ಉತ್ತರಕನ್ನಡ: ಅತಿಕ್ರಮಣ ವಿಚಾರದಲ್ಲಿ ತನಿಖೆ ನಡೆಸುತ್ತಿದ್ದ ವನಪಾಲಕ (ಫಾರೆಸ್ಟರ್)ನ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ (Officer Attacked) ನಡೆಸಿದ ಘಟನೆ ಸಿದ್ದಾಪುರ ತಾಲೂಕಿನ ಕಾನಸೂರಿನ ಬಿಳೆಗೋಡು ಗ್ರಾಮದಲ್ಲಿ ನಡೆದಿದೆ.
ಗುರುವಾರ ಬೆಳಗ್ಗೆ ಬಿಳೆಗೋಡ ಗ್ರಾಮಕ್ಕೆ ಅತಿಕ್ರಮಣ ವಿಚಾರದ ತನಿಖೆಯಲ್ಲಿ ತೊಡಗಿದ್ದ ವಿ.ಟಿ. ತಿಮ್ಮಾನಾಯ್ಕ ಎಂಬ ವನಪಾಲಕರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಯಲ್ಲಿ ವನಪಾಲಕನ ಕೈ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದೆ. ಇತ್ತ ವನಪಾಲಕನ ಮೇಲೆ ಹಲ್ಲೆ ಮಾಡಿದ ಬಿಳೆಗೋಡ ಗ್ರಾಮದ ಮಹಾಬಲೇಶ್ವರ ಚಂದು ಮರಾಠಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಮಹಾಬಲೇಶ್ವರ ಈ ಹಿಂದೆ ಸೆರೆವಾಸವನ್ನು ಅನುಭವಿಸಿ ಬಂದಿದ್ದ.
ಅತಿಕ್ರಮಣ ವಿಚಾರಕ್ಕೆ ಫಾರೆಸ್ಟರ್ ಹಾಗೂ ಅರಣ್ಯ ಇಲಾಖೆ ಅಧಿಕಾರಿ ತೆರಳಿದ್ದರು. ಅದೇ ಸಂದರ್ಭದಲ್ಲಿ ಮಹಾಬಲೇಶ್ವರ ಚಂದು ಮರಾಠಿ ಗಲಾಟೆ ಮಾಡಿದ್ದು, ಇವರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಏಕಾಏಕಿ ಸಿಟ್ಟಿಗೆದ್ದ ಮಹಾಬಲೇಶ್ವರ ಕತ್ತಿಯಿಂದ ಇಲಾಖೆ ಅಧಿಕಾರಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಇದನ್ನು ಕಂಡ ವನಪಾಲಕ ವಿ.ಟಿ. ತಿಮ್ಮಾನಾಯ್ಕ ತಡೆಯಲು ಹೋಗಿದ್ದಾರೆ. ಆಗ ಅವರ ಮೇಲೆ ಕತ್ತಿಯಿಂದ ಮಹಾಬಲೇಶ್ವರ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ.
ಪರಿಣಾಮ ಬಲಗೈನ ಎರಡು ಬೆರಳುಗಳು ತುಂಡಾಗಿವೆ. ಅಲ್ಲದೆ ಮೂಳೆ ಭಾಗಕ್ಕೆ ಗಂಭೀರವಾಗಿ ಪೆಟ್ಟಾಗಿದೆ. ಘಟನೆ ನಡೆದ ಕೂಡಲೇ ಶಿರಸಿ ಟಿಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಾಥಮಿಕ ಚಿಕಿತ್ಸೆ ನೀಡಿದ ಟಿಎಸ್ಎಸ್ ಆಸ್ಪತ್ರೆ ವೈದ್ಯರು ಮಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಲು ತಿಳಿಸಿದ್ದಾರೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Viral video | ಚಿಕಾಗೋನಲ್ಲಿ ಭಾರತೀಯನ ಮದುವೆಗೆ ಸೀರೆಯುಟ್ಟು ಬಿಂದಿಯಿಟ್ಟು ಬಂದ ಗೆಳೆಯರು!