Site icon Vistara News

Odisha Train Accident: ರೈಲ್ವೆ ಸಚಿವರಿಗೆ ಸಿಕ್ತು ಬಲ, ರಾಜೀನಾಮೆ ಕೊಡುವ ಅಗತ್ಯ ಇಲ್ಲ ಅಂದ್ರು ಮಾಜಿ ಪಿಎಂ

HD Deve Gowda

ನವದೆಹಲಿ: ಕಳೆದ ಶುಕ್ರವಾರ ಒಡಿಶಾದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿತ್ತು(Odisha Train Accident). ಈ ಅಪಘಾತದಲ್ಲಿ 275 ಜನರು ಮತೃತಪಟ್ಟು, ಸಾವಿರಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದರು. ಅಪಘಾತಕ್ಕೆ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ (Railway Minister Ashwini Vaishnaw) ನೀಡಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಆದರೆ, ಪ್ರತಿಪಕ್ಷಗಳ ಬೇಡಿಕೆಯನ್ನು ತಳ್ಳಿ ಹಾಕಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು(Former PM HD Deve Gowda), ”ಅಶ್ವಿನಿ ವೈಷ್ಣವ್ ಅವರು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಅವರ ರಾಜೀನಾಮೆ ಕೇಳುವುದು ಒಳ್ಳೆಯ ನಡೆಯಲ್ಲ,” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ರೈಲು ದುರಂತ ಬಳಿಕ ಪರಿಹಾರ ಕಾರ್ಯ; ರೈಲ್ವೆ ಸಚಿವರ ನಡೆ ಅನುಕರಣೀಯ

ಸಂಭವಿಸಿರುವ ಹಾನಿಯನ್ನು ತಪ್ಪಿಸಲು ರೈಲ್ವೆ ಸಚಿವರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಅವರು ಕಳೆದ 55 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ, ನಾನು ನೋಡುತ್ತಿದ್ದೇನೆ. ಸಿಬಿಐ ತನಿಖೆ ವಿಭಿನ್ನ ಸಂಗತಿಯಾಗಿದೆ. ನಾನು ಆ ಕುರಿತು ಪ್ರತಿಕ್ರಿಯಿಸಲು ಹೋಗುವುದಿಲ್ಲ. ಕಾಂಗ್ರೆಸ್ ನಾಯಕರು ಕೆಲವು ನಿಲುವು ತಳೆದಿದ್ದಾರೆ, ರಾಜಕೀಯ ಪ್ರೇರಿತ ದಾಳಿ ಮಾಡಬಾರದು ಎಂಬುದು ನನ್ನ ಉದ್ದೇಶ. ತನಿಖೆ ಪೂರ್ಣಗೊಳಿಸಲಿ, ಸಚಿವರು ತಮ್ಮ ಕೈಲಾದಷ್ಟು ಕೆಲಸ ಮಾಡುತ್ತಿದ್ದಾರೆ. ಈ ಹಂತದಲ್ಲಿ ರಾಜೀನಾಮೆಗೆ ಒತ್ತಾಯಿಸುವುದು ಬುದ್ಧಿವಂತಿಕೆಯಲ್ಲ ಎಂಬ ದೇವೇಗೌಡರ ಹೇಳಿಕೆಯನ್ನು ಉಲ್ಲೇಖಿಸಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಒಡಿಶಾ ರೈಲು ಅಪಘಾತವನ್ನು ಶತಮಾನದ ಅತಿ ದೊಡ್ಡ ದುರಂತ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ. ಆ್ಯಂಟಿ ಕೊಲಿಸಿನ್ ಸಿಸ್ಟಮ್ ಕೊರತೆಯ ಕುರಿತು ತನಿಖೆ ಮಾಡಬೇಕು ಎಂದು ಅವರು ಹೇಳಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಪಕ್ಷವು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆಗೆ ಒತ್ತಾಯಿಸಿದ್ದು ಮಾತ್ರವಲ್ಲದೇ, ಭಾರತೀಯ ರೈಲ್ವೆ ಮೂಲಸೌಕರ್ಯಗಳ ಕೊರತೆಯ ನಡುವೆಯೂ ಎಲ್ಲವೂ ಸಾಮಾನ್ಯವಾಗಿದೆ ಎಂಬ ಭ್ರಮೆಯನ್ನು ಹುಟ್ಟು ಹಾಕಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಅಪಘಾತದ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದು ಹೇಳಿದೆ.

Odisha Train Accident: ಕೋರಮಂಡಲ್ ರೈಲು ಚಾಲಕರ ವಿರುದ್ಧ ಎಫ್ಐಆರ್

275 ಪ್ರಯಾಣಿಕರ ಸಾವಿಗೆ ಕಾರಣವಾದ ರೈಲು ಅಪಘಾತಕ್ಕೆ (Odisha Train Accident) ಕಾರಣ ಏನೆಂದು ಹುಡುಕುವ ಕೆಲಸವನ್ನು ರೈಲ್ವೆ ಇಲಾಖೆ ಮಾಡುತ್ತಿದೆ. ಈ ಮಧ್ಯೆ, ಅಪಘಾತಕ್ಕೀಡಾದ ಗೂಡ್ಸ್ ಹಾಗೂ ಪ್ರಯಾಣಿಕರ ರೈಲು ಚಾಲಕ (loco pilot) ಹಾಗೂ ಸಹಾಯಕ ಚಾಲಕ (assistant) ವಿರುದ್ಧ ಸರ್ಕಾರಿ ರೈಲ್ವೆ ಪೋಲಿಸ್(GRP), ಬಾಲಾಸೋರ್ ಜಿಆರ್‌ಪಿ ಸ್ಟೇಷನ್‌ನಲ್ಲಿ ಎಫ್ಐಆರ್ ದಾಖಲಿಸಿದೆ. ಜತೆಗೆ, ಅಪರಿಚಿತರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಎಫ್‌ಐಆರ್ ಅನ್ನು ಐಪಿಸಿ ಸೆಕ್ಷನ್‌ಗಳು 337/338 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು), 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಮತ್ತು 34 (ಸಾಮಾನ್ಯ ಉದ್ದೇಶ), ಮತ್ತು ರೈಲ್ವೆ ಕಾಯಿದೆಯ ಸೆಕ್ಷನ್ 153/154/175 (ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು) ಅಡಿಯಲ್ಲಿ ದಾಖಲಿಸಲಾಗಿದೆ. ರೈಲು ಅಪಘಾತ ಸಂಭವಿಸಿದ ಮಾರನೇ ದಿನ ಅಂದರೆ, ಜೂನ್ 3 ರಂದು ಎಫ್‌ಐಆರ್ ದಾಖಲಿಸಲಾಗಿದೆ. ಬಾಲಸೋರ್ ಜಿಆರ್‌ಪಿ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಪಾಪು ಕುಮಾರ್ ನಾಯಕ್ ಅವರ ದೂರಿನ ಮೇರೆಗೆ ಎಫ್ಐಆರ್ ಹಾಕಲಾಗಿದೆ.

ಇದನ್ನೂ ಓದಿ: Odisha Train Accident: ರೈಲು ಅಪಘಾತ ಸಂಭವಿಸಿದ ಸ್ಥಳದಲ್ಲಿ ‘ಪ್ರೇಮ ಕವನಗಳು’ ಅನಾಥ!

ಏತನ್ಮಧ್ಯೆ, ಗಾಯಗೊಂಡಿರುವ ಕೋರಮಂಡಲ್ ಎಕ್ಸ್‌ಪ್ರೆಸ್‌ನ ಲೋಕೋ ಪೈಲಟ್ ಗುಣನಿಧಿ ಮೊಹಾಂತಿ ಮತ್ತು ಅವರ ಸಹಾಯಕ ಹಜಾರಿ ಬೆಹೆರಾ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅವರು ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ರೈಲು ಅಪಘಾತವಾಗುತ್ತಿದ್ದಂತೆ ಸ್ಥಳೀಯರು ಮೊಹಾಂತಿ ಮತ್ತು ಬೆಹೆರಾ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version