ. ವಿಲೀನಗೊಳಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಲಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಹೇಳಿಕೆಗೆ ಪ್ರತಿಯಾಗಿ ಫಡ್ನವಿಸ್‌ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.

“ಮಹಾರಾಷ್ಟ್ರದ ಒಂದೇ ಒಂದು ಹಳ್ಳಿಯು ಕರ್ನಾಟಕದ ಜತೆ ವಿಲೀನಗೊಳ್ಳಲು ಬಿಡುವುದಿಲ್ಲ. ಕರ್ನಾಟಕ ಸರ್ಕಾರವು ಮೊದಲು ಮರಾಠಿ ಮಾತನಾಡುವ ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿಯು ಮಹಾರಾಷ್ಟ್ರದೊಂದಿಗೆ ವಿಲೀನವಾಗುವುದನ್ನು ತಡೆಯಲು ಹೋರಾಟ ನಡೆಸುವ ತಾಕತ್ತು ಬೆಳೆಸಿಕೊಳ್ಳಲಿ” ಎಂದು ವ್ಯಂಗ್ಯ ಮಾಡಿದ್ದಾರೆ. ಹಾಗೆಯೇ, “ಜಾಟ್‌ ಪ್ರಸ್ತಾಪವು 2012ರದ್ದಾಗಿದೆ. ಅದು ಹಳೆಯ ಪ್ರಸ್ತಾಪವಾಗಿದೆ. ಕರ್ನಾಟಕದಿಂದ ಹೊಸ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ” ಎಂದರು.  

1956ರ ರಾಜ್ಯ ಪುನರ್ವಿಂಗಡನಾ ಕಾಯ್ದೆಯನ್ನೇ ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರವು 2004ರಲ್ಲಿ ಅರ್ಜಿಯನ್ನು ಸಲ್ಲಿಸಿತ್ತು. ಈ ಗಡಿ ವಿವಾದದ ಅರ್ಜಿ ವಿಚಾರಣಾರ್ಹತೆ (Maintainability)ಯನ್ನು ಸುಪ್ರೀಂ ಕೋರ್ಟ್ ನಡೆಸಬೇಕೇ ಅಥವಾ ಬೇಡವೇ ಎಂಬುದರ ಕುರಿತೇ ಇತ್ಯರ್ಥವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದು, ಕಾನೂನು ತಂಡಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ, ನವೆಂಬರ್‌ 23ರಂದು ನಡೆಯಬೇಕಿದ್ದ ವಿಚಾರಣೆಯು ನಡೆದಿಲ್ಲ. ಆದಾಗ್ಯೂ, ವಿಚಾರಣೆ ಕುರಿತು ದಿನಾಂಕ ನಿಗದಿಯಾಗಿಲ್ಲ.

ಇದನ್ನೂ ಓದಿ | Supreme court | ಕರ್ನಾಟಕ- ಮಹಾರಾಷ್ಟ್ರದ ಗಡಿ ತಗಾದೆ ಅರ್ಜಿ ವಿಚಾರಣೆ ಇಂದು ಇಲ್ಲ

Exit mobile version