ಬೆಂಗಳೂರು: ರಾಜ್ಯ ಸರ್ಕಾರವು ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತಿರುವ ರಾಜ್ಯ ಸರ್ಕಾರಿ ನೌಕರರನ್ನು ಮಾತಿಗೆ ಕರೆಯದೇ ಕಡೆಗಣಿಸುತ್ತಿರುವುದು (NPS News) ಸರ್ಕಾರಿ ನೌಕರರನ್ನು ಕೆರಳಿಸಿದೆ.
ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿಗಾಗಿ ಕಳೆದ ತಿಂಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಎನ್‌ಪಿಎಸ್ ಸರ್ಕಾರಿ ನೌಕರರಿಗೆ ಈ ಸಂಬಂಧ ಚರ್ಚಿಸಲು ಸದ್ಯವೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು. ಆದರೆ ಪ್ರತಿಭಟನೆ ಸ್ಥಗಿತಗೊಂಡು ಒಂದು ತಿಂಗಳಾದರೂ ಸರ್ಕಾರ ಸಭೆ ನಡೆಸಿಲ್ಲ, ಅಲ್ಲದೆ ಒಪಿಎಸ್ ಜಾರಿಯ ಕುರಿತು ಸ್ಪಷ್ಟ ತೀರ್ಮಾನ ಪ್ರಕಟಿಸಿಲ್ಲ. ಇದು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.
ಏನಿದು ವಿಷಯ?
ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರ ಸಂಘದ ನೇತೃತ್ವದಲ್ಲಿ ಎನ್‌ಪಿಎಸ್ ಸರ್ಕಾರಿ ನೌಕರರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಡಿಸೆಂಬರ್ 19 ರಿಂದ ಅನಿರ್ದಿಷ್ಟಾವಧಿಯ ಬೃಹತ್ ಧರಣಿ ಸತ್ಯಾಗ್ರಹ ಆರಂಭಿಸಿದ್ದರು.
14 ದಿನ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆದ ನಂತರ ಅಂದರೆ ಜನವರಿ 2 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶನದಂತೆ ಧರಣಿ ಸತ್ಯಾಗ್ರಹ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ್ದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಎನ್‌ಪಿಎಸ್ ರದ್ದಿನ ಕುರಿತು ಮುಖ್ಯಮಂತ್ರಿಗಳೇ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ ಮತ್ತು ಈ ವಿಷಯವನ್ನು ಮುಂದಿನ ಬಜೆಟ್ ಅಧಿವೇಶನದಲ್ಲಿ ವಸ್ತೃತವಾಗಿ ಚರ್ಚಿಸುವ ಕುರಿತು ತೀರ್ಮಾನಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಈ ಧರಣಿಯನ್ನು ಸ್ಥಗಿತಗೊಳಿಸಿ ಎಂದು ಕೋರಿದ್ದರು. ಸಚಿವರ ಮಾತನ್ನು ನಂಬಿದ ಎನ್‌ಪಿಎಸ್ ನೌಕರರು ಧರಣಿಯನ್ನು ಸ್ಥಗಿತಗೊಳಿಸುವ ತೀರ್ಮಾನ ತೆಗೆದುಕೊಂಡಿದ್ದರು.
ಆದರೆ ಪ್ರತಿಭಟನೆ ಅಂತ್ಯಗೊಂಡು ಒಂದು ತಿಂಗಳಾಗುತ್ತಾ ಬಂದರೂ ಸರ್ಕಾರದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮಾತುಕತೆಗೆ ನೌಕರನ್ನು ಇನ್ನೂ ಆಹ್ವಾನಿಸಿಲ್ಲ. ಮುಂದಿನ ಅಧಿವೇಶನದ ದಿನಾಂಕ ಪ್ರಕಟವಾಗಿದ್ದರೂ ಈ ಕುರಿತು ಚರ್ಚೆ ನಡೆಸುತ್ತೇವೆ ಎಂದು ನೌಕರ ವರ್ಗಕ್ಕೆ ಮಾಹಿತಿ ನೀಡಿಲ್ಲ.
ಈ ಬಗ್ಗೆ ನಮಗೆ ಭರವಸೆ ನೀಡಿದ ಸಚಿವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಮುಖ್ಯಮಂತ್ರಿಗಳೊಂದಿಗೆ ಸಭೆಯನ್ನು ಏರ್ಪಡಿಸುವಂತೆ ಕೋರಿ ಪತ್ರ ಬರೆದಿದ್ದೇವೆ. ಅವರಿಂದಲೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮು “ವಿಸ್ತಾರ ನ್ಯೂಸ್ʼʼಗೆ ತಿಳಿಸಿದ್ದಾರೆ.
ಒಪಿಎಸ್ ಜಾರಿ; ದಿನ ದೂಡುವ ತಂತ್ರ?
ಕಳೆದ ವಿಧಾನಸಭಾ ಅಧಿವೇಶನದಲ್ಲಿ ಒಪಿಎಸ್ ಜಾರಿಗೆ ಸಂಬಂಧಿಸಿದಂತೆ ಸುಮಾರು 40ಕ್ಕೂ ಹೆಚ್ಚು ಶಾಸಕರು ಲಿಖಿತ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, “ಹಳೆಯ ಪಿಂಚಣಿ ಯೋಜನೆಯ ಆರ್ಥಿಕ ಹೊರೆಯನ್ನು ನಿಭಾಯಿಸಲು ಸಾಕಷ್ಟು ನಿಧಿಯ ಆಧಾರ ಇಲ್ಲದಿರುವುದರಿಂದ ಹಾಗೂ ರಿಸರ್ವ್ ಬ್ಯಾಂಕ್ ರಚಿಸಿದ ಸಮಿತಿಯ ವರದಿಯು ಶಿಫಾರಸಿನ ಆಧಾರದಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವುದರಿಂದ ರಾಜ್ಯ ಸರ್ಕಾರವೂ 2006ರಿಂದ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದೆ. ಹೀಗಾಗಿ ಹಳೆಯ ಪಿಂಚಣಿಯೋಜನೆಯನ್ನು ಮತ್ತೆ ಜಾರಿಗೆ ತರುವ ಪ್ರಸ್ತಾವನೆಯು ಸರ್ಕಾರದ ಮುಂದಿಲ್ಲʼʼ ಎಂದು ಉತ್ತರಿಸಿದ್ದರು.
ಅಲ್ಲದೆ, ವಿಧಾನಸಭೆಯಲ್ಲಿ ಕೆಲ ಶಾಸಕರು ಚರ್ಚೆಗೆ ಮುಂದಾದಾಗ, ಈ ಕುರಿತು ಸದನದಲ್ಲಿ ಪ್ರತ್ಯೇಕವಾಗಿ ಚರ್ಚೆ ನಡೆಯಬೇಕಾಗಿದೆ. ಆ ನಂತರ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದರು. ಕಳೆದ ಅಧಿವೇಶನದಲ್ಲಿ ವಿಶೇಷ ಚರ್ಚೆಗೆಂದು ಈ ವಿಷಯ ನಿಗದಿಯಾಗಿತ್ತಾದರೂ ಅವಕಾಶ ಸಿಕ್ಕಿರಲಿಲ್ಲ.
ಈಗ ಫೆಬ್ರವರಿ 10 ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಈ ಅಧಿವೇಶನದಲ್ಲಿ ಈ ಕುರಿತು ಚರ್ಚೆ ನಡೆಸುವುದಾಗಿ ಸ್ಪಷ್ಟ ಭರವಸೆಯನ್ನೂ ಸರ್ಕಾರ ನೀಡುತ್ತಿಲ್ಲ. ಅಧಿವೇಶನ ಆರಂಭವಾಗುವುದರೊಳಗೆ ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದು ಕೂಡ ಅನುಮಾನ ಎನ್ನಲಾಗುತ್ತಿದೆ.
ಇದಕ್ಕೆ ಕಾರಣವೂ ಇಲ್ಲದಿಲ್ಲ, ಸರ್ಕಾರದ ಉನ್ನತ ಮೂಲಗಳ ಪ್ರಕಾರ ಎನ್‌ಪಿಎಸ್ ಅನ್ನೇ ರಾಜ್ಯದಲ್ಲಿ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಆದರೆ ಈ ವಿಷಯ ಇತ್ತೀಚೆಗೆ ಚುನಾವಣೆ ನಡೆದ ಉತ್ತರ ಭಾರತದ ರಾಜ್ಯಗಳಂತೆಯೇ ರಾಜ್ಯದಲ್ಲಿಯೂ ಪ್ರಮುಖ ಚುನಾವಣಾ ವಿಷಯವಾಗುವ ಸಾಧ್ಯತೆಗಳಿರುವುದರಿಂದ ಈ ಬಗ್ಗೆ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಹೀಗಾಗಿಯೇ ಈಗಲೇ ಸ್ಪಷ್ಟ ತೀರ್ಮಾನ ಪ್ರಕಟಿಸಲು ಹಿಂದೇಟು ಹಾಕುತ್ತಿದೆ. ಆದ್ದರಿಂದಲೇ ಎನ್‌ಪಿಎಸ್ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸದೆ ದಿನ ದೂಡುತ್ತಿದೆ.
“ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಬಜೆಟ್ ಮಂಡನೆಯಾಗಲಿದೆ. ಈ ಸಂದರ್ಭದಲ್ಲಿ ಒಪಿಎಸ್ ಜಾರಿಯ ಸಾಧಕ ಬಾಧಕ ಕುರಿತು ಚರ್ಚೆ ನಡೆಯುವುದು ಅನುಮಾನ. ಈ ವಿಷಯದ ಕುರಿತು ಹೊಸ ಸರ್ಕಾರವೇ ತೀರ್ಮಾನಿಸಲಿ ಎಂದು ಈಗಿನ ಸರ್ಕಾರ ತೀರ್ಮಾನಿಸಿದಂತಿದೆʼʼ ಎಂದು ಹೆಸರು ಹೇಳಲು ಇಚ್ಛಿಸದ ಸಚಿವಾಲಯ ನೌಕರರ ಸಂಘದ ಪದಾಧಿಕಾರಿಯೊಬ್ಬರು “ವಿಸ್ತಾರ ನ್ಯೂಸ್ʼʼಗೆ ತಿಳಿಸಿದ್ದಾರೆ.
ಒಪಿಎಸ್ ಜಾರಿಯ ಕುರಿತು ಸ್ಪಷ್ಟ ತೀರ್ಮಾನ ಪ್ರಕಟಿಸಲು ಸರ್ಕಾರ ಹಿಂದೆ-ಮುಂದೆ ನೋಡುತ್ತಿರುವುದರಿಂದ ಮುಂದೆ ಹೋರಾಟ ಹೇಗೆ ರೂಪಿಸಬೇಕೆಂಬ ಕುರಿತು ಎನ್‌ಪಿಎಸ್ ಸರ್ಕಾರಿ ನೌಕರರು ಗೊಂದಲಕ್ಕೆ ಬಿದ್ದಿದ್ದಾರೆ. ಆದರೆ ತಮ್ಮ ಜೀವನ್ಮರಣದ ವಿಷಯವಾದ ಈ ಕುರಿತು ಸರ್ಕಾರ ಹೀಗೆ ವಿಳಂಬ ಮಾಡುತ್ತಿರುವುದಕ್ಕೆ ಆಕ್ರೋಶ ಹೊರ ಹಾಕುತ್ತಿದ್ದು, ಬಜೆಟ್ ಅಧಿವೇಶನದ ಸಂಧರ್ಭದಲ್ಲಿ ಮತ್ತೆ ಹೋರಾಟಕ್ಕಿಳಿದರೂ ಆಶ್ಚರ್ಯವಿಲ್ಲ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.