ಮಂಗಳೂರು: ಹಿಜಾಬ್ ವಿವಾದ ಭುಗಿಲೆದ್ದ ಮಂಗಳೂರಿನ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಮತ್ತೊಂದು ವಿವಾದ ಉಂಟಾಗಿದೆ. ಕಾಲೇಜಿನ ಕಾರ್ಯಕ್ರಮಕ್ಕೆ ಹಿಂದು ಮುಖಂಡನಿಗೆ ಆಹ್ವಾನ ನೀಡಿರುವುದಕ್ಕೆ ತೀವ್ರ ಆಕ್ಷೇಪ ಹೊರಹಾಕಿರುವ ಎನ್‌ಎಸ್‌ಯುಐ, ಒಂದು ವೇಳೆ ಹಿಂದು ಮುಖಂಡ ಕಾರ್ಯಕ್ರಮಕ್ಕೆ ಆಗಮಿಸಿದರೆ ಪರಿಸ್ಥಿತಿ ನೆಟ್ಟಗಿರಲ್ಲ, ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದೆ.
ಮಂಗಳೂರಿನ ಹಂಪನಕಟ್ಟೆ ಬಳಿಯ ವಿವಿ ಕಾಲೇಜಿನಲ್ಲಿ ಜೂನ್ 23ರಂದು ಪ್ರತಿಭಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಎಬಿವಿಪಿ ನೇತೃತ್ವದ ವಿದ್ಯಾರ್ಥಿ ಸಂಘದಿಂದ ಹಿಂದು ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿದೆ.
ಶ್ರೀಕಾಂತ್ ಶೆಟ್ಟಿಗೆ ಆಹ್ವಾನ ನೀಡಿದ್ದಕ್ಕೆ ಎನ್ಎಸ್‌ಯುಐ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಾಲೇಜಿನಲ್ಲಿ ಕೋಮು ವಿಷ ಬೀಜ ಬಿತ್ತಲು ಯತ್ನಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಡೆಯಲು ಬಿಡಲ್ಲ ಎಂದು ಎಬಿವಿಪಿಗೆ ಎಚ್ಚರಿಕೆ ಕೊಟ್ಟಿದೆ. ಇದು ಮತ್ತೆ ಎನ್ಎಸ್‌ಯುಐ ಮತ್ತು ಎಬಿವಿಪಿ ವಿದ್ಯಾರ್ಥಿ ಸಂಘಟನೆಗಳ ನಡುವಿನ ಗುದ್ದಾಟಕ್ಕೆ ಕಾರಣವಾಗಿದೆ.
ಇದನ್ನೂ ಓದಿ | Kadaba News: ಚಿನ್ನದ ಅಂಗಡಿ ಉದ್ಘಾಟನೆ ದಿನವೇ ಶವವಾಗಿ ಪತ್ತೆಯಾದ ಯುವಕ
ಈ ಬಗ್ಗೆ ಮಂಗಳೂರು ಕಮಿಷನರ್ ಹಾಗೂ ಕಾಲೇಜು ಪ್ರಾಂಶುಪಾಲರಿಗೂ ಎನ್ಎಸ್‌ಯುಐ ದೂರು ಸಲ್ಲಿಸಿದ್ದು, ಶ್ರೀಕಾಂತ್ ಶೆಟ್ಟಿ ಅತಿಥಿಯಾಗಿ ಕಾರ್ಯಕ್ರಮಕ್ಕೆ ಬಂದರೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದೆ. ಇದರಿಂದ ವಿವಿ ಕಾಲೇಜು ಮತ್ತೆ ವಿವಾದದ ಗೂಡಾಗಿದೆ.
ಈ ಹಿಂದೆ ಹಿಜಾಬ್ ವಿವಾದ, ಸಾವರ್ಕರ್ ಭಾವಚಿತ್ರ ಹಾಗೂ ಭಗವಾಧ್ಬಜ ಹಿಡಿದ ಭಾರತ ಮಾತೆ ಭಾವಚಿತ್ರ ಬಳಕೆ ಕಾರಣದಿಂದ ಕಾಲೇಜು ವಿವಾದಕ್ಕೆ ಕಾರಣವಾಗಿತ್ತು.
ಕಾರ್ಯಕ್ರಮ ಮುಂದೂಡಿಕೆ
ಹಿಂದು ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಆಗಮನಕ್ಕೆ ಎನ್‌ಎಸ್‌ಯುಐ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಂಗಳೂರು ವಿವಿ ಕಾಲೇಜಿನಲ್ಲಿ ಜೂನ್ 23ರಂದು ನಡೆಯಬೇಕಿದ್ದ ಪ್ರತಿಭಾ ದಿನಾಚರಣೆಯನ್ನು ಕಾಲೇಜು ಆಡಳಿತ ಮಂಡಳಿ ಮುಂದೂಡಿದೆ. ಶುಕ್ರವಾರ ಎಂದಿನಂತೆ ತರಗತಿಗಳು ನಡೆಯಲಿವೆ.