Site icon Vistara News

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ | ರಾಜ್ಯದ ಒಂದಿಂಚು ಜಾಗವನ್ನೂ ಬಿಡಲ್ಲ, ಫಡ್ನವಿಸ್‌ಗೆ ಬೊಮ್ಮಾಯಿ ತಿರುಗೇಟು

ತುಮಕೂರು ಜನಸಂಕಲ್ಪ ಯಾತ್ರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಡಿಯೊ ತಿರುಚುವಿಕೆ ಪ್ರಕರಣ

ಬೆಂಗಳೂರು: ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ಬಿಕ್ಕಟ್ಟು ಕುರಿತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ನೀಡಿದ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. “ದೇವೇಂದ್ರ ಫಡ್ನವಿಸ್‌ ಅವರ ಕನಸು ಎಂದಿಗೂ ನನಸಾಗುವುದಿಲ್ಲ. ರಾಜ್ಯದ ಒಂದಿಂಚು ನೆಲವೂ ಮಹಾರಾಷ್ಟ್ರದ ಪಾಲಾಗಲು ಬಿಡುವುದಿಲ್ಲ” ಎಂದು ‘ವಿಸ್ತಾರ ನ್ಯೂಸ್‌’ಗೆ ತಿಳಿಸಿದ್ದಾರೆ.

ವಿಸ್ತಾರ ಟಿವಿಯ ನ್ಯೂಸ್ ಫ್ರಂಟ್‌ಲೈನ್‌ನಲ್ಲಿ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, “ಗಡಿ ವಿಚಾರದಲ್ಲಿ ಮಹಾರಾಷ್ಟ್ರಕ್ಕೆ ನಾವು ತಕ್ಕ ಪ್ರತ್ಯುತ್ತರ ನೀಡುತ್ತೇವೆ” ಎಂದರು.

“ಕಾನೂನಾತ್ಮಕವಾಗಿ ನಾವು ಸಮರ್ಥರಾಗಿದ್ದೇವೆ. ಇದಕ್ಕಾಗಿ ಸಮರ್ಥ ನ್ಯಾಯವಾದಿಗಳ ತಂಡವನ್ನು ರಚಿಸಿದ್ದೇವೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಬಲವಾಗಿ ಕಾನೂನು ಹೋರಾಟ ಮಾಡುತ್ತೇವೆ. ಮಹಾರಾಷ್ಟ್ರ ಇದುವರೆಗೆ ರಾಜ್ಯದ ನೆಲದ ಮೇಲೆ ಕಣ್ಣು ಹಾಕಿ ವಿಫಲವಾಗಿದೆ. ಇದರಲ್ಲಿ ಅವರು ಎಂದಿಗೂ ಸಫಲವಾಗುವುದಿಲ್ಲ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನಾವು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸಲಹೆಯನ್ನೂ ಪರಿಗಣಿಸುತ್ತೇವೆ” ಎಂದು ತಿಳಿಸಿದ್ದಾರೆ.

ನೆಲ, ಜಲ, ಗಡಿ ರಕ್ಷಣೆಗೆ ಕಟಿಬದ್ಧ

“ನಾಡಿನ ನೆಲ, ಜಲ, ಗಡಿ ರಕ್ಷಣೆ ವಿಚಾರದಲ್ಲಿ ನಮ್ಮ ಸರ್ಕಾರ ಕಟಿ ಬದ್ಧವಾಗಿದೆ. ಮಹಾರಾಷ್ಟ್ರದಲ್ಲಿರುವ ಕನ್ನಡ ಭಾಷಿಕ ಪ್ರದೇಶಗಳಾದ‌ ಸೊಲ್ಲಾಪುರ, ಅಕ್ಕಲಕೋಟೆ ಕರ್ನಾಟಕಕ್ಕೆ ಸೇರಬೇಕೆನ್ನುವುದು ನಮ್ಮ ಆಗ್ರಹವಿದೆ. ಮಹಾರಾಷ್ಟ್ರ ಸರ್ಕಾರ 2004 ರಿಂದಲೂ ಎರಡೂ ರಾಜ್ಯಗಳ ಗಡಿ ವಿಚಾರದಲ್ಲಿ ಕ್ಯಾತೆ ತೆಗೆದು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದೆ. ಇದುವರೆಗೂ ಅದು ಯಶಸ್ವಿಯಾಗಿಲ್ಲ, ಮುಂದೆಯೂ ಆಗುವುದಿಲ್ಲ” ಎಂದು ಹೇಳಿದ್ದಾರೆ.

ಫಡ್ನವಿಸ್‌ ಹೇಳಿದ್ದೇನು?

“ಮಹಾರಾಷ್ಟ್ರದ ಒಂದೇ ಒಂದು ಹಳ್ಳಿಯು ಕರ್ನಾಟಕದ ಜತೆ ವಿಲೀನಗೊಳ್ಳಲು ಬಿಡುವುದಿಲ್ಲ. ಕರ್ನಾಟಕ ಸರ್ಕಾರವು ಮೊದಲು ಮರಾಠಿ ಮಾತನಾಡುವ ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿಯು ಮಹಾರಾಷ್ಟ್ರದೊಂದಿಗೆ ವಿಲೀನವಾಗುವುದನ್ನು ತಡೆಯಲು ಹೋರಾಟ ನಡೆಸುವ ತಾಕತ್ತು ಬೆಳೆಸಿಕೊಳ್ಳಲಿ” ಎಂದು ಫಡ್ನವಿಸ್‌ ಹೇಳಿದ್ದರು. ಇದಕ್ಕೂ ಮೊದಲು ಕೂಡ, ಕರ್ನಾಟಕದ ಗ್ರಾಮಗಳು ಮಹಾರಾಷ್ಟ್ರದ ಜತೆ ವಿಲೀನವಾದರೆ ಹಲವು ಸೌಲಭ್ಯ ನೀಡಲಾಗುವುದು ಎಂದು ಫಡ್ನವಿಸ್‌ ಹೇಳಿದ್ದರು. ಇದಕ್ಕೂ ಪ್ರತಿಕ್ರಿಯಿಸಿದ್ದ ಬೊಮ್ಮಾಯಿ, “ನಾವು ಈಗಾಗಲೇ ಸಾಕಷ್ಟು ಅಭಿವೃದ್ಧಿಗೊಳಿಸಿದ್ದೇವೆ. ಮಹಾರಾಷ್ಟ್ರ ಮೂಗು ತೂರಿಸುವುದು ಬೇಡ” ಎಂದಿದ್ದರು.

1956ರ ರಾಜ್ಯ ಪುನರ್ವಿಂಗಡನಾ ಕಾಯ್ದೆಯನ್ನೇ ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರವು 2004ರಲ್ಲಿ ಅರ್ಜಿಯನ್ನು ಸಲ್ಲಿಸಿತ್ತು. ಈ ಗಡಿ ವಿವಾದದ ಅರ್ಜಿ ವಿಚಾರಣಾರ್ಹತೆ (Maintainability)ಯನ್ನು ಸುಪ್ರೀಂ ಕೋರ್ಟ್ ನಡೆಸಬೇಕೇ ಅಥವಾ ಬೇಡವೇ ಎಂಬುದರ ಕುರಿತೇ ಇತ್ಯರ್ಥವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದು, ಕಾನೂನು ತಂಡಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ, ನವೆಂಬರ್‌ 23ರಂದು ನಡೆಯಬೇಕಿದ್ದ ವಿಚಾರಣೆಯು ನಡೆದಿಲ್ಲ. ಆದಾಗ್ಯೂ, ವಿಚಾರಣೆ ಕುರಿತು ದಿನಾಂಕ ನಿಗದಿಯಾಗಿಲ್ಲ.

ಇದನ್ನೂ ಓದಿ | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ | ಒಂದೇ ಒಂದು ಹಳ್ಳಿಯನ್ನು ಬಿಟ್ಟುಕೊಡಲ್ಲ, ಫಡ್ನವಿಸ್‌ ಬಾಯ್ಮಾತಿನ ಪ್ರತಾಪ

Exit mobile version