ಶಿವಮೊಗ್ಗ: ಬಿಜೆಪಿಯವರಿಗೆ ದುರ್ಬುದ್ಧಿ, ಸೋಲುತ್ತೀವಿ ಅಂತ ಗೊತ್ತಾದ ಮೇಲೆ ಕೆಟ್ಟ ಬುದ್ಧಿ ಬಂದಿದೆ. ಅಧಿಕಾರಿಗಳೊಂದಿಗೆ ನಾವು ಯಾವುದೇ ಪ್ರಚಾರ ಮಾಡಿಲ್ಲ, ಅವರ ಡೋಂಗಿ ಕೇಸ್‌ಗಳಿಗೆ ಹೆದರಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ.
ಡಿಡಿಪಿಐ, ಬಿಇಒಗಳನ್ನು ಡಿಸಿಎಂ ಮತ್ತು ಶಿಕ್ಷಣ ಸಚಿವರು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯವರು ಸ್ವಾರ್ಥ ಹಾಗೂ ಓಟಿಗಾಗಿ ರಾಮನನ್ನು ಬೀದಿಗೆ ತಂದರು. ಬಂಗಾರಪ್ಪ ಅವರು ಆರಾಧನ ಎಂಬ ಕಾರ್ಯಕ್ರಮ ಜಾರಿಗೆ ತಂದರು. ಎಲ್ಲರಿಗೂ ದೇವಸ್ಥಾನದ ಒಳಗಡೆ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟಿದ್ದರು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಬಂದ ನಂತರ ರೌಡಿಸಂ ಹೆಚ್ಚಳ ಆರೋಪಕ್ಕೆ ಪ್ರತಿಕ್ರಿಯಿಸಿ, ರೌಡಿಸಂ ಮಾಡಿದವರು ಯಾರು, ಏನು ರೌಡಿಸಂ ಇದೆ. ರೌಡಿಸಂ ಮಾಡಿ ನಮಗೆ ಅಭ್ಯಾಸ ಇಲ್ಲ. ಬಿಜೆಪಿಯವರೇ ರಾಗಿ ಗುಡ್ಡದಲ್ಲಿ ರೌಡಿಸಂ ಮಾಡಲು ಹೋಗಿದ್ದರು. ಜನರು ಗ್ಯಾರಂಟಿ ಯೋಜನೆಯ ಸಹಕಾರ ಪಡೆದಿದ್ದಾರೆ ಎಂದರೆ ಅವರು ನಮಗೆ ಸಹಕಾರ ಕೊಡುತ್ತಾರೆ. ಅವರ ದುಡ್ಡನ್ನು ಅವರ ಮಡಿಲಿಗೆ ಹಾಕಿದ್ದೇವೆ ಎಂದು ಹೇಳಿದರು.
ಫೆ.17 ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಸಮಾವೇಶ ಆಯೋಜನೆ ಮಾಡಿದ್ದೇವೆ. ಗ್ಯಾರಂಟಿ ಯೋಜನೆ ಮೂಲಕ ನಮ್ಮ ಅಕೌಂಟ್ ಜನರು ಓಪನ್ ಮಾಡಿದರು. ಬಿಜೆಪಿಯವರ ಅಕೌಂಟ್ ಕ್ಲೋಸ್ ಮಾಡಿದರು. ಜನರು ನಮಗೆ ಆಡಳಿತ ನಡೆಸಲು ಅವಕಾಶ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ | Rajyasabha Election : ಅಜಯ್ ಮಾಕೆನ್‌ಗೆ ರಾಜ್ಯದಿಂದ ಟಿಕೆಟ್; ನಸೀರ್ ಹುಸೇನ್, ಜಿ.ಸಿ.ಗೆ ಮತ್ತೆ ಅದೃಷ್ಟ
ಸ್ಪೀಕರ್ ಹೊಸ ಕಾರು ಖರೀದಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೊಸ ಕಾರು ತಗೊಂಡ ತಕ್ಷಣ ಸಮಸ್ಯೆ ಆಯ್ತಾ, ಇವರೆಲ್ಲಾ ಆಟೋ ರಿಕ್ಷಾ, ಬಸ್‌ನಲ್ಲಿ ಓಡಾಡಿದ್ರಾ? ಬರಗಾಲ ಅಂತ ನಾವೆಲ್ಲಾ ಊಟ ಮಾಡುವುದು ಬಿಟ್ಟಿದ್ದೇವಾ? ಬರಗಾಲ ಅಂತ ಸರ್ಕಾರ ಅಕ್ಕಿ ಕೊಡುವುದು ಕಡಿಮೆ ಮಾಡಿದೆಯಾ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಕಿತಾಪತಿಯವರು, ಅಲ್ಲಿ ಕಿತಾಪತಿ ಮಾಡುವವರು ಕೆಲವರು ಇದ್ದಾರೆ. ಅವರು ಅಲ್ಲಲ್ಲಿ ಹೀಗೆ ಏನೇನೋ ಮಾತನಾಡುತ್ತಾರೆ ಎಂದು ಕಿಡಿಕಾರಿದರು.