Site icon Vistara News

NPS News | ರಾಜ್ಯ ಸರ್ಕಾರಿ ನೌಕರರು ಎನ್‌ಪಿಎಸ್‌ ಬೇಡ, ಒಪಿಎಸ್‌ ಬೇಕು ಎನ್ನಲು ಕಾರಣವಾದರೂ ಏನು?

NPS News protest against New Pension Scheme

ಬೆಂಗಳೂರು: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್‌) ಜಾರಿಗೊಳಿಸಬೇಕೆಂದು (NPS News) ರಾಜ್ಯ ಸರ್ಕಾರಿ ನೌಕರರು ಒತ್ತಾಯಿಸುತ್ತಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎನ್‌ಪಿಎಸ್‌ ರದ್ದು ಪಡಿಸುವ ವಿಷಯವು ಚುನಾವಣಾ ವಿಷಯವಾಗಿದ್ದರಿಂದ ರಾಜ್ಯದಲ್ಲಿಯೂ ಈ ಪ್ರತಿಭಟನೆ ಮಹತ್ವ ಪಡೆದುಕೊಂಡಿದೆ. ಹೊಸ ಪಿಂಚಣಿ ಯೋಜನೆಗೆ ವಿರೋಧ ಏಕೆ ಎಂಬ ಮಾಹಿತಿ ಇಲ್ಲಿದೆ.

ಒಪಿಎಸ್‌ v/s ಎನ್‌ಪಿಎಸ್‌
ನಿವೃತ್ತರಾದ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ(ಒಪಿಎಸ್‌)ಯಲ್ಲಿ ಇಂತಿಷ್ಟು ಎಂದು ನಿಶ್ಚಿತ ಮೊತ್ತವು ಪಿಂಚಣಿಯಾಗಿ ದೊರೆಯುತ್ತಿತ್ತು. ಸರ್ಕಾರ ತೆರಿಗೆದಾರರ ಹಣವನ್ನು ಬಳಸಿ ಈ ಪಿಂಚಣಿ ನೀಡುತ್ತಿತ್ತು. ಕನಿಷ್ಠ 10 ವರ್ಷ ಸರ್ಕಾರಿ ಸೇವೆ ಸಲ್ಲಿಸಿದ ನೌಕರರು ಈ ಪಿಂಚಣಿ ಯೋಜನೆಗೆ ಅರ್ಹರಾಗಿರುತ್ತಿದ್ದರು. ಪಿಂಚಣಿ ಪಡೆಯಲು ಅವರು ಯಾವುದೇ ಮೊತ್ತವನ್ನು ಹೂಡಿಕೆ ಮಾಡಬೇಕಾಗಿಯೇನೂ ಇರಲಿಲ್ಲ.

ಈಗ ಜಾರಿಯಲ್ಲಿರುವ ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ಅಡಿಯಲ್ಲಿ ನಿವೃತ್ತಿಯ ನಂತರ ಎಷ್ಟು ಮೊತ್ತ ಪಿಂಚಣಿಯಾಗಿ ದೊರೆಯುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲಾಗದು. ಏಕೆಂದರೆ ನೌಕರನು ಪ್ರತಿ ತಿಂಗಳು ಎನ್‌ಪಿಎಸ್‌ ಖಾತೆಯಲ್ಲಿ ಸಂಬಳದ ಶೇ.10 ರಷ್ಟನ್ನು ಇರಿಸಬೇಕು. ಅದಕ್ಕೆ ಪ್ರತಿಯಾಗಿ ಸರ್ಕಾರವು ಶೇ.14ರಷ್ಟನ್ನು ನೀಡುತ್ತದೆ. ಈ ರೀತಿ ಜಮಾ ಆದ ಮೊತ್ತಕ್ಕೆ ಎಷ್ಟು ಲಾಭ ಸಿಗುತ್ತದೆ ಎಂಬುದನ್ನು ಆಧರಿಸಿ ಪಿಂಚಣಿ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ.

ನೌಕರರ ಸಂಬಳದಿಂದ ಕಡಿತ ಮಾಡಿದ ಮೊತ್ತವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತಿರುವ ಕಂಪನಿಗಳು ಆಯಾ ಕಾಲಕ್ಕೆ ಅವರ ಲಾಭ ನಷ್ಟಗಳ ಆಧಾರದಲ್ಲಿ ಪಿಂಚಣಿಯ ಮೊತ್ತವನ್ನು ನಿಗದಿಪಡಿಸಬಹುದು. ಆ ಮೊತ್ತ ಹೆಚ್ಚಿರಬಹುದು, ಕಡಿಮೆ ಇರಬಹುದು ಅಥವಾ ಏನೂ ಇಲ್ಲದೇ ಹೋಗಬಹುದು! ಇದನ್ನು ಪೆನ್ಷನ್‌ ಫಂಡ್‌ ರೆಗ್ಯುಲೇಟರಿ ಅಂಡ್‌ ಡೆವಲಪ್‌ಮೆಂಟ್‌ ಅಥಾರಿಟಿ ಕಾಯ್ದೆಯ ಸೆಕ್ಷನ್‌ 20 (2)(ಜಿ) ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದರ ಪ್ರಕಾರ ಪಿಂಚಣಿ ಮೊತ್ತದ ನೀಡಿಕೆಯ ಬಗ್ಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಆಯಾ ಕಾಲಘಟ್ಟದಲ್ಲಿ ಪಿಂಚಣಿ ನಿರ್ವಾಹಕರ ತೀರ್ಮಾನದಂತೆ ಪಿಂಚಣಿಯನ್ನು ನೀಡಲಾಗುತ್ತದೆ.

ಹಿಂದೆ ಸಾಮಾನ್ಯ ಭವಿಷ್ಯ ನಿಧಿ (ಜಿಪಿಎಫ್‌) ಹಣಕ್ಕೆ ಸರ್ಕಾರವು ಮೊದಲು ಶೇ.12ರಷ್ಟು ಬಡ್ಡಿ ನೀಡಲಾಗುತ್ತಿತ್ತು. ನಂತರ ಈ ಬಡ್ಡಿ ದರವು ಸರಿಸುಮಾರು ಶೇ. 8.5 ಕ್ಕೆ ಇಳಿದಿದೆ. ಕೊನೆಗೆ ಅಸಲು ಮತ್ತು ಬಡ್ಡಿ ಒಟ್ಟು ಮೊತ್ತವನ್ನು ಸಂಬಂಧಿತ ನೌಕರರಿಗೆ ಪಾವತಿ ಮಾಡಲಾಗುತ್ತಿತ್ತು. ಈಗ ಅದರ ಬದಲಾಗಿ ನೌಕರರ ಉಳಿತಾಯ ಹಣವನ್ನು ಕಂಪನಿಯ ಷೇರು ಬಂಡವಾಳವಾಗಿ ಪರಿಗಣಿಸಲಾಗುತ್ತದೆ. ಈ ಕಂಪನಿಗೆ ಲಾಭ ಬಂದರೆ ಡಿವಿಡೆಂಟ್‌ ನೀಡಲಾಗುತ್ತದೆ. ನಷ್ಟವಾದರೆ ಇಡೀ ಉಳಿತಾಯ ಹಣವೇ ಮಂಗಮಾಯವಾಗುತ್ತದೆ.

ಎನ್‌ಪಿಎಸ್‌ನಲ್ಲಿ ನೌಕರರ ಹಣವನ್ನು ಷೇರುಪೇಟೆಯಲ್ಲಿಯೂ, ಸರ್ಕಾರದ ಬಾಂಡ್‌ಗಳಲ್ಲಿಯೂ ಹೂಡಿಕೆ ಮಾಡಲಾಗುತ್ತದೆ. ಷೇರುಪೇಟೆಯಲ್ಲಿ ಹೆಚ್ಚಿನ ಮೊತ್ತ ತೊಡಗಿಸಿದರೆ ವಾರ್ಷಿಕವಾಗಿ ಶೇಕಡ 10ರಿಂದ ಶೇ 12ರವರೆಗೆ ಲಾಭ ಪಡೆಯುವ ಸಾಧ್ಯತೆಯೂ ಇರುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಏರಿಳಿತ ಕಾರಣ 30 ವರ್ಷಗಳ ಅವಧಿಯಲ್ಲಿ ಶೇ 8ರಷ್ಟು ವಾರ್ಷಿಕ ಸರಾಸರಿ ಲಾಭ ಸಿಕ್ಕರೆ ಹೆಚ್ಚು.

ಸದ್ಯ ಪಿಂಚಣಿ ನಿಧಿ ನಿರ್ವಾಹಕರು (ಪಿಎಫ್‌ಎಂ)
೧. ಎಚ್‌ಡಿಎಫ್‌ಸಿ ಪೆನ್ಷನ್‌ ಮ್ಯಾನೇಜ್‌ಮೆಂಟ್‌ ಕಂಪನಿ ಲಿ.
೨. ಐಸಿಐಸಿಐ ಪ್ರಿಡೆನ್ಷಿಯಲ್‌ ಪೆನ್ಷನ್‌ ಫಂಡ್ಸ್‌ ಮ್ಯಾನೇಜ್‌ಮೆಂಟ್‌ ಕಂಪನಿ ಲಿ.
೩. ಕೊಟಕ್‌ ಮಹೀಂದ್ರ ಪೆನ್ಷನ್‌ ಫಂಡ್‌ ಲಿ.
೪. ಎಲ್‌ಐಸಿ ಪೆನ್ಷನ್‌ ಫಂಡ್‌ ಲಿ.
೫. ರಿಲೆಯನ್ಸ್‌ ಕ್ಯಾಪಿಟಲ್‌ ಪೆನ್ಷನ್‌ ಫಂಡ್‌ ಲಿ.
೬. ಎಸ್‌ಬಿಐ ಪೆನ್ಷನ್‌ ಫಂಡ್ಸ್‌ ಪ್ರವೇಟ್‌ ಲಿ.
೭.ಯುಟಿಐ ರಿಟೈರ್‌ಮೆಂಟ್‌ ಸಲ್ಯುಷನ್ಸ್‌ ಲಿ.
೮. ಡಿಎಸ್‌ಪಿ ಬ್ಲಾಕ್‌ ರಾಕ್‌ ಪೆನ್ಷನ್‌ ಫಂಡ್‌ ಮ್ಯಾನೇಜರ್ಸ್‌ ಪ್ರವೇಟ್‌ ಲಿ.
ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಸಮನ್ವಯಗೊಳಿಸಲು ಟ್ರಸ್ಟಿ ಬ್ಯಾಂಕ್‌ ಜವಾಬ್ದಾರಿಯನ್ನು ಆಕ್ಸಿಸ್‌ ಬ್ಯಾಂಕಿಗೆ ವಹಿಸಲಾಗಿದೆ.

ಸಮಸ್ಯೆ ಏನಾಗುತ್ತಿದೆ?
ಒಬ್ಬ ಸರ್ಕಾರಿ ನೌಕರ 30-35 ವರ್ಷ ಸರ್ಕಾರಿ ಸೇವೆಯಲ್ಲಿದ್ದು, ತನ್ನ ಶಕ್ತಿ ಮತ್ತು ಜ್ಞಾನವನ್ನು ಕೆಲಸದಲ್ಲಿ ವ್ಯಯಮಾಡಿರುತ್ತಾರೆ. ಆ ಮೂಲಕ ಸಮಾಜ ಮತ್ತು ದೇಶದ ಸೇವೆ ಮಾಡುತ್ತಿರುತ್ತಾನೆ. ಈ ನೌಕರನ ಸಂಧ್ಯಾ ಕಾಲದಲ್ಲಿ ಸಾಮಾಜಿಕ ಆರ್ಥಿಕ ಭದ್ರತೆಯನ್ನು ಒದಗಿಸುವುದು ಸರ್ಕಾರದ ಸಂವಿಧಾನ ಬದ್ಧ ಕರ್ತವ್ಯವಾಗಿರುತ್ತದೆ. ಹೀಗಾಗಿಯೇ ಈ ಹಿಂದೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿತ್ತು.

ಈ ಪಿಂಚಣಿ ಯೋಜನೆಯನ್ನು ಬದಲಾಯಿಸಿ ಈಗ ಅಂದರೆ 2006ರಿಂದ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಹಳೇ ಪಿಂಚಣಿ ಯೋಜನೆಯಲ್ಲಿ ಸುಧಾರಣೆ ತರುವ ಬದಲಾಗಿ, ಪಿಂಚಣಿ ಯೋಜನೆಯ ಉದ್ದೇಶಕ್ಕೇ ತದ್ವಿರುದ್ಧವಾಗಿದೆ. “ಯು ಟರ್ನ್‌ʼʼ ಹೊಡೆದಿದೆ ಎಂದು ಈಗ ಸರ್ಕಾರಿ ನೌಕರರು ಆರೋಪಿಸುತ್ತಿದ್ದಾರೆ. ಎನ್‌ಪಿಎಯಿಂದಾಗಿ ಪ್ರತಿ ಸರ್ಕಾರಿ ನೌಕರನ ಸಂಧ್ಯಾಕಾಲವು ಅಭದ್ರತೆಯಿಂದ ಕೂಡಿದೆ. ನಿವೃತ್ತಿ ಜೀವನ ಹೇಗೆಂಬ ತಳಮಳದಿಂದ ದಿನಾ ಬದುಕುವಂತಾಗಿದೆ. ಈಗಾಗಲೇ ಹೊಸ ಪಿಂಚಣಿ ಯೋಜನೆ ಪ್ರಕಾರ ನಿವೃತ್ತಿ ಹೊಂದಿದ ನೌಕರರು 500, 1000,1,500, 2000 ಹೀಗೆ ಪಿಂಚಣಿ ಪಡೆಯುತ್ತಿದ್ದಾರೆ ಎಂದು ಎನ್‌ಪಿಎಸ್‌ ನೌಕರ ಸಂಘದ ಅಧ್ಯಕ್ಷ ಶಾಂತರಾಮ ಹೇಳಿದ್ದಾರೆ.

ಜಾರಿ ಎಂದಿನಿಂದ?

ಕೇಂದ್ರ ಸರ್ಕಾರವು ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್‌) ಜಾರಿಗೊಳಿಸುವ ಉದ್ದೇಶದಿಂದ “ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ” (ಪಿಎಫ್‌ಆರ್‌ಡಿಎ) ರೂಪಿಸಿದೆ. ಇದು ಅಂತಿಮವಾಗಿ ಅಂಗೀಕಾರ ಪಡೆದಿರುವುದು 2013ರಲ್ಲಿ. ಆದರೆ, ಇದಕ್ಕೂ ಮೊದಲೇ ಕೇಂದ್ರ ಸರ್ಕಾರ 2003ರ ಅಕ್ಟೋಬರ್‌ 29ರಂದು ಕಾರ್ಯಾದೇಶದ ಮೂಲಕ ಇದಕ್ಕೆ ಸಂಬಂಧಿಸಿದ ಪ್ರಾಧಿಕಾರ ಸ್ಥಾಪಿಸಿತ್ತು. ಎನ್‌ಡಿಎ ಸರ್ಕಾರದ ಈ ಆದೇಶವನ್ನು ಯುಪಿಎ ಸರ್ಕಾರವೂ ಯಾವುದೇ ಬದಲಾವಣೆಗಳಿಲ್ಲದೆಯೇ ಮುಂದುವರಿಸಿತು. 2004ರ ಜನವರಿ 1ರಿಂದ ನೇಮಕವಾಗುವ ಕೇಂದ್ರ ಸರ್ಕಾರಿ ನೌಕರರಿಗೆ ಈ ಹೊಸ ಪಿಂಚಣಿ ಯೋಜನೆ ಜಾರಿಗೆ ಬಂದಿದೆ. ಈಗಾಗಲೇ 27 ರಾಜ್ಯ ಸರ್ಕಾರಗಳು ಎನ್‌ಪಿಎಸ್‌ ಜಾರಿಗೊಳಿಸಿವೆ.

ರಾಜ್ಯದಲ್ಲಿ ಹೊಸ ಪಿಂಚಣಿ ಯೋಜನೆಯು ದಿನಾಂಕ 01-04-2006ರಿಂದ ಜಾರಿಗೆ ಬಂದಿದೆ. ಈ ಕುರಿತು ದಿನಾಂಕ 11-11-2009 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, 2006ರಿಂದ ಪೂರ್ವಾನ್ವಯವಾಗುವಂತೆ ಇದನ್ನು ಜಾರಿಗೆ ತರಲು ತೀರ್ಮಾನಿಸಲಾಗಿತ್ತು. ಈ ಯೋಜನೆ ಜಾರಿಗೆ ಬಂದು ಈಗ 16 ವರ್ಷಗಳಾಗಿವೆ. ಈ ಅವಧಿಯಲ್ಲಿ ನೇಮಕಗೊಂಡ ಸುಮಾರು 2,54,000 ನೌಕರರು ಹಾಗೂ ಸುಮಾರು ಒಂದು ಲಕ್ಷ ನಿಗಮ ಮಂಡಳಿಗಳ, ಅನುದಾನಿತ ಹಾಗೂ ಅರೆ ಸರ್ಕಾರಿ ನೌಕರರು ಈ ಹೊಸ ಪಿಂಚಣಿ ಯೋಜನೆಯಡಿ ಬರುತ್ತಾರೆ. ಅವರೆಲ್ಲರೂ ಹೊಸ ಪಿಂಚಣಿ ಯೋಜನೆಗೆ ಈಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದಲ್ಲಿ ಹೋರಾಟ ಶುರುವಾಗಿದ್ದು ಯಾವಾಗ?
ಹೊಸ ಪಿಂಚಣಿ ಯೋಜನೆ ವಿರುದ್ಧ ರಾಜ್ಯದಲ್ಲಿ 2014ರಿಂದಲೂ ಪ್ರತಿಭಟನೆ ನಡೆಯುತ್ತಿದೆ. 2014ರ ಏಪ್ರಿಲ್‌ 1 ರಂದು ರಾಜ್ಯ ಸರ್ಕಾರಿ ನೌಕರರು ಕಪ್ಪುಪಟ್ಟಿ ಧರಿಸಿ, ಮೊದಲಿಗೆ ಪ್ರತಿಭಟನೆ ನಡೆಸಿದ್ದರು. ನಂತರ ಪೋಸ್ಟ್‌ ಕಾರ್ಡ್‌ ಅಭಿಯಾನ ನಡೆಸಲಾಗಿತ್ತು. 2016ರ ಫೆಬ್ರವರಿಯಲ್ಲಿ “ನಿಶ್ಚಿತ ಪಿಂಚಣಿ ನಮ್ಮ ಹಕ್ಕು” ಎಂಬ ಘೋಷ ವಾಕ್ಯದೊಂದಿಗೆ ರಾಜ್ಯದ ಮುಖ್ಯಮಂತ್ರಿಗಳಿಗೆ, ರಾಜ್ಯದ ಎಲ್ಲ ಜನಪ್ರತಿನಿಧಿಗಳಿಗೆ ಸರ್ಕಾರಿ ನೌಕರರು ಎನ್‌ಪಿಎಸ್‌ ರದ್ದು ಪಡಿಸುವಂತೆ ಮನವಿ ಸಲ್ಲಿಸಿದ್ದರು. 2017ರ ಮಾರ್ಚ್‌ನಲ್ಲಿ ದೆಹಲಿ ಚಲೋ ನಡೆಸಲಾಗಿತ್ತು. ಜುಲೈನಲ್ಲಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಬೆಂಗಳೂರಿನಲ್ಲಿ ಆಯೋಜಿಸುವ ಮೂಲಕ ಈ ಕುರಿತು ನೌಕರರಲ್ಲಿ ಜಾಗೃತಿ ಮೂಡಿಸಲಾಗಿತ್ತು.

2018ರ ಜನವರಿ 20 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ ಚಲೋ ಬೃಹತ್‌ ಪ್ರತಿಭಟನೆ ಆಯೋಜಿಸಲಾಗಿತ್ತು. ನಂತರ ನೌಕರರು ಒಂದು ದಿನದ ಉಪವಾಸ ಧರಣಿ ಸತ್ಯಾಗ್ರಹ ನಡೆಸಿದ್ದರು. ಅದೇ ವರ್ಷ ಅಕ್ಟೋಬರ್‌ನಲ್ಲಿ ಪಾರ್ಲಿಮೆಂಟ್‌ ಚಲೋ ಮತ್ತು ನವೆಂಬರ್‌ನಲ್ಲಿ ಬೆಳಗಾವಿ ಚಲೋ ನಡೆಸಲಾಗಿತ್ತು. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದಾಗ ಜಾಥಾ ಹಾಗೂ ಧರಣಿ ನಡೆಸಲಾಗಿತ್ತು. 2018 ರ ಅಕ್ಟೋಬರ್‌ 03 ರಂದು “ರಕ್ತ ಕೊಟ್ಟೆವು ಪಿಂಚಣಿ ಬಿಡೆವುʼʼ ಎಂಬ ಘೋಷ ವಾಕ್ಯದೊಂದಿಗೆ ರಾಜ್ಯದ 164 ಕೇಂದ್ರಗಳಲ್ಲಿ ರಕ್ತದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ವರ್ಷ ಅಕ್ಟೋಬರ್‌ 13 ರಿಂದ “ಒಪಿಎಸ್‌ ಸಂಕಲ್ಪ ಯಾತ್ರೆʼʼ ನಡೆಸಿ, ರಾಜ್ಯದ ಪ್ರತಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಎನ್‌ಪಿಎಸ್‌ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಇದೀಗ ಫ್ರೀಡಂಪಾಕ್‌ನಲ್ಲಿ “ಮಾಡು ಇಲ್ಲವೇ ಮಡಿʼʼ ಎಂಬ ಘೋಷ ವಾಕ್ಯದೊಂದಿಗೆ ಅನಿರ್ಧಿಷ್ಟ ಹೋರಾಟ ಆರಂಭಿಸಲಾಗಿದೆ.

ಇದನ್ನೂ ಓದಿ | NPS News | ಎನ್‌ಪಿಎಸ್‌ ರದ್ದು; ಹಿಮಾಚಲ ಪ್ರದೇಶದಂತೆ ರಾಜ್ಯದಲ್ಲಿಯೂ ಚುನಾವಣಾ ವಿಷಯವಾಗಲಿದೆಯೇ?

Exit mobile version