ದೋಹಾ(ಕತಾರ್): ಕತಾರ್‌ನ ಸಾರ್ವಜನಿಕ ಆರೋಗ್ಯ ಸಚಿವಾಲಯದಲ್ಲಿ ಮೂರು ದಶಕಗಳಿಗಿಂತ ಹೆಚ್ಚು ಕಾಲ ವೈದ್ಯರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ಡಾ. ಅಬ್ರಹಾಂ ಕೊಲ್ಲಮನ ಅವರಿಗೆ ಭಾನುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಭಾರತೀಯ ಸಾಂಸ್ಕೃತಿಕ ಕೇಂದ್ರ ಮತ್ತು ಭಾರತೀಯ ಡಾಕ್ಟರ್ಸ್ ಕ್ಲಬ್ ಜಂಟಿಯಾಗಿ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಿದ್ದವು.
ಡಾ. ಅಬ್ರಹಾಂ ಕೊಲ್ಲಮನ ಅವರು ಕೇರಳ ಮೂಲದವರು. ಸಾಮಾಜಿಕ ಕಾರ್ಯಕರ್ತರಾಗಿ ಅವರು ಭಾರತೀಯ ಸಾಂಸ್ಕೃತಿಕ ಕೇಂದ್ರದ ಸ್ಥಾಪಕ ಸದಸ್ಯರಾಗಿದ್ದರು. ೨೦೦೮-೧೦ರವರೆಗೆ ಭಾರತೀಯ ಸಮುದಾಯದ ಬೇನೇವೋಲೆಂಟ್ ಫೋರಮ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಅಲ್ ಖೋರ್ ಸ್ಟೇಡಿಯಂನಲ್ಲಿ ಅತಿದೊಡ್ಡ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿತ್ತು. ತಮ್ಮ ತವರು ರಾಜ್ಯ ಕೇರಳದಲ್ಲಿ ಇತ್ತೀಚೆಗೆ ಅಬ್ರಹಾಂ ನಿಧನರಾದರು.
ಸಂತಾಪ ಸಭೆಯಲ್ಲಿ ಡಾ. ಸಮೀರ್ ಮೂಪನ್, ಡಾ. ಜೋಯಲ್ ಜೇಕಬ್, ಪಿ.ಎನ್. ಬಾಬುರಾಜನ್, ನಿಲಾಂಶು ಡೇ, ಡೇವಿಡ್ ಜಾನ್, ಕೆ. ಕೆ. ಉಸ್ಮಾನ್, ಸ್ಯಾಮ್ ಬಶೀರ್, ಅನಿಲ್ ಬ್ಲೂಮರ್, ಸುರೇಶ್ ಕರಿಯಾಡ್ ಸೇರಿ ಹಲವಾರು ಗಣ್ಯರು ಡಾ. ಅಬ್ರಹಾಂ ಜತೆಗಿನ ಒಡನಾಟವನ್ನು ಹಂಚಿಕೊಂಡರು.
ಭಾರತೀಯ ಸಾಂಸ್ಕೃತಿಕ ಕೇಂದ್ರದ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ ಬಂಧಕವಿ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತಿತರರು ಉಪಸ್ಥಿತರಿದ್ದರು.