Site icon Vistara News

NPS News | ಮಹಾರಾಷ್ಟ್ರದಲ್ಲಿ ಒಪಿಎಸ್‌ ಜಾರಿ ಇಲ್ಲ ಎಂದ ಫಡ್ನವಿಸ್‌; ರಾಜ್ಯದಲ್ಲಿ ಮುಂದುವರಿದ ಪ್ರತಿಭಟನೆ

NPS News

ಬೆಂಗಳೂರು: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ (ಒಪಿಎಸ್‌) ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು (NPS News) ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈ ಕುರಿತು ವಿಧಾನಸಭೆಯಲ್ಲಿಯೇ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ಈ ಹೊತ್ತಿನಲ್ಲಿಯೇ ಒಪಿಎಸ್‌ ಜಾರಿ ಸಾಧ್ಯವೇ ಇಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಪ್ರಕಟಿಸಿದೆ.

ಒಪಿಎಸ್‌ ಜಾರಿಗೆ ತಂದಲ್ಲಿ ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ 1.10 ಲಕ್ಷ ಕೋಟಿ ಹೊರೆ ಬೀಳಲಿದೆ. ಹೀಗಾಗಿ ಎನ್‌ಪಿಎಸ್‌ ರದ್ದುಪಡಿಸಿ, ಒಪಿಎಸ್‌ ಜಾರಿಗೆ ತರುವ ಪ್ರಶ್ನೆಯೇ ಇಲ್ಲ ಎಂದು ಅಲ್ಲಿನ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಬುಧವಾರ ವಿಧಾನಸಭೆಯಲ್ಲಿಯೇ ಘೋಷಿಸಿದ್ದಾರೆ.

ಈ ಸಂಬಂಧ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಒಪಿಎಸ್‌ ಯೋಜನೆಯನ್ನು 2005ರಲ್ಲಿಯೇ ರದ್ದುಪಡಿಸಲಾಗಿದೆ. ಮತ್ತೆ ಅದನ್ನು ಮರಳಿ ಜಾರಿಗೆ ತರುವ ಯಾವ ಉದ್ದೇಶವೂ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೊಕ್ಕಸಕ್ಕೆ ಹೊರೆಯಾಗುತ್ತಿದೆ ಎಂಬ ಕಾರಣದಿಂದ ಹೊಸ ಸರ್ಕಾರಿ ಶಾಲೆಗಳಿಗೇ ಅನುಮತಿ ನೀಡುತ್ತಿಲ್ಲ. ಹೀಗಿರುವಾಗ ಒಪಿಎಸ್‌ಗೆ ಮರಳುವುದಾದರೂ ಹೇಗೆ ಎಂದು ಪ್ರಶ್ನಿಸಿರುವ ಫಡ್ನವಿಸ್‌, ಸರ್ಕಾರದ ಆದಾಯದ ಮಿತಿಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.

ಮಹಾರಾಷ್ಟ್ರ ಕಾಂಗ್ರೆಸ್‌ ಒಪಿಎಸ್‌ ಜಾರಿಗೆ ಒತ್ತಾಯಿಸುತ್ತಿದ್ದು, ಈ ಸಂಬಂಧ ಪಕ್ಷದ ಅಧ್ಯಕ್ಷ ನಾನಾ ಪಾಟೋಳೆ ಈ ಹಿಂದೆ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದರು. ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳಲ್ಲಿ ಒಪಿಎಸ್‌ ಜಾರಿ ಸಾಧ್ಯವಾಗಿರುವಾಗ ಇಲ್ಲಿ ಏಕೆ ಸಾಧ್ಯವಿಲ್ಲ. ಸರ್ಕಾರಿ ನೌಕರರು ನಿವೃತ್ತಿ ಹೊಂದಿದಾಗ ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಬೇಕು ಎಂದು ಪತ್ರದಲ್ಲಿ ಹೇಳಿದ್ದರು.

ಇತ್ತೀಚೆಗೆ ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶ ರಾಜ್ಯ ಸರ್ಕಾರಗಳು ಮರಳಿ ಒಪಿಎಸ್‌ ಜಾರಿಗೊಳಿಸಿವೆ. ಕರ್ನಾಟಕದಲ್ಲಿಯೂ ಇದರ ಜಾರಿಗೆ ಎನ್‌ಪಿಎಸ್‌ ನೌಕರರ ಸಂಘ ಹೋರಾಟ ತೀವ್ರಗೊಳಿಸಿದ್ದು, ಈ ಕುರಿತು ಸರ್ಕಾರ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

“ಎನ್‌ಪಿಎಸ್‌ ರದ್ದಿನ ಸಾಧಕ-ಬಾಧಕಗಳ ಕುರಿತು ವಿಧಾನಸಭೆಯಲ್ಲಿ ಚರ್ಚೆ ಮಾಡಬೇಕಿದೆ. ಸರ್ಕಾರಕ್ಕೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದೆಯಾದರೂ ಸಾರ್ವಜನಿಕ ವಲಯದಲ್ಲಿ ಇದರ ಪರಿಣಾಮ ಏನಾಗುತ್ತದೆ ಎಂಬುದರ ಕುರಿತು ಚರ್ಚೆಯಾಗಬೇಕು. ಈ ನಿರ್ಧಾರದ ಪರಿಣಾಮಕ್ಕೆ ಎಲ್ಲರೂ ಜವಾಬ್ದಾರಿ ಯಾಗಬೇಕಾಗುತ್ತದೆ. ಮುಂದೆ ಸರ್ಕಾರದ ಬೊಕ್ಕಸವನ್ನು ಹೇಗೆ ನಿಭಾಯಿಸಬೇಕು, ಜನಹಿತ, ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಮಾಡಬೇಕು, ಸರ್ಕಾರಿ ನೌಕರರ ಹಿತ ಹೇಗೆ ಕಾಪಾಡಬೇಕು ಎಂಬುದರ ಕುರಿತು ಸುದೀರ್ಘ ಚರ್ಚೆ ನಡೆಯಬೇಕು. ಸರ್ಕಾರ ಈ ಸಂದರ್ಭದಲ್ಲಿ ಸುದೀರ್ಘ ಉತ್ತರ ನೀಡುತ್ತದೆʼʼ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಮಂಗಳವಾರ ವಿಧಾನಸಭೆಯಲ್ಲಿ ಪ್ರಕಟಿಸಿದ್ದರು.

ಮುಂದುವರಿದ ಹೋರಾಟ
ಹಳೆಯ ಪಿಂಚಣಿ ಯೋಜನೆ(ಒಪಿಎಸ್‌) ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರ ಸಂಘ ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಬೃಹತ್‌ ಪ್ರತಿಭಟನೆ (NPS News) ನಾಲ್ಕನೇ ದಿನವೂ ಮುಂದುವರಿದಿದೆ.

“ಮಾಡು ಇಲ್ಲವೇ ಮಡಿ” ಹೋರಾಟ ನಡೆಸುತ್ತಿರುವ ನೌಕರರು ಸರ್ಕಾರ ಸ್ಪಷ್ಟ ಭರವಸೆ ನೀಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ರಾತ್ರಿ ಕೂಡ ಇಲ್ಲಿಯೇ ಮಲಗಿ ಪ್ರತಿಭಟನೆ ಮುಂದುವರಿಸಿದ್ದಾರೆ. ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ನೌಕರರಿಗೆ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ | NPS News | ರಾಜ್ಯ ಸರ್ಕಾರಿ ನೌಕರರು ಎನ್‌ಪಿಎಸ್‌ ಬೇಡ, ಒಪಿಎಸ್‌ ಬೇಕು ಎನ್ನಲು ಕಾರಣವಾದರೂ ಏನು?

Exit mobile version