Site icon Vistara News

NPS News | ಒಪಿಎಸ್‌ ಜಾರಿ ಕುರಿತು ಸದನದಲ್ಲಿ ಚರ್ಚೆ; ಹೋರಾಟ ನಿಲ್ಲದು ಎಂದ ಎನ್‌ಪಿಎಸ್‌ ನೌಕರರ ಸಂಘ

NPS News

ಬೆಳಗಾವಿ: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್‌) ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಒತ್ತಾಯಿಸುತ್ತಿರುವ ಕುರಿತು ಸದನದಲ್ಲಿ ಪ್ರತ್ಯೇಕವಾಗಿ ಚರ್ಚೆ ನಡೆಯಬೇಕಾಗಿದೆ. ಆ ನಂತರ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ (NPS News) ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

ಶೂನ್ಯ ವೇಳೆಯಲ್ಲಿ ಬೇಲೂರು ಶಾಸಕ ಕೆ.ಎಸ್‌. ಲಿಂಗೇಶ್‌ ಮತ್ತು ಅನೇಕ ಶಾಸಕರು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಬೃಹತ್‌ ಪ್ರತಿಭಟನೆಯ ಕುರಿತು ಪ್ರಸ್ತಾಪಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಪಕ್ಷಾತೀತರವಾಗಿ ಶಾಸಕರು ತಮಗೆ ಈ ವಿಷಯದ ಕುರಿತು ಮಾತನಾಡಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಈಗಾಗಲೇ ದೇಶದ ನಾಲ್ಕು ರಾಜ್ಯಗಳಲ್ಲಿ ಎನ್‌ಪಿಎಸ್‌ ರದ್ದಾಗಿದೆ. ನಮ್ಮ ರಾಜ್ಯದಲ್ಲಿಯೂ ಇದು ರದ್ದಾಗಬೇಕು ಎಂದು ಕೂಗಿದರು.

ಹೋರಾಟ ನಿಲ್ಲದು ಎಂದ ನೌಕರರು
ವಿಧಾನಸೌಧದಲ್ಲಿ ಎನ್‌ಪಿಎಸ್‌ ಕುರಿತು ಚರ್ಚೆ ನಡೆಸುವುದಾಗಿ ಪ್ರಕಟಿಸಲಾಗಿದೆ. ಈ ಚರ್ಚೆ ನಡೆಸುವ ತೀರ್ಮಾನ ಪ್ರಕಟವಾಗಲು ಕಾರಣರಾದ ಎಲ್ಲ ಪಕ್ಷದ ಶಾಸಕರಿಗೆ, ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿರುವ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರ ಸಂಘದ ಅಧ್ಯಕ್ಷ ಶಾಂತರಾಮ, “ಚರ್ಚೆನಡೆಸುತ್ತೇವೆ ಎಂದು ನಮ್ಮ ದಾರಿ ತಪ್ಪಿಸಬೇಡಿ, ಚರ್ಚೆಯಾಗಿ ಸ್ಪಷ್ಟ ಫಲಿತಾಂಶ ಪ್ರಕಟವಾಗುತ್ತದೆ ಎಂಬ ಗಟ್ಟಿ ಭರವಸೆ ದೊರೆಯುವವರೆಗೂ ನಮ್ಮ ಈ ಅನಿರ್ಧಿಷ್ಟ, “ಮಾಡು ಇಲ್ಲವೇ ಮಡಿ” ಹೋರಾಟ, ಅಹೋರಾತ್ರಿ ಧರಣಿ ಮುಂದುವರಿಯಲಿದೆʼʼ ಎಂದು ಪ್ರಕಟಿಸಿದ್ದಾರೆ.

ಹೋರಾಟ ಮುಂದುವರಿಸುವುದಾಗಿ ಪ್ರಕಟಿಸಿದ ಎನ್‌ಪಿಎಸ್‌ ನೌಕರರ ಸಂಘದ ಮುಖಂಡರು.

ಈ ವಿಷಯ ಪ್ರಸ್ತಾಪವಾಗುತ್ತಿದ್ದಂತೆಯೇ ಹೆಚ್ಚು ಚರ್ಚೆಗೆ ಅವಕಾಶ ನೀಡದೇ ಉತ್ತರ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದ್ದು ನಿಂತರಾದರೂ ಶಾಸಕರು ಅವರಿಗೆ ಮಾತನಾಡಲು ಅವಕಾಶ ನೀಡದೆ, ಈ ವಿಷಯದ ಕುರಿತು ತಾವು ಮಾತನಾಡಬೇಕು ಎದ್ದು ಗದ್ದಲವೆಬ್ಬಿಸಿದರು. ಆಗ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಸದನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು.

ಇದು ಅತ್ಯಂತ ಗಂಭೀರವಾದ ವಿಷಯ ಎಂದೇ ಮಾತು ಆರಂಭಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಡೀ ರಾಜ್ಯದ ಜನರ ಶ್ರಮದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಹಣ ಬರುತ್ತಿದೆ. ಈಗಾಗಲೇ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಟಿಎ, ಡಿಎ, ಇನ್‌ಕ್ರಿಮೆಂಟ್‌ ಹೀಗೆ ಹತ್ತು ಹಲವು ಸೌಕರ್ಯಗಳನ್ನು ಒದಗಿಸಿದೆ. ಕಾಲ ಕಾಲಕ್ಕೆ ಡಿಎ ನೀಡಲಾಗುತ್ತಿದೆ. ಈಗಂತೂ ಆಟೋಮ್ಯಾಟಿಕ್‌ ಆಗಿ ಕೇಂದ್ರ ಸರ್ಕಾರ ಡಿಎ ಪ್ರಕಟಿಸುತ್ತಿದ್ದಂತೆಯೇ ರಾಜ್ಯದಲ್ಲಿಯೂ 24 ಗಂಟೆಗಳ ಒಳಗೆ ಡಿಎ ಹೆಚ್ಚಳ ಮಾಡಲಾಗುತ್ತಿದೆ. ಅಲ್ಲದೆ, ನೌಕರರ ಬೇಡಿಕೆಯಂತೆ ಸರ್ಕಾರ ಇತ್ತೀಚೆಗೆ ವೇತನ ಮತ್ತು ಭತ್ಯೆಯ ಪರಿಷ್ಕರಣೆಗಾಗಿ ಏಳನೇ ವೇತನ ಆಯೋಗ ರಚನೆ ಮಾಡಿದೆ.

2006ರಿಂದ ರಾಜ್ಯದಲ್ಲಿ ಎನ್‌ಪಿಎಸ್‌ ಜಾರಿಗೆ ಬಂದಿದೆ. ಇದನ್ನು ರದ್ದು ಪಡಿಸುವುದರ ಸಾಧಕ-ಬಾಧಕಗಳ ಕುರಿತು ಇಲ್ಲಿ ಚರ್ಚೆ ಮಾಡಬೇಕಿದೆ. ಸರ್ಕಾರಕ್ಕೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದೆಯಾದರೂ ಸಾರ್ವಜನಿಕ ವಲಯದಲ್ಲಿ ಇದರ ಪರಿಣಾಮ ಏನಾಗುತ್ತದೆ ಎಂಬುದರ ಕುರಿತು ಚರ್ಚೆಯಾಗಬೇಕು. ಈ ನಿರ್ಧಾರದ ಪರಿಣಾಮಕ್ಕೆ ಎಲ್ಲರೂ ಜವಾಬ್ದಾರಿ ಯಾಗಬೇಕಾಗುತ್ತದೆ. ಮುಂದೆ ಸರ್ಕಾರದ ಬೊಕ್ಕಸವನ್ನು ಹೇಗೆ ನಿಭಾಯಿಸಬೇಕು, ಜನಹಿತ, ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಮಾಡಬೇಕು, ಸರ್ಕಾರಿ ನೌಕರರ ಹಿತ ಹೇಗೆ ಕಾಪಾಡಬೇಕು ಎಂಬುದರ ಕುರಿತು ಸುದೀರ್ಘ ಚರ್ಚೆ ನಡೆಯಬೇಕು. ಆಗ ಎಲ್ಲರೂ ತಮ್ಮ ಅಭಿಪ್ರಾಯವನ್ನು ತಿಳಿಸಬೇಕು. ಸರ್ಕಾರ ಈ ಸಂದರ್ಭದಲ್ಲಿ ಸುದೀರ್ಘ ಉತ್ತರ ನೀಡುತ್ತದೆ ಎಂದರು.

ಆಗ ಈ ವಿಚಾರದ ಕುರಿತು ಮುಕ್ತ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್‌ ಪ್ರಕಟಿಸಿದ್ದಾರೆ.

ಇದನ್ನೂ ಓದಿ | NPS News | ಎರಡನೇ ದಿನಕ್ಕೆ ಕಾಲಿಟ್ಟ ಎನ್‌ಪಿಎಸ್‌ ನೌಕರರ ಪ್ರತಿಭಟನೆ

Exit mobile version