ಶಿವಮೊಗ್ಗ: ಭಾನುವಾರ (ಡಿ.೨೫) ಶಿವಮೊಗ್ಗದಲ್ಲಿ ಭೋಪಾಲ್‌ನ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ (Pragya Singh Thakur) ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಾರೆಂದು ಟ್ವಿಟರ್ ಮೂಲಕ ದೂರು ದಾಖಲು ಮಾಡುವಂತೆ ಮನವಿ ಮಾಡಿದ್ದ ನವ ದೆಹಲಿ ಮೂಲದ ದೂರುದಾರ ತೆಹಸೀನ್ ಪೂನಾವಾಲಾಗೆ ಶಿವಮೊಗ್ಗ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ತೆಹಸೀನ್ ಪೂನಾವಾಲಾ ಟ್ವಿಟರ್ ಮೂಲಕ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರಿಗೆ ದೂರು ದಾಖಲು ಮಾಡಿಕೊಳ್ಳುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೂರುದಾರನಿಗೆ ಠಾಣೆಗೆ ಹಾಜರಾಗುವಂತೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಿಂದ ನೋಟಿಸ್ ಜಾರಿಯಾಗಿದೆ.
ಬುಧವಾರ ಬೆಳಗ್ಗೆ 11 ಗಂಟೆಗೆ ಠಾಣೆಗೆ ಖುದ್ದಾಗಿ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕಿದೆ. ಈ ಸಂಬಂಧ ಮಾಹಿತಿ ಮತ್ತು ಪ್ರಾಥಮಿಕ ವಿಚಾರಣೆ ನಡೆಸಬೇಕಿದ್ದು, ಠಾಣೆಗೆ ಹಾಜರಾಗಿ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ನೋಟಿಸ್ ಅನ್ನು ತೆಹಸೀನ್ ಪೂನಾವಾಲಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ತಮಗೆ ನೋಟಿಸ್ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Road Accident | ಸಾಗರ ಬಳಿ ಭೀಕರ ಅಪಘಾತ; ರಸ್ತೆಯಲ್ಲಿ ಹೋಗುತ್ತಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಹರಿದ ಜಲ್ಲಿ ಲಾರಿ
ಶಿವಮೊಗ್ಗದಲ್ಲಿ ನಡೆದ ತ್ರೈವಾರ್ಷಿಕ ಸಮ್ಮೇಳನದಲ್ಲಿ ಸುಮಾರು 45 ನಿಮಿಷ ಮಾತನಾಡಿದ್ದ ಸಾಧ್ವಿ ಅವರು, ನಮ್ಮ ಹೆಣ್ಣು ಮಕ್ಕಳು ಲವ್ ಜಿಹಾದ್‌ಗೆ ಬಲಿಯಾಗಬಾರದು. ಲವ್ ಜಿಹಾದ್ ಮಾಡುವವರಿಗೆ ತಕ್ಕ ಉತ್ತರ ನೀಡಬೇಕು. ಹೆಣ್ಣುಮಕ್ಕಳ ರಕ್ಷಣೆ ಮಾಡಬೇಕು. ಇದಕ್ಕಾಗಿ ಪ್ರತಿ ಮನೆಯಲ್ಲೂ ಶಸ್ತ್ರ ಇರಬೇಕು. ಮನೆಯಲ್ಲಿ ತರಕಾರಿ ಕೊಯ್ಯುವ ಚಾಕು ಕೂಡ ಹರಿತವಾಗಿ ಇಡಬೇಕು ಎಂಬಿತ್ಯಾದಿ ಮಾತುಗಳನ್ನು ಆಡಿದ್ದರು.
ಸಾದ್ವಿ ಪ್ರಜ್ಞಾ ಸಿಂಗ್ ಅವರ ಈ ಹೇಳಿಕೆಯು ಉತ್ತರ ಭಾರತದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಇದೇ ವಿಚಾರವಾಗಿ ಈಗ ತೆಹಸೀನ್ ಅಸಮಾಧಾನ ಹೊರಹಾಕಿದ್ದು, ಸಾಧ್ವಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಸಾಮಾಜಿಕ ಸಾಸ್ಥ್ಯಕ್ಕೆ ಭಂಗ ತರುತ್ತಿದ್ದಾರೆ. ಸಾಧ್ವಿ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಮನವಿ ಮಾಡಿದ್ದ ತೆಹಸೀನ್, ಅವರ ವಿರುದ್ಧ u/s 153-A, 153-B, 268, 295-A, 298, 504, 508 inter alia of the Indian Penal Code, 1860 ಅಡಿಯಲ್ಲಿ ಎಫ್ಐಆರ್ ಮಾಡುವಂತೆಯೂ ಮನವಿ ಮಾಡಿದ್ದರು.
ಈಗ ಈ ಸಂಬಂಧ ಖುದ್ದು ಠಾಣೆಗೆ ಹಾಜರಾಗಿ ವಿವರಣೆ ನೀಡುವಂತೆ ಶಿವಮೊಗ್ಗ ಪೊಲೀಸರು ನೀಡಿರುವ ನೋಟಿಸ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ತೆಹಸೀನ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಪೊಲೀಸರ ಈ ಕ್ರಮದಿಂದ ಇಲಾಖೆಯ ನಡವಳಿಕೆ ಬಹಳ ಸ್ಪಷ್ಟ ಎಂಬುದು ಗೊತ್ತಾಗುವುದಿಲ್ಲವೇ ಎಂದು ನೋಟಿಸ್ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಇದನ್ನೂ ಓದಿ | Vakri Budh 2022 | ನಾಳೆ ಬುಧನ ವಕ್ರಿ ಸಂಚಾರ; ಯಾವ ರಾಶಿಯ ಮೇಲೆ ಏನು ಪರಿಣಾಮ?