ಬೆಂಗಳೂರು: ಬಹಳಷ್ಟು ಜನರಿಗೆ ನಾಲ್ಕು ಚಕ್ರದ ವಾಹನಗಳ ಚಾಲನೆಯನ್ನು ಕಲಿಯಬೇಕು ಎಂಬ ಹಂಬಲ ಇರುತ್ತದೆ. ಆದರೆ, ಈಗ ಬೇಡ, ಇನ್ನೊಮ್ಮೆ ಡ್ರೈವಿಂಗ್ ಸ್ಕೂಲ್‌ಗೆ (Driving school) ಹೋದರಾಯಿತು ಎಂಬ ಉದಾಸೀನವೂ ಇರುತ್ತದೆ. ಕೆಲವೊಮ್ಮೆ ಅದಕ್ಕೆ ದುಡ್ಡನ್ನು ಹೊಂದಿಸಿ ಕಲಿಕೆ ಮಾಡಬೇಕು ಅಂದುಕೊಂಡವರೂ ಇದ್ದಾರೆ. ಆದರೆ, ಈಗ ವಾಹನ ಚಾಲನಾ ತರಬೇತಿಯನ್ನು (Driving Training) ಪಡೆಯುವ ಉಮೇದಿನಲ್ಲಿರುವವರಿಗೆ ಕಹಿಯಾಗುವ ಹಾಗೂ ಜೇಬಿಗೆ ಕತ್ತರಿ ಬೀಳುವ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯದಲ್ಲಿರುವ ಡ್ರೖೆವಿಂಗ್ ಸ್ಕೂಲ್ಗಳಲ್ಲಿ ತರಬೇತಿ ಶುಲ್ಕವನ್ನು ಹೆಚ್ಚಳ ಮಾಡಿ ಸಾರಿಗೆ ಇಲಾಖೆ (Transport Department) ಆದೇಶ ಹೊರಡಿಸಿದೆ.
ಹೀಗಾಗಿ ಲಘು ಮೋಟಾರು ವಾಹನ, ಮೋಟಾರು ಸೈಕಲ್, ಆಟೋ ರಿಕ್ಷಾ ಹಾಗೂ ಸಾರಿಗೆ ವಾಹನಗಳೆಂದು 4 ವರ್ಗವಾಗಿ ವಿಂಗಡನೆ ಮಾಡಲಾಗಿದ್ದು, ಅವುಗಳಿಗೆ ಪ್ರತ್ಯೇಕ ದರವನ್ನು ನಿಗದಿಪಡಿಸಲಾಗಿದೆ. ಅಂದಹಾಗೆ, ವಾಹನ ಚಾಲನಾ ತರಬೇತಿಯು ಇದೇ 2024ರ ಜನವರಿ 1ರಿಂದ ದುಬಾರಿಯಾಗಲಿದೆ.
4 ಸಾವಿರ ಇದ್ದ ದರ ಈಗ 8 ಸಾವಿರ ಆಗಿದೆ!
ಇಲ್ಲಿಯವರೆಗೆ ಕಾರು ಚಾಲನಾ ತರಬೇತಿಗೆ 4 ಸಾವಿರ ರೂಪಾಯಿ ಶುಲ್ಕವನ್ನು ನಿಗದಿ ಮಾಡಲಾಗಿತ್ತು. ಆದರೆ, ಇಷ್ಟಕ್ಕೇ ಇದು ನಿಲ್ಲುತ್ತಿರಲಿಲ್ಲ. ಎಲ್ಎಲ್ಆರ್, ಡಿಎಲ್ ಎಲ್ಲವನ್ನೂ ತಾವೇ ಮಾಡಿಸಿಕೊಡುವುದಾಗಿ ಡ್ರೖೆವಿಂಗ್ ಸ್ಕೂಲ್‌ನವರು ಒಟ್ಟು 8 ಸಾವಿರ ರೂಪಾಯಿವರೆಗೆ ಅಭ್ಯರ್ಥಿಯಿಂದ ವಸೂಲಿ ಮಾಡುತ್ತಿದ್ದರು ಎಂಬ ದೂರುಗಳು ಇತ್ತು. ಈಗ ಜನರಿಗೆ ಭಯ ಕಾಡುತ್ತಿರುವುದೂ ಸಹ ಇದೇ ಆಗಿದೆ. ಇಷ್ಟರೊಳಗೇ ಹೆಚ್ಚುವರಿಯಾಗಿ 4 ಸಾವಿರ ರೂಪಾಯಿಯನ್ನು ಸ್ವೀಕಾರ ಮಾಡಲಾಗುತ್ತಿತ್ತು. ಇನ್ನು ಮುಂದೆಯೂ ಇದೇ ಮಾದರಿಯನ್ನು ಅನುಸರಿಸಿದರೆ ಕಷ್ಟವಾಗುತ್ತದೆ ಎಂಬ ಆತಂಕವನ್ನು ಹೊರಹಾಕಲಾಗುತ್ತಿದೆ. ಆದರೆ, ಸಾರಿಗೆ ಇಲಾಖೆ ಅಧಿಕಾರಿಗಳು ಈಗಾಗಲೇ ಎಚ್ಚರಿಕೆಯನ್ನು ನೀಡಿದ್ದು, ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ವಸೂಲಿ ಮಾಡುವಂತಿಲ್ಲ ಎಂದು ಸೂಚನೆಗಳನ್ನು ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಪಾಲನೆ ಆಗಲಿದೆ ಎಂಬುದೇ ಸದ್ಯದ ಕುತೂಹಲವಾಗಿದೆ.
ಚಾಲನೆ-ಎಲ್‌ಎಲ್-ಡಿಎಲ್‌ಗೆ 8350 ರೂ. ಖರ್ಚು!
ಜನವರಿಯಿಂದ ಕಾರು ಚಾಲನೆ ಕಲಿಯುವವರಿಗೆ 7 ಸಾವಿರ ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತಿದೆ. ಇದಲ್ಲದೆ ಎಲ್ಎಲ್ಗೆ 350 ರೂ. ಹಾಗೂ ಡಿಎಲ್‌ಗೆ 1,000 ರೂ. ಪ್ರತ್ಯೇಕವಾಗಿ ಆರ್ಟಿಒ ಕಚೇರಿಗೆ ಪಾವತಿಸಬೇಕು. ಅಂದರೆ ಒಬ್ಬ ಅಭ್ಯರ್ಥಿ ಡ್ರೖೆವಿಂಗ್ ಕಲಿತು ಲೈಸೆನ್ಸ್ ಪಡೆಯಲು ಒಟ್ಟು 8350 ರೂ. ಖರ್ಚು ಮಾಡಬೇಕು.
10 ವರ್ಷಗಳ ನಂತರ ಹೆಚ್ಚಳ
ಚಾಲನಾ ತರಬೇತಿ ಶಾಲೆಗಳ ನಿರಂತರ ಹೋರಾಟದಿಂದ ಈ ಬದಲಾವಣೆಗಳು ಆಗಿವೆ. 10 ವರ್ಷಗಳ ನಂತರ ದರ ಹೆಚ್ಚಿಸಲು ಸಾರಿಗೆ ಇಲಾಖೆ ಅನುಮತಿಯನ್ನು ನೀಡಿದೆ. ಲಘು ಮೋಟಾರು ವಾಹನ, ಮೋಟಾರು ಸೈಕಲ್, ಆಟೋ ರಿಕ್ಷಾ ಹಾಗೂ ಸಾರಿಗೆ ವಾಹನಗಳೆಂದು 4 ವರ್ಗದಲ್ಲಿ ಶುಲ್ಕವನ್ನು ನಿಗದಿ ಮಾಡಲಾಗಿದೆ. ಲಘು ಮೋಟಾರು ವಾಹನ (ಕಾರು) ಚಾಲನಾ ತರಬೇತಿಗೆ ಹೊಸ ದರ 7 ಸಾವಿರ ರೂ. ನಿಗದಿ ಪಡಿಸಲಾಗಿದೆ.
ಶುಲ್ಕ ಏರಿಕೆ ಯಾಕೆ?
ಎಲ್ಲ ಬೆಲೆಗಳಲ್ಲೂ ಏರಿಕೆಯಾಗುತ್ತಿದೆ. ಕಳೆದ 10 ವರ್ಷಗಳಿಂದ ಒಂದೇ ಮಾದರಿಯ ದರವನ್ನು ನಿಗದಿ ಮಾಡಲಾಗಿದೆ. ಆದರೆ, ಡ್ರೖೆವಿಂಗ್ ಸ್ಕೂಲ್‌ಗಳ ನಿರ್ವಹಣೆ, ಇಂಧನ ಬಳಕೆ, ಕಲಿಕೆ ವೇಳೆ ವಾಹನಗಳ ಡ್ಯಾಮೇಜ್, ಇನ್ಶುರೆನ್ಸ್, ಚಾಲಕರ ಸಂಬಳ ಇನ್ನಿತರ ಸಮಸ್ಯೆಗಳು ಇರುತ್ತವೆ. ಹೀಗಾಗಿ ಹೆಚ್ಚಿನ ಶುಲ್ಕ ಪಡೆಯುವುದು ಅನಿವಾರ್ಯ ಎಂದು ಡ್ರೈವಿಂಗ್ ಸ್ಕೂಲ್‌ಗಳ ಮಾಲೀಕರು ಸಾರಿಗೆ ಇಲಾಖೆಗೆ ಮನವಿ ಸಲ್ಲಿಸುತ್ತಲೇ ಬರುತ್ತಿದ್ದರು. ಇದರಿಂದ ಸಾರಿಗೆ ಇಲಾಖೆಯು ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಆರ್ಟಿಒಗಳ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಿತ್ತು. ಈ ಸಮಿತಿಯು ಅಧ್ಯಯನ ಮಾಡಿ ವರದಿಯನ್ನು ಸಿದ್ಧಪಡಿಸಿ ಸಾರಿಗೆ ಇಲಾಖೆಗೆ 2 ವರ್ಷಗಳ ಹಿಂದೆಯೇ ಸಲ್ಲಿಸಿತ್ತು. ಈಗ ಈ ವರದಿಯನ್ನು ಅಂಗೀಕಾರ ಮಾಡಲಾಗಿದೆ.
ಶುಲ್ಕ ಪರಿಷ್ಕರಣೆ, ವಾಹನ ಮೊದಲು ಈಗ (ರೂ.ಗಳಲ್ಲಿ)
- ಮೋಟಾರು ಸೈಕಲ್: 2,200-3000
- ಆಟೋ ರಿಕ್ಷಾ: 3,000-4000
- ಕಾರುಗಳು: 4,000-7000
- ಸಾರಿಗೆ ವಾಹನ: 6,000-9000
ಇದನ್ನೂ ಓದಿ: Aadhaar Card: ಆಧಾರ್ ಕಾರ್ಡ್ ಉಚಿತ ತಿದ್ದುಪಡಿ ಅವಧಿ ವಿಸ್ತರಣೆ! ಮತ್ತೊಂದು ಅವಕಾಶ
ಡ್ರೈವಿಂಗ್ ಸ್ಕೂಲ್ಗಳಿಗೆ ಏನು ನಿಬಂಧನೆ?
- ಪಠ್ಯಸೂಚಿಯಂತೆ ಅಭ್ಯರ್ಥಿ ಪೂರ್ಣ ತರಬೇತಿ ಪಡೆದಾಗಲೇ ನಮೂನೆ 5ರಲ್ಲಿ ಪತ್ರ ನೀಡಬೇಕು
- ಅಭ್ಯರ್ಥಿ ವಾಹನ ಚಾಲನೆ ಮಾಡಿದ ಸಮಯವನ್ನು ನಮೂನೆ-15ರಲ್ಲಿ ನಮೂದಿಸಬೇಕು
- ಅಧಿಕಾರಿಗಳು ಶಾಲೆಗೆ ತಪಾಸಣೆಗೆ ಬಂದಾಗ ಎಲ್ಲ ದಾಖಲೆಗಳನ್ನು ತಪ್ಪದೇ ಒದಗಿಸಬೇಕು
- ಶಾಲೆಯ ಪ್ರತಿನಿಧಿ ಆರ್ಟಿಒಗೆ ಬಂದಾಗ ಸಮವಸ್ತ್ರದಲ್ಲಿರಬೇಕು. ನಾಮಫಲಕ ಧರಿಸಿರಬೇಕು
- ಶಾಲೆಯ ಪ್ರತಿನಿಧಿ ಅಭ್ಯರ್ಥಿಯ/ಇನ್ನಿತರರ ಪರವಾಗಿ ಮಧ್ಯವರ್ತಿಯಾಗಿ ವರ್ತಿಸುವಂತಿಲ್ಲ
- ನಿಬಂಧನೆ ಉಲ್ಲಂಘಿಸಿದಲ್ಲಿ ಶಾಲೆಯ ಅನುಜ್ಞಾ ಪತ್ರ ಅಮಾನತು ಅಥವಾ ರದ್ದುಗೊಳ್ಳುತ್ತದೆ