ಬೆಂಗಳೂರು: ಬೆಂಗಳೂರಿನ ಸುಮಾರು ಐದು ಲಕ್ಷಕ್ಕೂ ಹೆಚ್ಚು ಹಾಗೂ ರಾಜ್ಯದ ವಿವಿಧ ನಗರ ಪ್ರದೇಶದ ಲಕ್ಷಾಂತರ ಕಟ್ಟಡ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಗೃಹ, ವಾಣಿಜ್ಯ ಬಳಕೆ ಉದ್ದೇಶಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ಸ್ಥಳೀಯ ಸಂಸ್ಥೆಗಳಿಂದ ಪಡೆಯಬೇಕಿದ್ದ ಸ್ವಾಧೀನಾನುಭವ ಪ್ರಮಾಣಪತ್ರ(ಒಸಿ) ಪಡೆಯುವ ಅಗತ್ಯ ಇಲ್ಲ ಎಂದು ತಿಳಿಸಿದೆ.
ಸ್ಥಳೀಯ ನಿಯಮಗಳಿಗೆ ಅನುಗುಣವಾಗಿ ನಕ್ಷೆ ಮಂಜೂರಾತಿ, ಒಸಿ ಇಲ್ಲದೆ ಕಟ್ಟಡ ನಿರ್ಮಾಣ ಮಾಡಿದ್ದ ಸಮಸ್ಯೆ ರಾಜ್ಯಾದ್ಯಂತ ಇದ್ದರೂ ಮುಖ್ಯವಾಗಿ ಬೆಂಗಳೂರಿನಲ್ಲಿ ಹೆಚ್ಚಾಗಿದೆ. ಸದ್ಯ ಒಸಿ ಇಲ್ಲದ ಕಟ್ಟಡಗಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಇದರಿಂದ ಮನೆಯ ಮಾಲೀಕರಿಗೆ ಅಗಾಧ ಪ್ರಮಾಣದ ವಿದ್ಯುತ್ ಬಿಲ್ ಬರುತ್ತಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಜಾರಿಗೆ ತಂದಿದ್ದ ನಿಯಮವನ್ನು ಇದೀಗ ಸಿಎಂ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಇಂಧನ ಸಚಿವ ವಿ. ಸುನಿಲ್ ಕುಮಾರ್ ತೆಗೆದುಹಾಕಿದ್ದಾರೆ. ಈ ಕುರಿತು ಜುಲೈ 1 ರಂದು ಕರ್ನಾಟಕ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‌ಸಿ) ಆದೇಶಿಸಿದೆ.
ಅನೇಕ ವರ್ಷಗಳ ಬೇಡಿಕೆ
ನಗರ ಪ್ರದೇಶಗಳು ಹೆಚ್ಚಿದಂತೆಲ್ಲ ಲೇಔಟ್‌ಗಳು, ಕಟ್ಟಡಗಳ ನಿರ್ಮಾಣ ಭರದಿಂದ ಸಾಗಿದೆ. ಇದರ ಜತೆಗೆ, ಸರ್ಕಾರದ ನಕ್ಷೆ ಮಂಜೂರಾತಿ ಸೇರಿ ವಿವಿಧ ನಿಯಮಗಳನ್ನು ಪಾಲಿಸದೆ ಅನೇಕ ಬಿಲ್ಡರ್‌ಗಳು ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ಒಸಿ ಬೇಕು ಎಂಬ ನಿಯಮದಿಂದಾಗಿ, ಮನೆಗಳನ್ನು ಖರೀದಿಸಿದ ಗ್ರಾಹಕರು ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲಾಗುತ್ತಿಲ್ಲ. ಅನೇಕ ವರ್ಷಗಳಿಂದ ಈ ಕುರಿತು ಕಟ್ಟಡ ಮಾಲೀಕರ ಒತ್ತಾಯವಿದ್ದು, 2017ರಲ್ಲಿ ಪ್ರರಕಣವೊಂದದ ಕುರಿತು ಹೈಕೋರ್ಟ್ ತೀರ್ಪು ನೀಡಿತ್ತು.
ಫ್ಲಾಟ್ ಮಾಲೀಕರು ಕೆಇಆರ್‌ಸಿ ಆದೇಶದ ವಿರುದ್ಧ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಏಕಸದಸ್ಯ ಪೀಠ, ವಿದ್ಯುತ್ ಸಂಪರ್ಕಕ್ಕೆ ಸ್ವಾಧೀನ ಪ್ರಮಾಣ ಪತ್ರದ ಅಗತ್ಯವಿಲ್ಲ. ಕೆಇಆರ್‌ಸಿ ರೂಪಿಸಿರುವ ನಿಯಮಾವಳಿಗಳೇ ಸಾಕು. ಬಿಬಿಎಂಪಿ ಪ್ರಮಾಣ ಪತ್ರಕಡ್ಡಾಯವಲ್ಲ ಎಂದು ಹೇಳಿ ರಿಟ್ ಅರ್ಜಿಯನ್ನು ವಜಾಗೊಳಿತ್ತು. ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವುದು ಬಿಲ್ಡರ್‌ಗಳ ಹೊಣೆಯೇ ಹೊರತು ಫ್ಲಾಟ್ ಮಾಲೀಕರು ಹೊಣೆಯಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿತ್ತು.
ಇದನ್ನೂ ಓದಿ | ಟ್ಯಾಕ್ಸ್ ಕಟ್ಟಿಲ್ವಾ?: ಹುಷಾರ್! ನಿಮ್ಮ ಬ್ಯಾಂಕ್ ಅಕೌಂಟ್ ಅಟ್ಯಾಚ್ ಮಾಡಲಿದೆ ಬಿಬಿಎಂಪಿ
ಇಂಧನ ಇಲಾಖೆ ಪತ್ರ
ಹೈಕೋರ್ಟ್ ಆದೇಶವಿದ್ದರೂ ಕೆಇಆರ್‌ಸಿ ನಿಯಮಾವಳಿಗಳಲ್ಲಿ ಒಸಿ ಕಡ್ಡಾಯ ಎಂದು ಇದ್ದದ್ದರಿಂದ ಮುಂದೆಯೂ ಇದೇ ಪದ್ಧತಿ ಮುಂದುವರಿದಿತ್ತು. ಈ ಕುರಿತು ಒತ್ತಾಡ ಹೆಚ್ಚಾದಾಗ, ಬೆಂಗಳೂರಿನ ಶಾಸಕರ ನಿಯೋಗವೊಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿತ್ತು. ಒಸಿ ಇಲ್ಲದೆಯೂ ಶಾಶ್ವತ ವಿದ್ಯುತ್ ಸಂಪರ್ಕ ನೀಡಲು ಅನುಮತಿ ನೀಡಬೇಕು ಎಂದು ಶಾಸಕರು ಕೋರಿದ್ದರು. ಈ ಕುರಿತು ವಿಧಾನ ಮಂಡಲ ಅಧಿವೇಶನದಲ್ಲಿ ಸುನಿಲ್ ಕುಮಾರ್ ಮಾತನಾಡಿ, ಒಸಿ ಇಲ್ಲದೆಯೆ ಸಂಪರ್ಕ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದರು.
ಗೃಹ ಬಳಕೆ ಮತ್ತು ವಾಣಿಜ್ಯ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ಒಸಿ ಕಡ್ಡಾಯ ಪಡಿಸದಂತೆ ರಾಜ್ಯ ಸರ್ಕಾರದ ಇಂಧನ ಇಲಾಖೆಯು ಕೆಇಆರ್‌ಸಿಗೆ 2022ರ ಮಾರ್ಚ್ 30ರಂದು ಪತ್ರ ಬರೆದಿತ್ತು.
ಮೂರು ನಿಯಮಗಳ ತಿದ್ದುಪಡಿ
ವಿದ್ಯುತ್ ಸಂಪರ್ಕ ಪಡೆಯಲು ಅಗತ್ಯವಿದ್ದ ಮೂರು ನಿಯಮಗಳನ್ನು ಕೆಇಆರ್‌ಸಿ ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ. ರಾಜ್ಯಪತ್ರದಲ್ಲಿ ಇದನ್ನು ಪ್ರಕಟಿಸಲಾಗಿದೆ.
ಆತಂಕಗಳೇನು?
ಸ್ವಾಧೀನಾನುಭವ ಪ್ರಮಾಣಪತ್ರ ಇಲ್ಲದೆ ವಿದ್ಯುತ್ ಸಂಪರ್ಕ ನೀಡಬಾರದು ಎಂಬುದಕ್ಕೂ ವಾದಗಳು ಬಲವಾಗಿವೆ. ಬೆಂಗಳೂರಿನಲ್ಲಿ ಈಗಾಗಲೆ ಅಕ್ರಮ ಕಟ್ಟಡ ನಿರ್ಮಾಣ ಭರದಿಂದ ಸಾಗಿದೆ. ಬಿಲ್ಡರ್‌ಗಳು ಬಿಬಿಎಂಪಿಯ ಯಾವುದೇ ನಿಯಮ ಪಾಲನೆ ಮಾಡದೆ ಕಟ್ಟಡ ನಿರ್ಮಾಣ ಮಾಡಿ ಮಾರಾಟ ಮಾಡಿಬಿಡುತ್ತಾರೆ. ಆದರೆ ನಂತರ ಬಿಬಿಎಂಪಿ ಅಧಿಕಾರಿಗಳು ಆಗಮಿಸಿ ದಂಡ ವಿಧಿಸುವುದು, ಕಟ್ಟಡ ನೆಲಸಮ ಮಾಡುವುದು, ನೋಟಿಸ್ ನೀಡುವುದು ನಡೆಯುತ್ತಿರುತ್ತದೆ. ವಿದ್ಯುತ್ ಸಂಪರ್ಕ ಪಡೆಯಲು ಒಸಿ ಕಡ್ಡಾಯ ಮಾಡುವುದರಿಂದ ತಕ್ಕಮಟ್ಟಿಗಾದರೂ ಅಕ್ರಮ ಕಟ್ಟಡಗಳಿಗೆ ಕಡಿವಾಣ ಹಾಕಬಹುದು ಎಂಬ ವಾದವಿದೆ.
ಆದರೆ, ಒಸಿ ನೀಡುವುದು ಹಾಗೂ ಅದನ್ನು ಪಾಲನೆ ಮಾಡುವುದು ಕೆಇಆರ್‌ಸಿ ವ್ಯಾಪ್ತಿಗೆ ಬರುವುದಿಲ್ಲವಾದ್ಧರಿಂದ ವಿದ್ಯುತ್ ಸಂಪರ್ಕ ವಿಚಾರಕ್ಕೆ ಅದನ್ನು ಲಿಂಕ್ ಮಾಡಬಾರದು ಎಂಬ ವಾದ ಬಲವಾಗಿತ್ತು. ಮುಖ್ಯವಾಗಿ ಈ ವಾದದ ಹಿಂದೆ ಕಟ್ಟಡ ಮಾಲೀಕರಿಗಿಂತಲೂ ಬಿಲ್ಡರ್‌ಗಳ ಲಾಬಿ ಇದೆ ಎಂದೂ ಹೇಳಲಾಗುತ್ತದೆ. ಒಟ್ಟಾರೆ ಇದೀಗ ಸರ್ಕಾರದ ಆದೇಶದಿಂದಾಗಿ ಲಕ್ಷಾಂತರ ಕಟ್ಟಡ ಮಾಲೀಕರು ನಿಟ್ಟುಸಿರು ಬಿಟ್ಟಿರುವುದಂತೂ ಸತ್ಯ.
ಇದನ್ನೂ ಓದಿ | ವಿದ್ಯುತ್ ಚಾಲಿತ ವಾಹನಗಳ ದರ ಕಡಿಮೆ ಇರಲಿ: ಉತ್ಪಾದಕರಿಗೆ ಸಿಎಂ ಬೊಮ್ಮಾಯಿ ಕಿವಿಮಾತು