ಬೆಂಗಳೂರು/ ಶಿವಮೊಗ್ಗ: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರ ಸಂಘ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಶನಿವಾರ (NPS News) ಆರನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಈ ಪ್ರತಿಭಟನೆಗೆ ತಮ್ಮ ವಿರೋಧವಿಲ್ಲ. ಆದರೆ ಹೋರಾಟಕ್ಕೆ ಇದು ಸೂಕ್ತ ಸಮಯವಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಹೇಳಿದೆ.
ಈ ಪ್ರತಿಭಟನೆಯಿಂದ ಯಾವುದೇ ಪ್ರಯೋಜನವಿಲ್ಲ. ಇದು ಸೋಕಾಲ್ಡ್ ಲೀಡರ್ಸ್ ತೆಗೆದುಕೊಂಡ ನಿರ್ಧಾರ. ಇದಕ್ಕೆ ಬಹುತೇಕ ಎನ್‌ಪಿಎಸ್ ನೌಕರರ ಬೆಂಬಲವೂ ಇಲ್ಲ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.
ಇದರಿಂದಾಗಿ ಎನ್‌ಪಿಎಸ್ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಸರ್ಕಾರಿ ನೌಕರರಲ್ಲಿ ಒಮ್ಮತವಿಲ್ಲ ಎಂಬುದು ಸಾಬೀತಾದಂತಾಗಿದೆ. ಈ ಹೋರಾಟದಲ್ಲಿ ಭಾಗವಹಿಸುವಂತೆ ಸೌಜನ್ಯಕ್ಕೂ ತಮ್ಮನ್ನು ಕರೆದಿಲ್ಲ. ಹೀಗಾಗಿ ಈ ಹೋರಾಟದಲ್ಲಿ ತಾವು ಭಾಗವಹಿಸುತ್ತಿಲ್ಲ ಎಂದಿರುವ ಸಿ.ಎಸ್. ಷಡಾಕ್ಷರಿ, ಒಪಿಎಸ್ ಜಾರಿಗಾಗಿ ಒತ್ತಾಯಿಸಿ ಹೋರಾಟ ನಡೆಸಲು ಇದು ಸೂಕ್ತ ಕಾಲವಲ್ಲ ಎಂದಿದ್ದಾರೆ.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಸರ್ಕಾರದ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಈಗ ಸರ್ಕಾರ ಏಳನೇ ವೇತನ ಆಯೋಗವನ್ನು ರಚಿಸಿದ್ದು, ಅದರ ಜಾರಿಗೆ ಬದ್ಧತೆ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ ಸರ್ಕಾರಕ್ಕೆ ಹೊರೆಯಾಗುವ ಒಪಿಎಸ್ ಜಾರಿಗೆ ಒತ್ತಾಯಿಸುವುದು ಬೇಡ ಎಂದು ಸಂಘದ ಎಲ್ಲ ಪದಾಧಿಕಾರಿಗಳು ಒಮ್ಮತದಿಂದ ತೀರ್ಮಾನಿಸಿದ್ದೇವೆ. ಇದು ನನ್ನೊಬ್ಬನ ತೀರ್ಮಾನವಲ್ಲ. ಏಳನೇ ವೇತನ ಆಯೋಗ ಜಾರಿಯಾಗುತ್ತಿದ್ದಂತೆಯೇ ಬರುವ ಏಪ್ರಿಲ್‌ನಿಂದ ಸಂಘ ಈ ಹೋರಾಟ ಕೈಗೆತ್ತಿಕೊಳ್ಳಲಿದೆ. ಸಂಘ ಹೋರಾಟಕ್ಕಿಳಿದರೆ ರಾಜ್ಯದ ಇಡೀ ಸರ್ಕಾರಿ ವ್ಯವಸ್ಥೆ ಸ್ತಬ್ಧವಾಗುತ್ತದೆ. ಈ ರೀತಿಯ ಹೋರಾಟವನ್ನು ಮುಂದಿನ ದಿನಗಳಲ್ಲಿ ಮಾಡುತ್ತೇವೆ ಎಂದಿದ್ದಾರೆ.
ಸಂಘದಲ್ಲಿ ಎನ್‌ಪಿಎಸ್, ಒಪಿಎಸ್ ಎಂಬ ಬೇಧವಿಲ್ಲ. ಒಪಿಎಸ್ ಜಾರಿಯ ವಿಷಯವನ್ನು ಸರ್ಕಾರಿ ನೌಕರರ ವಿಷಯ ಎಂದೇ ನಾವು ಪರಿಗಣಿಸಿದ್ದೇವೆ. ಈ ಹಿಂದೆ ನಡೆದ ಸಂಘದ ಚುನಾವಣೆಯಲ್ಲಿ ಸೋತವರು ಈಗ ಈ ರೀತಿ ಬಣ ಕಟ್ಟಿಕೊಂಡು ಹೋರಾಟ ನಡೆಸುತ್ತಿದ್ದಾರೆ. ಸಂಘದ ಪದಾಧಿಕಾರಿಗಳಾಗಿ ಎನ್‌ಪಿಎಸ್ ನೌಕರರೂ ಇದ್ದು, ಎಲ್ಲರೂ ಸೇರಿ ಹೋರಾಟ ಮಾಡುತ್ತೇವೆ. ಈಗಾಗಲೇ ಮೂರು ರಾಜ್ಯದಲ್ಲಿ ಒಪಿಎಸ್ ಜಾರಿಯಾಗಿದೆ ಎಂಬುದು ಸರಿಯಲ್ಲ. ಅಲ್ಲಿ ಆದೇಶವಾಗಿದೆ. ಆದರೆ ಜಾರಿಗೆ ಕೇಂದ್ರ ಸರ್ಕಾರ ತಡೆ ನೀಡಿದೆ. ಇದನ್ನೆಲ್ಲಾ ನಾವು ಗಮನಿಸುತ್ತಿದ್ದೇವೆ ಎಂದು ಷಡಾಕ್ಷರಿ ವಿವರಿಸಿದ್ದಾರೆ.
ಮುಂದುವರರಿದ ಹೋರಾಟ
ನೌಕರರಿಗೆ ಸಂಧ್ಯಾಕಾಲದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸಲು ಎನ್‌ಪಿಎಸ್ ರದ್ದು ಪಡಿಸಿ, ಒಪಿಎಸ್ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರ ಸಂಘ ನಡೆಸುತ್ತಿರುವ ಹೋರಾಟ ಶನಿವಾರ ಆರನೇ ದಿನಕ್ಕೆ ಕಾಲಿಟ್ಟಿದ್ದು, ವಿವಿಧ ಪಕ್ಷಗಳ ನಾಯಕರು, ಹೋರಾಟಗಾರರು ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಶನಿವಾರ ಬೆಳಗ್ಗೆ ಮಹಾತ್ಮ ಗಾಂಧೀಜಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪ ಅರ್ಪಿಸುವ ಮೂಲಕ ಪ್ರತಿಭಟನೆ ಆರಂಭಿಸಲಾಯಿತು. ಪ್ರತಿಭಟನಾಕಾರರನ್ನುದ್ದೇಶಿಸಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಾಜಿ ಅಧ್ಯಕ್ಷ ಬಸವರಾಜ ಗುರಿಕಾರ, ಮಾಜಿ ಸಭಾಪತಿ, ಹಾಲಿ ಶಾಸಕ ಡಿ.ಸಿ.ತಮ್ಮಣ್ಣ, ಶಿಕ್ಷಣ ತಜ್ಞ ನಿರಂಜನ ಆರಾಧ್ಯ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮಾಜಿ ಸಚಿವ ವಿನಯ ಕುಲಕರ್ಣಿ ಮತ್ತಿತರರು ಮಾತನಾಡಿದರು.
ಇದನ್ನೂ ಓದಿ | NPS News | ರಾಜ್ಯ ಸರ್ಕಾರಿ ನೌಕರರು ಎನ್‌ಪಿಎಸ್ ಬೇಡ, ಒಪಿಎಸ್ ಬೇಕು ಎನ್ನಲು ಕಾರಣವಾದರೂ ಏನು?