ಬೆಂಗಳೂರು: ಬಹುಶಃ ಮೆಟ್ರೋ ಸ್ಟೇಷನ್‌ನಲ್ಲಿ ಅವಸರದಲ್ಲಿ ಓಡಾಡುವಷ್ಟು ಬೇರೆಲ್ಲೂ ಓಡಾಡುವುದಿಲ್ಲ ಅನಿಸುತ್ತದೆ. ಕೆಲಸಕ್ಕೆ ಹೋಗುವಾಗ ಬೇಗ ಬೇಗನೆ ತಲುಪುವ ಧಾವಂತ, ಒಂದು ರೈಲು ತಪ್ಪಿದರೆ ೫-೧೦ ನಿಮಿಷ ಕಾಯಬೇಕು ಎನ್ನುವ ಉದ್ವೇಗ, ಸಂಜೆಯಾದರೆ ಬೇಗನೆ ಮನೆ ಮುಟ್ಟುವ ಅವಸರ… ಹೀಗಾಗಿ ಎಸ್ಕರೇಟರ್ ಮೆಟ್ಟಿಲು ಅದಾಗಿ ಚಲಿಸುತ್ತಿದ್ದರೂ ಅದರಲ್ಲೂ ಹೆಜ್ಜೆ ಇಟ್ಟು ಮುಂದೆ ಹೋಗುವಷ್ಟು ತುರ್ತು ಜನರಿಗೆ ಇರುತ್ತದೆ.
ಇಂಥ ಹೊತ್ತಲ್ಲಿ ಟೋಕನ್ ಮಾಡಿಸುವುದು, ಸ್ಮಾರ್ಟ್ ಕಾರ್ಡ್‌ಗೆ ದುಡ್ಡು ತುಂಬುವುದು ಕೂಡಾ ಸ್ವಲ್ಪ ಭಾರವಾದ ಕೆಲಸ ಅನಿಸುತ್ತದೆ. ಛೆ.. ಯಾವುದೋ ಶೋರೂಮಲ್ಲಿ, ಅಂಗಡಿಯಲ್ಲಿ ಯುಪಿಐ ಸ್ಕ್ಯಾನ್ ಮಾಡಿ ಒಳಗೆ ಹೋಗುವಂತಿದ್ದರೆ ಸಾಕಿತ್ತಲ್ವಾ ಅಂತ ಹಲವು ಬಾರಿ ಅನಿಸುತ್ತಿರುತ್ತದೆ. ಈ ಮನಸಿನೊಳಗಿನ ಕಲ್ಪನೆ ಈಗ ನಿಜವಾಗಿದೆ. ದಿಲ್ಲಿಯಲ್ಲಿ ಈಗಾಗಲೇ ಇದು ಜಾರಿಗೆ ಬಂದಿತ್ತು. ಬೆಂಗಳೂರಲ್ಲಿ ಇನ್ನೇನು ಸ್ವಲ್ಪ ಸಮಯದಲ್ಲೇ ಬರಲಿದೆ.
ಹೌದು, ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಒಂದು ಗುಡ್ ನ್ಯೂಸ್ ಕೊಟ್ಟಿದೆ. ಇದರ ಪ್ರಕಾರ, ನಮ್ಮ ಮೆಟ್ರೋ ಇನ್ನಷ್ಟು ಸ್ಮಾರ್ಟ್ ಹಾಗೂ ಯೂಸರ್ ಫ್ರೆಂಡ್ಲಿ ಆಗ್ತಿದೆ. ಇನ್ಮುಂದೆ ಸ್ಮಾರ್ಟ್ ಕಾರ್ಡ್ ಹಾಗೂ ಟೋಕನ್ ಗಾಗಿ ಕ್ಯೂ ನಿಲ್ಲಬೇಕಿಲ್ಲ. ನಮ್ಮ ನಮ್ಮ ಮೊಬೈಲ್‌ನಲ್ಲೇ ಸಿಗುತ್ತೆ ಮೆಟ್ರೋ ಟಿಕೆಟ್! ಅಂದರೆ, ಟೋಕನ್, ಸ್ಮಾರ್ಟ್ ಕಾರ್ಡ್ ಬದಲಾಗಿ ಅಂಗೈನಲ್ಲೇ ಟಿಕೆಟ್!
ಏನು ಮಾಡಬೇಕು?
ಈ ವ್ಯವಸ್ಥೆ ಜಾರಿಗೆ ಬರುವುದು ಮುಂದಿನ ತಿಂಗಳಿನಿಂದ. ಇದಕ್ಕೆ ಪ್ರಯಾಣಿಕರು ಮಾಡಬೇಕಾದ್ದು ಏನೆಂದರೆ, ಮೊದಲು ತಮ್ಮ ಸ್ಮಾರ್ಟ್ ಪೋನ್ ನಲ್ಲಿ ಬಿಎಂಆರ್‌ಸಿಎಲ್ ಆ್ಯಪ್ ಡೌನ್‌ಲೋಡ್ ಮಾಡಬೇಕು. ನಂತರ ಅದರಲ್ಲಿ ಎಲ್ಲಿಂದ ಎಲ್ಲಿವರೆಗೆ ಹೋಗಬೇಕು ಎಂದು ನಮೂದಿಸಿ ಟಿಕೆಟ್ ಪಡೆಯಬಹುದು.
ಮೆಟ್ರೋ ದ್ವಾರಗಳಲ್ಲಿ ಕ್ಯೂ ಆರ್ ಕೋಡ್ ವ್ಯವಸ್ಥೆಗೆ ಸ್ಪಂದಿಸುವ ಸಾಫ್ಟ್‌ವೇರ್ ವ್ಯವಸ್ಥೆ ಅಳವಡಿಕೆ ಮಾಡಲಾಗಿರುತ್ತದೆ. ಮೊಬೈಲ್‌ಗೆ ಬಂದಿರುವ ಟಿಕೆಟ್‌ನ ಕ್ಯೂಆರ್ ಕೋಡನ್ನು ಎಂಟ್ರಿಗೇಟ್ ನಲ್ಲಿ ಸ್ಕ್ಯಾನ್ ಮಾಡಿದರೆ ಗೇಟ್ ತೆರೆದುಕೊಳ್ಳುತ್ತದೆ.
ಟೋಕನ್ ಹಾಗೂ ಕಾರ್ಡ್ ರೀಚಾರ್ಜ್ ಸಮಯ ಉಳಿತಾಯಕ್ಕೆ ಮೆಟ್ರೋ ಮಾಡಿರುವ ಈ ಪ್ಲ್ಯಾನ್ ಹಲವರಿಗೆ ಉಪಯೋಗ ಆಗಲಿದೆ.
ಇದನ್ನೂ ಓದಿ | Namma Metro | ಮೊದಲ ಬಾರಿ 5G ನೆಟ್ವರ್ಕ್ ಪರೀಕ್ಷಿಸಿ ಖ್ಯಾತಿ ಪಡೆದ BMRCL