Site icon Vistara News

Praveen Kumar | ಹಣಕ್ಕಾಗಿ ನಾಲ್ವರು ಸಂಬಂಧಿಕರನ್ನೇ ಕೊಂದಿದ್ದವನ ಕ್ಷಮಾದಾನಕ್ಕೆ ವಿರೋಧ

ಪ್ರವೀಣ್‌ ಕುಮಾರ್‌

ಮಂಗಳೂರು: ೯೦ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನೇ ನಡುಗಿಸಿದ್ದ ಕೊಲೆ ಪ್ರಕರಣದ ಅಪರಾಧಿ ಪ್ರವೀಣ್‌ ಕುಮಾರ್‌ಗೆ (Praveen Kumar) ಈಗ ಬಿಡುಗಡೆಯ ಭಾಗ್ಯ ಲಭಿಸಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಈತನ ಕ್ಷಮಾದಾನದ ಅರ್ಜಿಯನ್ನು ಪುರಸ್ಕರಿಸಲಾಗಿದೆ. ಆದರೆ, ಈತನನ್ನು ಬಿಡುಗಡೆ ಮಾಡಬಾರದು ಎಂದು ಹತ್ಯೆಯಾದವರ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

1994ರಲ್ಲಿ ಮಂಗಳೂರಿನ ವಾಮಂಜೂರಿನಲ್ಲಿ ನಡೆದ ನಾಲ್ಕು ಮಂದಿಯ ಬರ್ಬರ ಕೊಲೆ ಪ್ರಕರಣದ ರೂವಾರಿ ವಾಮಜೂರು ಪ್ರವೀಣ್‌ ಕುಮಾರ್‌ನನ್ನು (62) ಈ ವರ್ಷ ಭಾರತದ ಸ್ವಾತಂತ್ಯ್ರೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಜೈಲಿನಿಂದ ಬಿಡುಗಡೆ ಮಾಡಲು ಆದೇಶವಾಗಿದೆ. ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಈತ ಹಲವಾರು ಬಾರಿ ಕ್ಷಮಾದಾನಕ್ಕಾಗಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದ. ಹಲವು ಅರ್ಜಿಗಳ ಬಳಿಕ 2014ರಂದು ಪ್ರವೀಣ್‌ ಕುಮಾರ್ ಗಲ್ಲು ಶಿಕ್ಷೆಯನ್ನು ಆಜೀವ ಕಾರಾಗೃಹ ಶಿಕ್ಷೆಯಾಗಿ ಮಾರ್ಪಾಡು ಮಾಡಲಾಗಿತ್ತು. ಆದರೆ, ಇದೀಗ 62 ವರ್ಷದ ಪ್ರವೀಣ್‌ ಕುಮಾರ್‌ಗೆ ಕ್ಷಮಾದಾನದ ಮೂಲಕ ಬಿಡುಗಡೆಯ ಭಾಗ್ಯ ಸಿಕ್ಕಿದೆ.

‌ಕುಟುಂಬದವರಿಂದ ತೀವ್ರ ವಿರೋಧ

ಪ್ರವೀಣ್‌ ಕುಮಾರ್‌ನಿಂದ ಹತ್ಯೆಗೀಡಾದವರ ಕುಟುಂಬದವರಿಂದ ಬಿಡುಗಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆತನನ್ನು ಬಿಡುಗಡೆ ಮಾಡಬಾರದೆಂದು ಹತ್ಯೆಯಾದವರ ಕುಟುಂಬಸ್ಥರ ಪರವಾಗಿ ಸೀತಾರಾಮ ಮತ್ತು ಇತರರು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ವಾಮಜೂರು ಪ್ರವೀಣ್‌ ಕಳೆದ 28 ವರ್ಷಗಳಿಂದ ಜೈಲಿನಲ್ಲಿದ್ದು, ಪ್ರಸ್ತುತ ಬಳ್ಳಾರಿ ಜೈಲಿನಲ್ಲಿದ್ದಾನೆ.

ಇದನ್ನೂ ಓದಿ | ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ಇನ್ನೂ ಎನ್‌ಐಎಗೆ ಹಸ್ತಾಂತರವಾಗಿಲ್ಲ, ಪೊಲೀಸರಿಂದಲೇ ತನಿಖೆ: ಎಡಿಜಿಪಿ

28 ವರ್ಷಗಳ ಹಿಂದೆ ನಡೆದಿದ್ದೇನು?

ಅಪರಾಧಿ ಪ್ರವೀಣ್‌ 1994 ಫೆಬ್ರವರಿ 23 ರಂದು ರಾತ್ರಿ ವಾಮಂಜೂರಿನ ನಿವಾಸಿಗಳು ಹಾಗೂ ಆತನ ಸಂಬಂಧಿಕರೇ ಆಗಿದ್ದ ಅಪ್ಪಿ ಶೇರಿಗಾರ್ತಿ (75) ಆಕೆಯ ಪುತ್ರಿ ಶಕುಂತಲಾ (36), ಮೊಮ್ಮಗಳು ದೀಪಿಕಾ(9) ಮತ್ತು ಅಪ್ಪಿ ಅವರ ಪುತ್ರ ಗೋವಿಂದ (30) ಅವರನ್ನು ಕೊಲೆ ಮಾಡಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದನು. ಪ್ರವೀಣ್‌ ಮೂಲತಃ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಹೆರಿಯಡ್ಕ ನಿವಾಸಿಯಾಗಿದ್ದು, ಮಂಗಳೂರಿನ ಚಿಲಿಂಬಿಯಲ್ಲಿ ಟೈಲರಿಂಗ್‌ ಕೆಲಸ ಮಾಡುತ್ತಿದ್ದನು. ಸಿಂಗಲ್‌ ನಂಬರ್‌ ಲಾಟರಿ ಟಿಕೆಟ್‌ ಖರೀದಿಯ ಚಟಕ್ಕೆ ಬಿದ್ದು ಅಕ್ಷರಶಃ ಬೀದಿಪಾಲಾಗಿದ್ದ. ಇದಕ್ಕಾಗಿ ಪತ್ನಿ ಮತ್ತು ಕುಟುಂಬದ ಸದಸ್ಯರ ಚಿನ್ನಾಭರಣಗಳನ್ನು ಅಡವು ಇರಿಸಿದ್ದ. ಮಾತ್ರವಲ್ಲದೆ ವಿವಿಧ ಮೂಲಗಳಿಂದ ಸಾಲವನ್ನೂ ಮಾಡಿದ್ದ.

1994 ಫೆಬ್ರವರಿ 23ರಂದು ಸಂಜೆ ವಾಮಂಜೂರಿನಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದ ಆತ ರಾತ್ರಿ ಅಲ್ಲಿಯೇ ಮಲಗಿದ್ದ. ಮಧ್ಯ ರಾತ್ರಿ ಎದ್ದು ಮನೆಯಲ್ಲಿ ಮಲಗಿದ್ದ 9 ವರ್ಷದ ಬಾಲಕನ ಸಹಿತ 4 ಮಂದಿಯನ್ನು ಹಾರೆಯ (ಗದ್ದೆಯಲ್ಲಿ ಮಣ್ಣು ತೆಗೆಯುವ ಸಾಧನ) ಹಿಡಿಯಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿ ಮನೆ ಮಂದಿಯ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ. ಕೆಲವೇ ದಿನಗಳಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಕೊಲೆ ಕೃತ್ಯ ಎಸಗಿದ್ದ ಬಗ್ಗೆ ಆತ ತಪ್ಪೊಪ್ಪಿಕೊಡಿದ್ದು, ಕಳವು ಮಾಡಿದ್ದ ಚಿನ್ನಾಭರಣಗಳನ್ನು ಆತ ಬಚ್ಚಿಟ್ಟಲ್ಲಿಂದ ವಶಪಡಿಸಿಕೊಳ್ಳಲಾಗಿತ್ತು.


ನ್ಯಾಯಾಂಗ ಬಂಧನದಲ್ಲಿದ್ದ ಆತನನ್ನು ವಿಚಾರಣೆಗಾಗಿ ಬೆಳಗಾವಿಯ ಹಿಂಡಲಗ ಜೈಲಿನಿಂದ ಮಂಗಳೂರು ಜೈಲಿಗೆ ಕರೆತರುತ್ತಿದ್ದಾಗ ಹುಬ್ಬಳ್ಳಿಯ ಕುಂದಗೋಳದಲ್ಲಿ ಹೋಟೆಲ್‌ ಒಂದರಲ್ಲಿ ಊಟ ಮಾಡುತ್ತಿದ್ದ ವೇಳೆ ಬೆಂಗಾವಲು ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ. ಈ ಸಂದರ್ಭದಲ್ಲಿ ಆತ ಎಲ್ಲಿದ್ದಾನೆಂದು ಸುಳಿವು ನೀಡುವವರಿಗೆ 1 ಲಕ್ಷ ರೂ. ನಗದು ಬಹುಮಾನವನ್ನು ಸಂತ್ರಸ್ತರ ಕುಟುಂಬದವರು ಘೋಷಿಸಿದ್ದರು. ತಪ್ಪಿಸಿಕೊಂಡಿದ್ದ ಪ್ರವೀಣ್‌ ಗೋವಾಕ್ಕೆ ತೆರಳಿ ಅಲ್ಲಿ ಬೇರೆ ಹೆಸರಿನಲ್ಲಿ ಅಡಗಿಕೊಂಡಿದ್ದು, ಯುವತಿಯೊಬ್ಬಳನ್ನು ಪುಸಲಾಯಿಸಿ ಮದುವೆಯಾಗಿದ್ದಲ್ಲದೆ ಒಂದು ಮಗುವನ್ನೂ ಹೊಂದಿದ್ದ. 1999ರಲ್ಲಿ ಮಂಗಳೂರಿನ ಇನ್ಸ್‌ಪೆಕ್ಟರ್‌ ಜಯಂತ್‌ ಶೆಟ್ಟಿ ನೇತೃತ್ವದ ರೌಡಿ ನಿಗ್ರಹ ದಳ ಆತನನ್ನು ಪತ್ತೆ ಹಚ್ಚಿ ಬಂಧಿಸಿ ಪುನಃ ಜೈಲಿಗಟ್ಟಿತ್ತು.

ರಾಷ್ಟ್ರಪತಿಯಿಂದಲೂ ಕ್ಷಮಾದಾನ ಅರ್ಜಿ ತಿರಸ್ಕೃತ

ನ್ಯಾಯಾಂಗ ಬಂಧನದಲ್ಲಿದ್ದ ಆತನಿಗೆ ಮಂಗಳೂರಿನ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿತ್ತು. ಕೆಳಗಿನ ಕೋರ್ಟ್‌ ನೀಡಿದ ಈ ಶಿಕ್ಷೆಯನ್ನು ಬಳಿಕ ಹೈಕೋರ್ಟ್‌ ಮತ್ತು 2003ರಲ್ಲಿ ಸುಪ್ರೀಂ ಕೋರ್ಟ್‌ ಕೂಡ ಎತ್ತಿ ಹಿಡಿದಿತ್ತು. ಮರಣ ದಂಡನೆಯ ಶಿಕ್ಷೆಯ ಬಳಿಕ ಆತ ರಾಷ್ಟ್ರಪತಿಗೆ ಕ್ಷಮಾಪಣೆಯ ಅರ್ಜಿಯನ್ನು ಸಲ್ಲಿಸಿದ್ದ. ಈ ಅರ್ಜಿಯನ್ನು 2013 ಏಪ್ರಿಲ್‌ 4ರಂದು ರಾಷ್ಟ್ರಪತಿಯವರು ತಿರಸ್ಕರಿಸಿದ್ದರು. ಆದರೆ, 2014 ಜನವರಿ 22 ರಂದು ಸುಪ್ರೀಂ ಕೋರ್ಟ್‌ ಆತನ ಗಲ್ಲು ಶಿಕ್ಷೆಯನ್ನು ಆಜೀವ ಕಾರಾಗೃಹ ಶಿಕ್ಷೆಗೆ ಇಳಿಸಿತ್ತು. ಇದೀಗ ಸ್ವಾತಂತ್ಯ್ರೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸರ್ಕಾರವು ಕೆಲವು ಜನ ಕೈದಿಗಳಿಗೆ ಜೈಲಿನಿಂದ ಬಿಡುಗಡೆಯ ಭಾಗ್ಯವನ್ನು ಕಲ್ಪಿಸಿದ್ದು, ಹೀಗೆ ಬಿಡುಗಡೆಯಾಗುವವರ ಪಟ್ಟಿಯಲ್ಲಿ ವಾಮಂಜೂರು ಪ್ರವೀಣನೂ ಒಬ್ಬನಾಗಿದ್ದಾನೆ. ಕಳೆದ 28 ವರ್ಷಗಳಿಂದ ಜೈಲಿನಲ್ಲಿ ಇರುವ ಆತನನ್ನು ಬಿಡುಗಡೆ ಮಾಡುವ ಬಗ್ಗೆ ಸಂತ್ರಸ್ತ ಕುಟುಂಬದವರ ಪರವಾಗಿ ಗುರುಪುರದ ಸೀತಾರಾಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೇವಲ 80,000 ರೂಪಾಯಿ ಹಣದ ಆಸೆಗಾಗಿ ನನ್ನ 75 ವರ್ಷ ಪ್ರಾಯದ ವೃದ್ಧ ತಾಯಿ, 36 ವರ್ಷ ಪ್ರಾಯದ ತಂಗಿ, 30 ವರ್ಷ ಪ್ರಾಯದ ಮಾನಸಿಕ ಅಸ್ವಸ್ಥ ಸಹೋದರ ಹಾಗೂ 9 ವರ್ಷದ ಮುಗ್ದ ಬಾಲಕಿಯನ್ನು ಅಮಾನುಷವಾಗಿ ಕೊಲೆಗೈದ ಆತ ಜೈಲಿನಿಂದ ಹೊರಗೆ ಬಂದರೆ ಸಮಾಜಕ್ಕೆ ಅಪಾಯವಿದೆ ಎಂಬ ಭೀತಿ ನಮಗಿದೆ. ಸ್ವತಃ ಪ್ರವೀಣನ ಕುಟುಂಬದವರಿಗೂ ಆತ ಜೈಲಿನಿಂದ ಹೊರಗೆ ಬರುವುದರ ಬಗ್ಗೆ ಆತಂಕವಿದೆ ಎಂದಿದ್ದಾರೆ.

ಇದನ್ನೂ ಓದಿ | Love story | ಆಂಟಿ ಮೇಲೆ ಪ್ರೀತಿ ಹೆಚ್ಚಾಗಿ ಅಂಕಲ್‌ ಕೊಲೆಗೆ ಸುಪಾರಿ ಕೊಟ್ಟ; ಕೊನೆಗೆ ಅವನೇ ಜೀವ ಬಿಟ್ಟ!

‘ಪ್ರವೀಣ್ ಬಿಡುಗಡೆ 75 ನೇ ಸ್ವಾತಂತ್ರ್ಯ ದಿನಾಚರಣೆಗೆ ನಾಚಿಕೆಗೇಡಿನ ಸಂಗತಿ’

ಈ ಕೊಲೆಗಾರನನ್ನು ಬಿಡುಗಡೆ ಮಾಡಿದರೆ ನನ್ನ ಮತ್ತು ನನ್ನ ಕುಟುಂಬ ಸದಸ್ಯರು, ಸಾಕ್ಷಿಗಳ ಸುರಕ್ಷತೆಯ ಬಗ್ಗೆಯೂ ನಾನು ಚಿಂತಿಸುತ್ತಿದ್ದೇನೆ. ಪಶ್ಚಾತ್ತಾಪವೇ ಇಲ್ಲದ ಈತ ಮುಂದೆ ಸಾರ್ವಜನಿಕರಿಗೆ ಇನ್ನೂ ಅಪಾಯಕಾರಿಯಾಗಬಹುದು. ಅವನ ಬಿಡುಗಡೆಯ ಸಂದರ್ಭದಲ್ಲಿ ಅವನು ನನಗೆ ಅಥವಾ ನನ್ನ ಕುಟುಂಬದ ಯಾರಿಗಾದರೂ ಹಾನಿಯನ್ನುಂಟು ಮಾಡುವ ಆತಂಕವಾಗಿದೆ. ದಯವಿಟ್ಟು ನಮಗೆ ನ್ಯಾಯ ಕೊಡಿ ಮತ್ತು ನನ್ನ ಮತ್ತು ಸಮಾಜದ ಹಿತಕ್ಕಾಗಿ ಇಂತಹ ಅಪಾಯಕಾರಿ ಕೊಲೆಗಾರನನ್ನು ಬಿಡುಗಡೆ ಮಾಡಬೇಡಿ. ನೀವು ಅವರನ್ನು ಬಿಡುಗಡೆ ಮಾಡುತ್ತಿರುವುದು ನಮ್ಮ 75ನೇ ಸ್ವಾತಂತ್ರ್ಯ ದಿನಾಚರಣೆಗೆ ನಾಚಿಕೆಗೇಡಿನ ಸಂಗತಿ. ಇಂದಿಗೂ ಸರಿಯಾದ ಕಾನೂನು ಸುವ್ಯವಸ್ಥೆ ಇಲ್ಲ ಎಂದು ಗುರುಪುರದ ಸೀತಾರಾಮ ಹೇಳಿದ್ದಾರೆ.

ಇದನ್ನೂ ಓದಿ | ತ್ರಿವಳಿ ಕೊಲೆ ಹಂತಕರ ಬಂಧನಕ್ಕೆ ಆಗಸ್ಟ್‌ 5ರ ಗಡುವು ನೀಡಿದ ಎಚ್‌ಡಿಕೆ, ಇಲ್ಲದಿದ್ದರೆ ಸತ್ಯಾಗ್ರಹ ಬೆದರಿಕೆ

Exit mobile version